ಮಡಿಕೇರಿ:
ಸದ್ಯದ ಮಟ್ಟಿಗೆ ಮಡಿಕೇರಿ ಕ್ಷೇತ್ರಕ್ಕೆ ತಾನೇ ಜೆಡಿಎಸ್ ಅಭ್ಯರ್ಥಿ ಎಂದು ನಾಪಂಡ ಮುತ್ತಪ್ಪ ಭರದ ಪ್ರಚಾರ ಮಾಡುತ್ತಿದ್ದಾರೆ. ಆದರೆ ಈ ಬಗ್ಗೆ ಪಕ್ಷದಿಂದ ಇನ್ನೂ ಅಧಿಕೃತ ಘೋಷಣೆ ಆಗಿಲ್ಲ. ಹಾಗಾಗಿ ತೆನೆ ಹೊತ್ತ ರೈತ ಮಹಿಳೆ ಗುರುತಿನ ಅಡಿಯಲ್ಲಿ ಇಲ್ಲಿ ಕಣಕ್ಕೆ ಇಳಿಯುವವರ ಬಗ್ಗೆ ಕಾರ್ಯಕರ್ತರು ಮಾತ್ರವಲ್ಲದೆ ರಾಜಕೀಯ ಆಸಕ್ತರಲ್ಲೂ ಸಾಕಷ್ಟು ಕುತೂಹಲ ಮನೆ ಮಾಡಿದೆ.
೨೦೧೮ ಮತ್ತು ೨೦೧೩ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಮಡಿಕೇರಿ ಕ್ಷೇತ್ರದಲ್ಲಿ ಜೆಡಿಎಸ್ ೨ನೇ ಸ್ಥಾನದಲ್ಲಿದೆ. ೨೦೧೮ರ ಚುನಾವಣೆಯಲ್ಲಿ ಬಿಜೆಪಿ ಗೆಲುವಿನ ಅಂತರ ೧೬೦೧೫ ಮತಗಳು. ಬಿಜೆಪಿ ಅಭ್ಯರ್ಥಿ ಶೇ. ೪೧.೬೮ರಷ್ಟು ಮತಗಳನ್ನು ಪಡೆದಿದ್ದರೆ, ಜೆಡಿಎಸ್ ಅಭ್ಯರ್ಥಿ ಶೇ. ೩೨.೨೩ರಷ್ಟು ಮತ ಗಳಿಸಿದ್ದರು. ೨೦೧೩ಲ್ಲಿ ಬಿಜೆಪಿ ಗೆಲುವಿನ ಅಂತರ ಕೇವಲ ೪೬೨೯ ಮತಗಳು. ಈ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿ ಶೇ.೩೬.೮೫ರಷ್ಟು ಮತ ಗಳಿಸಿದ್ದರೆ, ಜೆಡಿಎಸ್ ಅಭ್ಯರ್ಥಿ ಶೇ. ೩೩.೮೪ರಷ್ಟು ಮತ ಗಳಿಸುವಲ್ಲಿ ಶಕ್ತರಾಗಿದ್ದರು. ಈ ಎರಡು ಚುನಾವಣೆಯಲ್ಲೂ ಜೆಡಿಎಸ್‌ನಿಂದ ಮಾಜಿ ಸಚಿವ ಬಿ.ಎ. ಜೀವಿಜಯ ಕಣಕ್ಕೆ ಇಳಿದಿದ್ದರು.
ಈ ಐದು ವರ್ಷಗಳಲ್ಲಿ ಜಿಲ್ಲೆಯ ರಾಜಕೀಯ ಮಾತ್ರವಲ್ಲದೆ ಮಡಿಕೇರಿ ಕ್ಷೇತ್ರದ ರಾಜಕೀಯವೂ ಸಾಕಷ್ಟು ಬದಲಾಗಿದೆ. ಆಗ ಜೆಡಿಎಸ್‌ನಲ್ಲಿ ಇದ್ದ ಬಿ.ಎ. ಜೀವಿಜಯ ಈಗ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿದ್ದು ಈ ಬಾರಿಯ ಟಿಕೆಟ್‌ಗೆ ಪ್ರಬಲ ಆಕಾಂಕ್ಷಿ ಆಗಿದ್ದಾರೆ. ಹಿಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್‌ನಲ್ಲಿ ಸಕ್ರಿಯವಾಗಿದ್ದ ನಾಪಂಡ ಮುತ್ತಪ್ಪ ತಾವು ಜೆಡಿಎಸ್ ಅಭ್ಯರ್ಥಿ ಎಂದು ಗುರುತಿಸಿಕೊಂಡು ಕ್ಷೇತ್ರಾದ್ಯಂತ ಸಂಚರಿಸುತ್ತಿದ್ದಾರೆ.
