ಜಿಲ್ಲೆ

ಜೆಡಿಎಸ್‌ನವರು ಆರ್‌ಎಸ್‌ಎಸ್ ಜತೆ ಸೇರಿದರೂ ಸೇರಬಹುದು: ಮಾಜಿ ಸಿಎಂ ಸಿದ್ದರಾಮಯ್ಯ ಲೇವಡಿ

ರಮೇಶ್​ ಕುಮಾರ್​​ ಬಿ ಎಡಮೋಳೆ

ಬೆಂಗಳೂರು: ಜೆಡಿಎಸ್ ಅವಕಾಶವಾದಿ ಪಕ್ಷ. ಸ್ವಾರ್ಥ, ಅಧಿಕಾರಕ್ಕೆ ಬಿಜೆಪಿ ಜತೆಯೂ ಹೋಗುತ್ತಾರೆ. ಆರ್‌ಎಸ್‌ಎಸ್ ಜತೆ ಸೇರಿದ್ರೂ ಸೇರಬಹುದು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಲೇವಡಿ ಮಾಡಿದರು.

ಕೆಪಿಸಿಸಿ ಕಚೇರಿಯಲ್ಲಿ ಜೆಡಿಎಸ್ ವಕ್ತಾರರಾಗಿದ್ದ ವಿಧಾನ ಪರಿಷತ್ ಮಾಜಿ ಸದಸ್ಯ ರಮೇಶ್ ಬಾಬು ಅವರ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಜೆಡಿಎಸ್ ಜಾತ್ಯತೀತ ಪಕ್ಷ ಎಂದು ಹೇಳಿಕೊಳ್ಳುತ್ತಿದೆ. ಆದರೆ, ಜೆಡಿಎಸ್ ನಾಯಕರು ಸ್ವಾರ್ಥ ಇರುವವರು. ಅವರು ಸ್ವಾರ್ಥಕ್ಕಾಗಿ ಯಾರ ಜತೆ ಬೇಕಾದರೂ ಸೇರುತ್ತಾರೆ. ಅವರಿಗೆ ಯಾವುದೇ ತತ್ವ, ಸಿದ್ಧಾಂತ ಇಲ್ಲ ಎಂದು ಟೀಕಿಸಿದರು. ದೇಶದ ಜಿಡಿಪಿ ಶೇ.24 ಕಡಿತವಾಗಿದೆ. ಈ ಬಗ್ಗೆ ಯಾರೂ ಮಾತನಾಡುವುದಿಲ್ಲ. ಯಡಿಯೂರಪ್ಪ ಅಧಿಕಾರಕ್ಕೆ ಬಂದು ಎರಡು ವರ್ಷವಾಗಿಲ್ಲ. 53ಸಾವಿರ ಕೋಟಿ ಅಲ್ಲದೆ, 33ಸಾವಿರ ಕೋಟಿ ರೂ. ಸಾಲ ಮಾಡಿದ್ದಾರೆ. ಇನ್ನೆರಡು ವರ್ಷ ಅಧಿಕಾರದಲ್ಲಿ ಮುಂದುವರಿದರೆ ಇನ್ನೂ 1.50 ಲಕ್ಷ ಕೋಟಿ ರೂ. ಸಾಲ ಮಾಡಿ ಆರ್ಥಿಕ ವ್ಯವಸ್ಥೆಯನ್ನೇ ಹಾಳು ಮಾಡುತ್ತಾರೆ ಎಂದು ಹರಿಹಾಯ್ದರು.

ಸಿಎಂ ಖಾಲಿ ಜೇಬಲ್ಲಿ ಬಂದಿದ್ದಾರೆ:

ಸಿಎಂ ಯಡಿಯೂರಪ್ಪ ದೆಹಲಿಗೆ ಹೋಗಿ ಖಾಲಿ ಜೇಬಲ್ಲಿ ವಾಪಸ್ ಬಂದಿದ್ದಾರೆ. ಪ್ರಧಾನಿ, ಹಣಕಾಸು ಸಚಿವರೂ ಹಣ ಕೊಡಲಿಲ್ಲ. ಕೊಡುವ ಭರವಸೆಯನ್ನೂ ನೀಡಿಲ್ಲ. ನಿಮಗೆ ಹೆದರಿಕೆ ಆದರೆ ನಮ್ಮನ್ನು ಕರೆದುಕೊಂಡು ಹೋಗು ಎಂದಿದ್ದೆ. ಆದರೆ, ಅವರು ತಮ್ಮ ಪಕ್ಷದ ಸಂಸದರನ್ನೂ ಕರೆದೊಯ್ಯಲಿಲ್ಲ ಎಂದು ವ್ಯಂಗ್ಯವಾಡಿದರು.

ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡಿರುವ ರಮೇಶ್ ಬಾಬು ಒಬ್ಬ ಸಂಘಟನಕಾರ. ನಾನು ಜೆಡಿಎಸ್‌ನಲ್ಲಿದ್ದಾಗ ಅವರನ್ನು ಪ್ರಧಾನ ಕಾರ್ಯದರ್ಶಿ ಮಾಡಿದ್ದೆ. ಯಾವುದೇ ಪಕ್ಷದಲ್ಲಿದ್ದರೂ ಆ ಪಕ್ಷದ ತತ್ವ ಸಿದ್ಧಾಂತಕ್ಕೆ ಅನುಗುಣವಾಗಿ ನಿಷ್ಠೆಯಿಂದ ಕೆಲಸ ಮಾಡುತ್ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ದೇವೇಗೌಡರೂ ಕಾಂಗ್ರೆಸ್‌ನಲ್ಲಿದ್ದರು:

ಕಾಂಗ್ರೆಸ್ ಎಲ್ಲ ಪಕ್ಷಗಳಿಗೆ ತಾಯಿ ಇದ್ದ ಹಾಗೆ. ಬಹುತೇಕ ಎಲ್ಲ ಪಕ್ಷದ ನಾಯಕರೂ ಕಾಂಗ್ರೆಸ್‌ನಲ್ಲಿ ಇದ್ದು ಹೋದವರು. ದೇವೇಗೌಡರೂ ಕಾಂಗ್ರೆಸ್‌ನಲ್ಲಿದ್ದರು. ಕಾಂಗ್ರೆಸ್‌ನಿಂದ ತಾಲೂಕು ಬೋರ್ಡ್ ಮೇಂಬರ್ ಆಗಿದ್ದವರು. ವಿಧಾನಸಭೆಗೆ ಟಿಕೆಟ್ ಸಿಗಲಿಲ್ಲ ಎಂದು ಪಕ್ಷೇತರ ಅಭ್ಯರ್ಥಿಯಾದರು ಎಂದರು.

ಬಿಜೆಪಿ ಸರ್ಕಾರ ದೇಶದ ಜನರ ಆರೋಗ್ಯ ಮತ್ತು ಆರ್ಥಿಕತೆ ಹಾಳು ಮಾಡುತ್ತಿದೆ. 21 ದಿನಗಳಲ್ಲಿ ಕರೊನಾ ಮುಗಿಸುತ್ತೇನೆ ಎಂದು ಮೋದಿ ಹೇಳಿದ್ದರು. ಈಗ ಎಲ್ಲಿದ್ದಿಯಪ್ಪದ್ಯ ನರೇಂದ್ರ ಮೋದಿ ಎಂದು ಕೇಳಿದರೆ ನವಿಲಿಗೆ ಕಾಳು ಹಾಕುತ್ತಾ ಕುಳಿತಿದ್ದಾರೆ ಎಂದು ವ್ಯಂಗ್ಯವಾಡಿದರು.

ಪ್ಯಾಕೇಜ್ ಹಣ ಎಲ್ಲಿ ಹೋಯಿತು?:

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮಾತನಾಡಿ, ಕೇಂದ್ರ ಸರ್ಕಾರ ಕರೊನಾ ಸಂದರ್ಭದಲ್ಲಿ 20 ಲಕ್ಷ ಕೋಟಿ ರೂ. ಪ್ಯಾಕೇಜ್ ೋಷಿಸಿದೆ. ಈ ಹಣ ನಮ್ಮ ರಾಜ್ಯದಲ್ಲಿ ಯಾರಿಗೆ ತಲುಪಿದೆ? ಎಷ್ಟು ತಲುಪಿದೆ ಎಂಬುದನ್ನು ಹೇಳಬೇಕು. ಅದೇ ರೀತಿ ಯಡಿಯೂರಪ್ಪ ಕೂಡ 1,600 ಕೋಟಿ ಪ್ಯಾಕೇಜ್ ಘೋಷಣೆ ಮಾಡಿದ್ದರು. ಅದು ಯಾವ ಯಾವ ಸಮುದಾಯಕ್ಕೆ ಸಿಕ್ಕಿದೆ. ಎಷ್ಟು ಮಂದಿಗೆ ತಲುಪಿದೆ ಎಂಬುದನ್ನು ಅಧಿವೇಶನದ ಆರಂಭದ ದಿನ ಹೇಳಬೇಕು ಎಂದು ಆಗ್ರಹಿಸಿದರು.

ಪ್ರಧಾನಿ ಭೇಟಿಗೆ ಸರ್ವ ಪಕ್ಷ ನಿಯೋಗ ಕರೆದುಕೊಂಡು ಹೋಗುವಂತೆ ನಾವು ಮನವಿ ಮಾಡಿದ್ದೇವೆ. ನಮ್ಮನ್ನಿರಲಿ ಅವರ ಪಕ್ಷದ ಸಂಸದರನ್ನೇ ಕರೆದುಕೊಂಡು ಹೋಗಿಲ್ಲ ಎಂದು ಲೇವಡಿ ಮಾಡಿದರು.

ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡ ರಮೇಶ್ ಬಾಬು ಮಾತನಾಡಿದರು. ಮುಖಂಡರಾದ ಬಿ.ಕೆ.ಹರಿಪ್ರಸಾದ್, ಬಿ.ಎಲ್.ಶಂಕರ್, ಸಲೀಂ ಅಹಮದ್, ವಿ.ಆರ್.ಸುದರ್ಶನ್ ಮತ್ತಿತರರು ಉಪಸ್ಥಿತರಿದ್ದರು.