ತುಮಕೂರು
ವಿಧಾನಸಭಾ ಚುನಾವಣೆ ಕಾವು ಜಿಲ್ಲೆಯಲ್ಲಿ ಏರತೊಡಗಿದ್ದು ಈಗಾಗಲೇ ಆಣೆ-ಪ್ರಮಾಣ ರಾಜಕೀಯ ಆರಂಭವಾಗಿದೆ.
ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಸಂಭಾವ್ಯ ಅಭ್ಯರ್ಥಿ ಎನ್.ಗೋವಿಂದರಾಜು ಮತದಾರರನ್ನು ಸೆಳೆಯಲು ಆಣೆ-ಪ್ರಮಾಣ ಮಾಡಿಸುತ್ತಿರುವುದಾಗಿ ಜಿಲ್ಲಾ ಚುನಾವಣಾಧಿಕಾರಿಯು ಆದ ಜಿಲ್ಲಾಧಿಕಾರಿಗೆ ಬಿಜೆಪಿ ನಗರ ಮಂಡಲದ ವತಿಯಿಂದ ದೂರು ನೀಡಲಾಗಿದೆ.
ಗೋವಿಂದರಾಜು ವಿರುದ್ಧ ದೂರು: ಕಳೆದ ವಿಧಾನಸಭಾ ಚುನಾವಣೆಯ ಜೆಡಿಎಸ್ ಪರಾಜಿತ ಅಭ್ಯರ್ಥಿ ಗೋವಿಂದರಾಜು ಮುಗ್ಧ ಹೆಣ್ಣುಮಕ್ಕಳ ಭಾವನೆಯನ್ನು ರಾಜಕೀಯ ಅಧಿಕಾರಕ್ಕಾಗಿ ಬಂಡವಾಳವಾಗಿಸಿಕೊಂಡು, ಆದಿಶಕ್ತಿ ಎತ್ತೇನಹಳ್ಳಿ ಮಾರಮ್ಮ ಹಾಗೂ ಮಧುಗಿರಿಯ ದಂಡಿನ ಮಾರಮ್ಮ ದೇವಸ್ಥಾನಗಳಿಗೆ ಕರೆದೊಯ್ಯದು ಅಲ್ಲಿ ಆಣೆ ಪ್ರಮಾಣ ಮಾಡಿಸುತ್ತಿದ್ದಾರೆ. ಜತೆಗೆ ಮಾಂಗಲ್ಯದ ಮೇಲೂ ಆಣೆ ಮಾಡಿಸುತ್ತಿದ್ದಾರೆ. ಅಲ್ಲದೆ, ಗರ್ಭಿಣಿಯರಿಗೆ ಹೊಟ್ಟೆಯಲ್ಲಿನ ಮಗುವಿನ ಮೇಲೆ ಆಣೆ ಪ್ರಮಾಣ ಮಾಡಿಸುವ ಕ್ರೂರತನ ಮೆರೆಯುತ್ತಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿರುವ ನಗರಾಧ್ಯಕ್ಷ ಟಿ.ಎಚ್.ಹನುಮಂತರಾಜು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲಕುಮಾರ್ ಶಹಾಪೂರವಾಡ್‌ಗು ದೂರು ನೀಡಿದ್ದಾರೆ.