ಒಂದು ವೇಳೆ ಜೀವಿಜಯ ಅವರಿಗೆ ಕಾಂಗ್ರೆಸ್‌ನಿಂದ ಟಿಕೆಟ್ ಸಿಗದಿದ್ದರೆ ಈ ಬಾರಿ ಅವರು ಮತ್ತೆ ಜೆಡಿಎಸ್‌ನಿಂದ ಕಣಕ್ಕೆ ಇಳಿಯುತ್ತಾರೆ ಎನ್ನುವ ಮಾತುಗಳು ರಾಜಕೀಯ ವಲಯದಲ್ಲಿ ದಟ್ಟವಾಗಿ ಕೇಳಿ ಬರುತ್ತಿದೆ. ಇದನ್ನು ಸ್ವತಃ ಜೀವಿಜಯ ನಿರಾಕರಿಸಿದ್ದರೂ ರಾಜಕೀಯದಲ್ಲಿ ಏನು ಬೇಕಾದರೂ ಆಗುವ ಸಾಧ್ಯತೆ ಅಲ್ಲಗೆಳೆಯುವಂತೆ ಇಲ್ಲ. ಕಾಂಗ್ರೆಸ್‌ನಿಂದ ಟಿಕೆಟ್ ಸಿಗದಿದ್ದರೆ ಜೆಡಿಎಸ್ ಕಡೆಗೆ ಜಿಗಿಯಲು ಇನ್ನೂ ಇಬ್ಬರು ತುದಿಗಾಲಲ್ಲಿ ನಿಂತಿದ್ದಾರೆ ಎನ್ನುವ ಸುದ್ದಿಯೂ ಹರಿದಾಡುತ್ತಿದೆ.
ಮೊದಲನೇ ಪಟ್ಟಿಯಲ್ಲಿ ಮಡಿಕೇರಿ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಹೆಸರು ಪ್ರಕಟವಾಗಿಲ್ಲ. ಹಾಗಾಗಿ ೨ನೇ ಪಟ್ಟಿ ಕಡೆಗೆ ಪಕ್ಷದ ಆಕಾಂಕ್ಷಿಗಳು ದೊಡ್ಡ ನಿರೀಕ್ಷೆಯಲ್ಲಿ ಕಾಯುತ್ತಿದ್ದಾರೆ. ಮೂಲಗಳ ಪ್ರಕಾರ ಮಡಿಕೇರಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಹೆಸರು ಅಂತಿಮಗೊಳ್ಳುವ ತನಕ ಜೆಡಿಎಸ್ ಅಭ್ಯರ್ಥಿ ಪಟ್ಟಿ ಬಿಡುಗಡೆ ಆಗುವುದಿಲ್ಲ ಎನ್ನಲಾಗುತ್ತಿದೆ. ಘಟಾನುಘಟಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿತರು ಎರಡೂ ಪಕ್ಷಗಳಲ್ಲೂ ಒಂದೊಂದು ಕಾಲು ಇಟ್ಟಿರುವುದೇ ಈ ಬೆಳವಣಿಗೆಗೆ ಕಾರಣವಾಗಿದೆ.
ಒಂದು ವೇಳೆ ಕಾಂಗ್ರೆಸ್‌ನಲ್ಲಿ ಮಂಥರ್ ಗೌಡ ಅವರಿಗೆ ಟಿಕೆಟ್ ಸಿಕ್ಕಿದರೆ ಇತ್ತೀಚೆಗಷ್ಟೇ ಜೆಡಿಎಸ್ ಸೇರಿರುವ ಇವರ ತಂದೆ ಎ. ಮಂಜು ಜೆಡಿಎಸ್ ಟಿಕೆಟ್ ಹಂಚಿಕೆಯಲ್ಲಿ ಹಸ್ತಕ್ಷೇಪ ಮಾಡಬಹುದು ಎನ್ನುವ ಶಂಕೆಯೂ ವ್ಯಕ್ತವಾಗಿದೆ. ತಮ್ಮ ಪುತ್ರನ ಗೆಲುವಿಗಾಗಿ ಜೆಡಿಎಸ್‌ನಿಂದ ದುರ್ಬಲ ಅಭ್ಯರ್ಥಿ ಕಣಕ್ಕೆ ಇಳಿಸಲು ಲಾಬಿಗೆ ಇಳಿಯುವ ಅತಂಕ ನಾಪಂಡ ಮುತ್ತಪ್ಪ ಬೆಂಬಲಿಗರಲ್ಲಿ ಕಾಣಿಸಿಕೊಂಡಿದೆ.