ಮಂಡ್ಯ: ಲೋಕಸಭಾ ಚುನಾವಣೆ ಸಂಬಂಧ ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಕರಪತ್ರ ಮುದ್ರಿಸಿ ಹಂಚುತ್ತಿರುವ ಆರೋಪಕ್ಕೆ ಸಂಬಂಧಿಸಿದಂತೆ ಜಾಗೃತ ಮತದಾರರ ವೇದಿಕೆ ವಿರುದ್ಧ ಜೆಡಿಎಸ್ ಮಂಗಳವಾರ ಜಿಲ್ಲಾ ಚುನಾವಣಾಧಿಕಾರಿಗೆ ದೂರು ಸಲ್ಲಿಸಿದೆ.
ಮಂಡ್ಯ ಕ್ಷೇತ್ರದಲ್ಲಿ ಎಚ್.ಡಿ.ಕುಮಾರಸ್ವಾಮಿ ಏಕೆ ಸೋಲಬೇಕೆಂದು ನೂರಾರೂ ಕಾರಣಗಳೆಂದು ಮುದ್ರಿಸಿ, ಅದರಲ್ಲಿ ಬುದ್ಧ, ಬಸವಣ್ಣ, ಅಂಬೇಡ್ಕರ್ ಹಾಗೂ ಕುವೆಂಪು ಅವರ ಭಾವಚಿತ್ರವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. ಜತೆಗೆ ಕರಪತ್ರ ಹಂಚಿಕೆ ಮಾಡಿ ಮತಯಾಚನೆ ಮಾಡಲಾಗುತ್ತಿದೆ. ಈ ಮೂಲಕ ಚುನಾವಣಾ ಆಯೋಗದ ನಿರ್ದೇಶನವನ್ನು ಗಾಳಿಗೆ ತೂರಿ ಸುಳ್ಳು ಕರಪತ್ರವನ್ನು ಹಂಚುತ್ತಿರುವುದು ಮಾದರಿ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿದೆ. ಆದ್ದರಿಂದ ವೇದಿಕೆ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುವುದರ ಜತೆಗೆ ಕರಪತ್ರ ಹಂಚುವುದನ್ನು ತಡೆಯಬೇಕೆಂದು ಜೆಡಿಎಸ್ ಕಾನೂನು ವಿಭಾಗದ ಪ್ರಧಾನ ಕಾರ್ಯದರ್ಶಿ ಎಸ್.ಪಿ.ಪ್ರದೀಪ್‌ಕುಮಾರ್ ದೂರಿನಲ್ಲಿ ತಿಳಿಸಿದ್ದಾರೆ.