ಕೆ.ಬಿ.ಪ್ರಸನ್ನಕುಮಾರ್, ಜೆಡಿಎಸ್ ರಾಜ್ಯ ಉಪಾಧ್ಯಕ್ಷ  
ಜಿಲ್ಲೆ

ಮೈತ್ರಿಧರ್ಮ ಪಾಲನೆಗೆ ಜೆಡಿಎಸ್ ಬದ್ಧ:ಕೆಬಿಪಿ

ಅರವಿಂದ ಅಕ್ಲಾಪುರ

ಶಿವಮೊಗ್ಗ: ಪಾಲಿಕೆ ಚುನಾವಣೆಗೆ ಮತದಾರರ ಪಟ್ಟಿ ಸಿದ್ಧಪಡಿಸುವ ಪ್ರಕ್ರಿಯೆ ಆರಂಭವಾದ ಬೆನ್ನಲ್ಲೇ ರಾಜಕೀಯ ಪಕ್ಷಗಳಲ್ಲೂ ಚುನಾವಣಾ ತಯಾರಿ ಶುರುವಾಗಿದೆ. ಪಾಲಿಕೆ ಚುನಾವಣೆ ಗಮನದಲ್ಲಿಟ್ಟುಕೊಂಡು ಸದಸ್ಯತ್ವ ಅಭಿಯಾನದ ಸಿದ್ಧತೆಯಲ್ಲಿರುವ ಜೆಡಿಎಸ್ ಚುನಾವಣೆಯಲ್ಲಿ ಏಕಾಂಗಿ ಸ್ಪರ್ಧೆಗೂ ಸಿದ್ಧ, ಬಿಜೆಪಿ ಜತೆ ಮೈತ್ರಿಗೂ ಓಕೆ ಎಂದು ಘೋಷಿಸಿದೆ.

ಪಕ್ಷದ ಸ್ಪಷ್ಟ ಅಭಿಪ್ರಾಯವನ್ನು ಬುಧವಾರ ಸುದ್ದಿಗೋಷ್ಠಿಯಲ್ಲಿ ಬಹಿರಂಗಪಡಿಸಿದ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ.ಬಿ.ಪ್ರಸನ್ನಕುಮಾರ್, ಏಕಾಂಗಿಯಾಗಿ ಎಲ್ಲ ವಾರ್ಡ್‌ಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಾವು ಸಿದ್ಧರಿದ್ದೇವೆ. ಅದೇ ವೇಳೆ ಪಕ್ಷದ ವರಿಷ್ಠರು ಸ್ಥಳೀಯ ಸಂಸ್ಥೆಯಲ್ಲೂ ಬಿಜೆಪಿ ಜತೆ ಕೈಜೋಡಿಸಿದರೆ ಮೈತ್ರಿಧರ್ಮ ಪಾಲನೆಗೆ ಬದ್ಧರಿದ್ದೇವೆ ಎಂದು ತಿಳಿಸಿದರು.
ಪಾಲಿಕೆಯ ಚುನಾಯಿತ ಪ್ರತಿನಿಧಿಗಳ ಅವಧಿ ಮುಗಿದು 10 ತಿಂಗಳಾಗಿದೆ. ನಾಗರಿಕರ ಸಮಸ್ಯೆಗಳು ಬಹಳಷ್ಟಿವೆ. ಅಧಿಕಾರಿಗಳು ಜನರಿಗೆ ಸ್ಪಂದಿಸುತ್ತಿಲ್ಲ. ಹೀಗಾಗಿ ತ್ವರಿತವಾಗಿ ಪಾಲಿಕೆಗೆ ಚುನಾವಣೆ ನಡೆಸುವುದು ಅವಶ್ಯ. ಚುನಾವಣೆಯಲ್ಲಿ ಮೈತ್ರಿ ಏರ್ಪಡದೇ ಇದ್ದರೆ ಸ್ವಂತ ಬಲದಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು ಎಂದು ಘೋಷಿಸಿದರು.
ಇಂದಿನಿಂದ ಅಭಿಯಾನ: ನಗರ ಪಾಲಿಕೆ ಚುನಾವಣೆ ಘೋಷಣೆಯಾಗುವ ಸಾಧ್ಯತೆಗಳಿರುವ ಹಿನ್ನಲೆಯಲ್ಲಿ ಪಕ್ಷದ ಸದಸ್ಯತ್ವ ಅಭಿಯಾನಕ್ಕೆ ಆ. 29ರ ಬೆಳಗ್ಗೆ 11ಕ್ಕೆ ವಿನೋಬನಗರದ ವೀರಭದ್ರೇಶ್ವರ ದೇವಸ್ಥಾನದಿಂದ ಚಾಲನೆ ನೀಡಲಾಗುವುದು. ಹೊಸದಾಗಿ 30 ಸಾವಿರ ಸದಸ್ಯರ ನೊಂದಣಿ ಗುರಿಯಿದೆ ಎಂದು ಜೆಡಿಎಸ್ ನಗರಾಧ್ಯಕ್ಷ ದೀಪಕ್ ಸಿಂಗ್ ತಿಳಿಸಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಕಡಿದಾಳ್ ಗೋಪಾಲ್, ಪ್ರಮುಖರಾದ ಕೆ.ಎನ್.ರಾಮಕೃಷ್ಣ, ನರಸಿಂಹ ಗಂಧದಮನೆ, ಸಿದ್ದಪ್ಪ, ಎಚ್.ಎಂ.ಸಂಗಯ್ಯ, ವಿನಯ್, ಗೋಪಿ, ಮಾಧವಮೂರ್ತಿ, ಜಯಣ್ಣ, ರಘು ಬಾಲರಾಜ್, ಶ್ಯಾಮ್, ಸಂಜಯ್ ಕಶ್ಯಪ್ ಸುದ್ದಿಗೋಷ್ಠಿಯಲ್ಲಿದ್ದರು.