ಬೆಟ್ಟದಪುರ: ಜೆಡಿಎಸ್‌ಗೆ ಯಾವುದೇ ತತ್ವ-ಸಿದ್ಧಾಂತಗಳಿಲ್ಲ, ಆ ಪಕ್ಷದವರು ಸಮಯ ಬಂದಾಗ ಅಧಿಕಾರಕ್ಕಾಗಿ ಬೇಕಾದವರ ಜತೆ ಮೈತ್ರಿ ಮಾಡಿಕೊಳ್ಳುತ್ತಾರೆ ಎಂದು ಪಶು ಸಂಗೋಪನಾ ಹಾಗೂ ರೇಷ್ಮೆ ಸಚಿವ ಕೆ.ವೆಂಕಟೇಶ್ ಟೀಕಿಸಿದರು.
ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಸಮೀಪದ ಚಪ್ಪರದಹಳ್ಳಿ ಗ್ರಾಮದಲ್ಲಿ ಶುಕ್ರವಾರ ಸಂಜೆ ಆಯೋಜಿಸಿದ್ದ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿ, ಬಿಜೆಪಿ ಕೋಮುಗಲಭೆಗಳ ಮೂಲಕ ದೇಶದಲ್ಲಿ ಅಶಾಂತಿ ಸೃಷ್ಟಿ ಮಾಡುತ್ತಿದ್ದು, ಬಡಜನರ ಅಭಿವೃದ್ಧಿ ಬಗ್ಗೆ ಯೋಚಿಸಿದ ವಿರೋಧಿ ಪಕ್ಷವಾಗಿದೆ. ಈಗಿನ ಬಿಜೆಪಿ ಅಭ್ಯರ್ಥಿ ಯದುವೀರ್ ಅವರು ಅರಮನೆಯಲ್ಲಿಯೇ ಇರುತ್ತಾರೆ. ಸಾರ್ವಜನಿಕರು ಅವರನ್ನು ನೋಡಲು ಕೂಡ ಟಿಕೆಟ್ ತೆಗೆದುಕೊಂಡು ಹೋಗವ ಸ್ಥಿತಿ ಉಂಟಾಗುತ್ತದೆ. ಅದಕ್ಕಾಗಿ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡಿ ಗೆಲ್ಲಿಸುವ ಮೂಲಕ ದೇಶದ ಅಭಿವೃದ್ಧಿಗೆ ಹೆಚ್ಚಿನ ನೀಡಬೇಕು ಎಂದರು.
ಕಾಂಗ್ರೆಸ್ ಯುವನಾಯಕಿ ನಜ್ಮಾ ನಜೀರ್ ಚಿಕ್ಕನೇರಳೆ ಮಾತನಾಡಿ, ಜೆಡಿಎಸ್ ನಾಯಕರು ಮಾತಿಗೆ ಮಾತ್ರ ಮಣ್ಣಿನ ಮಕ್ಕಳು ಎಂದು ಬಿಗಿಯುತ್ತಾರೆ ಹೊರತು ನಿಜವಾಗಿಯೂ ಅಲ್ಲಿ ಯಾರು ಮಣ್ಣಿನ ಮಕ್ಕಳಿಲ್ಲ. ಹಿಂದಿನ ಬಿಜೆಪಿ ಸಂಸದರು ತಂಬಾಕು ಬೆಳೆಗಾರರ ಪರವಾಗಿ ಕೆಲಸ ಮಾಡಿಲ್ಲದೆ ಇರುವ ಸಾಕಷ್ಟು ಉದಾಹರಣೆಗಳು ಇವೆ. ಪ್ರತಿಯೊಬ್ಬರ ಪರವಾಗಿ ಮಾತನಾಡಿ ಹೋರಾಡುವ ನಮ್ಮ ಪಕ್ಷದ ಅಭ್ಯರ್ಥಿ ಲಕ್ಷ್ಮಣ್ ಅವರಿಗೆ ಮತ ನೀಡಿ ಗೆಲ್ಲಿಸಬೇಕು ಮಾತಯಾಚಿಸಿದರು.
ಅಭ್ಯರ್ಥಿ ಎಂ.ಲಕ್ಷ್ಮಣ್ ಮಾತನಾಡಿ, ಈ ಹಿಂದೆ ರಾಜ್ಯದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ನೀಡಿದಂತಹ ಐದು ಗ್ಯಾರಂಟಿ ಯೋಜನೆಗಳನ್ನು ಕೊಟ್ಟ ಮಾತಿನಂತೆ ನುಡಿದು ಜಾರಿ ಮಾಡಲಾಗಿದೆ. ಈಗ ಮತ್ತೆ ಜನರಿಗಾಗಿ ವಿಶೇಷ ಯೋಜನೆಗಳನ್ನು ರೂಪಿಸಿದ್ದು, ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಇವೆಲ್ಲ ಜಾರಿಯಾಗಲಿವೆ. ಪ್ರತಿಯೊಬ್ಬರು ನನಗೆ ಮತ ನೀಡುವ ಮೂಲಕ ಕಾಂಗ್ರೆಸ್ ಬೆಂಬಲಿಸಿ ಎಂದರು.
ಆಶ್ರಯ ಸಮಿತಿ ಅಧ್ಯಕ್ಷ ನಿತೀನ್ ವೆಂಕಟೇಶ್, ಮೈಸೂರು ಜಿಲ್ಲಾ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಟಿ.ಸ್ವಾಮಿ, ರಹಮತ್ ಜಾನ್ ಬಾಬು ಸೇರಿದಂತೆ ಗ್ರಾಮದ ಮುಖಂಡರು ಕಾರ್ಯಕರ್ತರು ಇದ್ದರು.