ಜಿಲ್ಲೆ

ಪ್ರೀತಂಗೌಡ ಪರ ಘೋಷಣೆ ಕೂಗಿದ್ದಕ್ಕೆ ಆಕ್ರೋಶ:  ಜೆಡಿಎಸ್, ಬಿಜೆಪಿ ಕಾರ್ಯಕರ್ತರ ಗಲಾಟೆ

ಕೆ.ಎನ್.ರಾಘವೇಂದ್ರ
ಮಂಡ್ಯ: ವಾಲ್ಮೀಕಿ ನಿಗಮದಲ್ಲಾಗಿರುವ ಹಗರಣ ಹಾಗೂ ಮುಡಾದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದ ವಿರುದ್ಧ ನಡೆಯುತ್ತಿರುವ ಮೈಸೂರು ಚಲೋ ಪಾದಯಾತ್ರೆ ವೇಳೆ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ಗಲಾಟೆ ನಡೆಯಿತು. ಪರಿಣಾಮ ನಾಯಕರಿಗೆ ತೀವ್ರ ಮುಜುಗರ ಉಂಟಾಗುವಂತಾಯಿತು.
ಪಾದಯಾತ್ರೆಯ ಎರಡನೇ ದಿನವಾದ ಬುಧವಾರ ಮಂಡ್ಯ ನಗರದಲ್ಲಿ ನಡೆಯಿತು. ಹೊರವಲಯದಿಂದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಬಿ.ವೈ.ವಿಜಯೇಂದ್ರ ಹಾಗೂ ನಿಖಿಲ್ ಕುಮಾರಸ್ವಾಮಿ ವಾಹನದ ಮೇಲೆ ಬರುತ್ತಿದ್ದರು. ಈ ವೇಳೆ ಷುಗರ್ ಫ್ಯಾಕ್ಟರಿ ವೃತ್ತಕ್ಕೆ ಬಂದಾಗ ಹಾಸನದ ಮಾಜಿ ಶಾಸಕ ಪ್ರೀತಂ ಗೌಡ ಕೂಡ ಆಗಮಿಸಿದರು. ಅಂತೆಯೇ ಹಾಸನ ಹಾಗೂ ಮೈಸೂರು ಭಾಗದ ಬಿಜೆಪಿ ಕಾರ್ಯಕರ್ತರು ಪ್ರೀತಂ ಗೌಡ ಪರ ಘೋಷಣೆ ಕೂಗಿದರು. ಗೌಡರ ಗೌಡ ಪ್ರೀತಂ ಗೌಡ ಎಂದು ಜೈಕಾರ ಮೊಳಗಿಸಿದರು. ಇದರಿಂದಾಗಿ ಕೆಲ ಕಾಲ ಜೆಡಿಎಸ್ ನಾಯಕರು ಹಾಗೂ ಕಾರ್ಯಕರ್ತರು ವಿಚಲಿತಗೊಂಡರು. ಆದಾಗ್ಯೂ ಪ್ರೀತಂ ಗೌಡ ಪರ ಜೈಕಾರ ಕೂಗುತ್ತಲೇ ಇದ್ದ ಕಾರಣ ದಳದ ಕಾರ್ಯಕರ್ತರ ಕೋಪವನ್ನು ಹೆಚ್ಚಿಸಿತು. ಪರಿಣಾಮ ಬಿಜೆಪಿ ಕಾರ್ಯಕರ್ತರೊಂದಿಗೆ ಕೈಕೈ ಮಿಲಾಯಿಸುವ ಹಂತಕ್ಕೂ ಹೋಯಿತು. ಮಾತ್ರವಲ್ಲದೆ ತಳ್ಳಾಟ ನೂಕಾಟವೂ ನಡೆಯಿತು. ವಾಗ್ವಾದ ಜೋರಾಗುತ್ತಿದ್ದನ್ನು ಅರಿತ ಜೆಡಿಎಸ್ ನಾಯಕರು ಇದಕ್ಕೆಲ್ಲ ತಲೆಕೆಡಿಸಿಕೊಳ್ಳದೇ ಸುಮ್ಮನಿರುವಂತೆ ಸಲಹೆ ನೀಡಿದರು. ಆದರೂ ಮಾತಿನ ಚಕಮಕಿ ನಡೆಯುತ್ತಲೇ ಇತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಇದಾದ ಕೆಲವೇ ನಿಮಿಷದಲ್ಲಿ ಪ್ರೀತಂ ಗೌಡ ಸ್ಥಳದಿಂದ ಹೊರಟು ಹೋದರು.
ಬೂದಿ ಮುಚ್ಚಿದ ಕೆಂಡದ ಪರಿಸ್ಥಿತಿ
ಪಾದಯಾತ್ರೆ ಆರಂಭಕ್ಕೂ ಮೊದಲೇ ಪ್ರೀತಂ ಗೌಡ ವಿಚಾರಕ್ಕೆ ಸಂಬಂಧಿಸಿದಂತೆ ಎಚ್‌ಡಿಕೆ ಮಾತನಾಡಿದ್ದರು. ಮಾತ್ರವಲ್ಲದೆ ಆತನ ಉಸ್ತುವಾರಿಯಲ್ಲಿ ನಡೆಯುವ ಪಾದಯಾತ್ರೆಗೆ ಬರುವುದಿಲ್ಲವೆಂದು ಘೋಷಣೆ ಮಾಡಿದ್ದರು. ಬಳಿಕ ಬಿಜೆಪಿ ನಾಯಕರ ಸಂಧಾನದ ಬಳಿಕ ಒಪ್ಪಿಗೆ ನೀಡಿ ಭಾಗವಹಿಸಿದ್ದಾರೆ. 
ಹಾಗೆಂದ ಮಾತ್ರಕ್ಕೆ ಎಲ್ಲವೂ ಸರಿಯಾಗಿದೆ ಎನ್ನುವಂತಿಲ್ಲ. ಪಾದಯಾತ್ರೆ ಸಂಬಂಧ ಎರಡು ಪಕ್ಷದಿಂದಲೂ ದಾರಿಯುದ್ದಕ್ಕೂ ಫ್ಲೆಕ್ಸ್‌ಗಳನ್ನು ಹಾಕಲಾಗಿದೆ. ರಾಜ್ಯದ ಘಟಾನುಘಟಿ ನಾಯಕರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ. ಆದರೆ ಪ್ರೀತಂ ಗೌಡ ಭಾವಚಿತ್ರ ಹೆಚ್ಚಾಗಿ ಕಾಣಿಸುತ್ತಿಲ್ಲ. ಇದು ಬಿಜೆಪಿ ಕಾರ್ಯಕರ್ತರು ಹಾಗೂ ಪ್ರೀತಂ ಗೌಡ ಅವರ ಬೆಂಬಲಿಗರ ಆಕ್ರೋಶಕ್ಕೆ ಕಾರಣವಾಗಿದೆ. ಒಟ್ಟಾರೆ ಈ ವಿಚಾರದಲ್ಲಿ ಬೂದಿ ಮುಚ್ಚಿದ ಕೆಂಡದ ಪರಿಸ್ಥಿತಿ ಇದೆ.