ಜಿಲ್ಲೆ

ಸಕ್ಕರೆನಾಡಿಗೆ ದೋಸ್ತಿ ಪಾದಯಾತ್ರೆ ಪ್ರವೇಶ: ನಾಳೆಯಿಂದ ಮೂರು ದಿನ ರ್ಯಾಲಿ

ಕೆ.ಎನ್.ರಾಘವೇಂದ್ರ

ಮಂಡ್ಯ: ಮೈಸೂರಿನ ಮುಡಾದಲ್ಲಿ ನಡೆದಿದೆ ಎನ್ನಲಾದ ಹಗರಣ ಹಾಗೂ ವಾಲ್ಮೀಕಿ ನಿಗಮದಲ್ಲಾಗಿರುವ ಅವ್ಯವಹಾರ ವಿರುದ್ಧ ಜೆಡಿಎಸ್ ಮತ್ತು ಬಿಜೆಪಿ ನಡೆಸುತ್ತಿರುವ ‘ಮೈಸೂರು ಚಲೋ’ ಪಾದಯಾತ್ರೆ ಆ.5ರಂದು ರಾತ್ರಿ ಜಿಲ್ಲೆಗೆ ಪ್ರವೇಶ ಪಡೆಯಲಿದೆ.

ಬೆಂಗಳೂರಿನಿಂದ ನಡೆಯುತ್ತಿರುವ ಪಾದಯಾತ್ರೆಗೆ ಈಗಾಗಲೇ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ವ್ಯಾಪ್ತಿಯಲ್ಲಿಯೂ ಯಶಸ್ವಿಗೊಳಿಸಲು ಮೈತ್ರಿ ಪಕ್ಷದ ನಾಯಕರು ಟೊಂಕಕಟ್ಟಿ ನಿಂತಿದ್ದಾರೆ. ಅದರಂತೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಪಾದಯಾತ್ರೆ ಬರುವ ಮುನ್ನವೇ ಜಿಲ್ಲೆಯ ಮದ್ದೂರಿನಲ್ಲಿ ಕಾಂಗ್ರೆಸ್ ಜನಾಂದೋಲನಾ ಸಮಾವೇಶ ಆಯೋಜಿಸಿ ಶಕ್ತಿ ಪ್ರದರ್ಶನ ಮಾಡಿದೆ. ಅಂತೆಯೇ ಆ.6ರಂದು ಮಂಡ್ಯ ನಗರದಲ್ಲಿ ಹಮ್ಮಿಕೊಂಡಿರುವ ಸಮಾವೇಶವನ್ನೂ ಅದ್ಧೂರಿಯನ್ನಾಗಿಸಲು ಸಿದ್ಧತೆ ನಡೆದಿದೆ.

ಪಾದಯಾತ್ರೆಗೆ ಚಾಲನೆ ಇಂದು: ಆ.5ರಂದು ಮದ್ದೂರು ತಾಲೂಕು ನಿಡಘಟ್ಟ ಬಳಿಕ ಕಲ್ಯಾಣಮಂಟಪಕ್ಕೆ ಪಾದಯಾತ್ರೆ ಆಗಮಿಸಿದೆ. 6ರಂದು ಬೆಳಗ್ಗೆ 8ಗಂಟೆಗೆ ಪುನರ್‌ಆರಂಭವಾಗಲಿದ್ದು, 11ಗಂಟೆಗೆ ಮದ್ದೂರು ಪಟ್ಟಣದಲ್ಲಿ ಸಾರ್ವಜನಿಕ ಸಭೆ ಇರಲಿದೆ. ಮಧ್ಯಾಹ್ನ 1.30ರಿಂದ 2ರವರೆಗೆ ಪಟ್ಟಣದ ಹೊರವಲಯದ ಕಲ್ಯಾಣಮಂಟಪದಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ. ಬಳಿಕ ಮುಂದುವರೆಯಲಿರುವ ಪಾದಯಾತ್ರೆ 8ಗಂಟೆಗೆ ಮಂಡ್ಯ ವಿಧಾನಸಭಾ ಕ್ಷೇತ್ರದ ಶಶಿಕಿರಣ ಕನ್ವೆನ್ಷಲ್ ಹಾಲ್‌ನಲ್ಲಿ ಮುಕ್ತಾಯವಾಗಲಿದ್ದು, ಅಲ್ಲಿಯೇ ವಾಸ್ಯವ್ಯವಿರಲಾಗುವುದು. ಮೊದಲ ದಿನ 20 ಕಿ.ಮೀ ಸಾಗಲಿದೆ

7ರಂದು ಬೆಳಗ್ಗೆ 8ಗಂಟೆಗೆ ಶಶಿಕಿರಣ ಕನ್ವೆನ್ಷಲ್ ಹಾಲ್‌ನಿಂದ ಪಾದಯಾತ್ರೆ ಮುಂದುವರೆಯಲಿದ್ದು, ಬೆಳಗ್ಗೆ 11ಗಂಟೆಗೆ ಮಂಡ್ಯದಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ. ಮಧ್ಯಾಹ್ನ 1.30ಕ್ಕೆ ನಗರದ ಕಲ್ಲಹಳ್ಳಿಯ ಕಲ್ಯಾಣ ಮಂಟಪದಲ್ಲಿ ಊಟದ ವ್ಯವಸ್ಥೆಯಾಗಿದ್ದು, ಬಳಿಕ ಪಾದಯಾತ್ರೆ ಮುಂದುವರೆಯಲಿದೆ. ರಾತ್ರಿ 8ಗಂಟೆಗೆ ತೂಬಿನಕೆರೆ ಕೈಗಾರಿಕೆ ವಲಯದಲ್ಲಿ ವಾಸ್ಯವ್ಯ ಹೂಡಲಿದ್ದು, ಎರಡನೇ ದಿನ ಒಟ್ಟಾರೆ 16 ಕಿ.ಮೀ ಪಾದಯಾತ್ರೆ ಇರಲಿದೆ. 8ರಂದು ಬೆಳಗ್ಗೆ 8ಗಂಟೆಗೆ ಪಾದಯಾತ್ರೆಗೆ ಮತ್ತೆ ಚಾಲನೆ ಸಿಗಲಿದೆ. ಮಧ್ಯಾಹ್ನ 1.30ಕ್ಕೆ ಗೌಡಹಳ್ಳಿ ಸಮೀಪ ಊಟ ಮುಗಿಸಿ, ಪಾದಯಾತ್ರೆ ಮುಂದುವರೆಯಲಿದೆ. ಸಂಜೆ 6ಗಂಟೆಗೆ ಶ್ರೀರಂಗಪಟ್ಟಣದಲ್ಲಿ ಬಹಿರಂಗ ಸಭೆ ಮುಗಿಸಿ ರಾತ್ರಿ 8ಗಂಟೆಗೆ ಶ್ರೀರಂಗಪಟ್ಟಣದಲ್ಲಿಯೇ ವಾಸ್ಯವ್ಯ ಹೂಡಲಾಗುವುದು. ಮೂರನೇ ದಿನ 17 ಕಿ.ಮೀ ಪಾದಯಾತ್ರೆ ನಡೆಯಲಿದೆ. 9ರಂದು ಬೆಳಗ್ಗೆ 8ಗಂಟೆಗೆ ಶ್ರೀರಂಗಪಟ್ಟಣದಿಂದ ಹೊರಡುವ ಪಾದಯಾತ್ರೆ ಮೈಸೂರಿಗೆ ತೆರಳಲಿದೆ.