ಜಿಲ್ಲೆ

ಶಿರಾ, ಕುಣಿಗಲ್‌ಗೆ ಹೇಮಾವತಿ ನೀರು: ಸಚಿವ ಜೆ.ಸಿ ಮಾಧುಸ್ವಾಮಿ

Tumakuru

ತುಮಕೂರು: ಹೇಮಾವತಿ ನಾಲೆಯಿಂದ ಮೊದಲ ಹಂತದಲ್ಲಿ ಶಿರಾ ಹಾಗೂ ಕುಣಿಗಲ್ ತಾಲೂಕಿಗೆ ನೀರು ಹರಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ ಮಾಧುಸ್ವಾಮಿ ಹೇಳಿದರು.

ಜಿಪಂ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ವಿಶೇಷ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ನಾಲಾ ವ್ಯಾಪ್ತಿಯ ತಾಲೂಕಿಗಳಿಗೆ 10 ದಿನ ನೀರು ಹರಿಸಲಾಗುವುದು, ಮೊದಲ ಹಂತದಲ್ಲಿ ಶಿರಾ ಮತ್ತು ಕುಣಿಗಲ್ ತಾಲೂಕಿಗೆ ನೀರು ಹರಿಸಲು ನಿರ್ಧರಿಸಲಾಗಿದ್ದು, ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು. ಪ್ರಸ್ತುತ ಜಲಾಶಯದಲ್ಲಿ 33 ಟಿಎಂಸಿ ನೀರು ಸಂಗ್ರಹವಿದ್ದು, ಕಳೆದ ಬಾರಿ ಕಡಿಮೆ ನೀರು ಹರಿದಿದ್ದ ಶಿರಾ ಹಾಗೂ ಕುಣಿಗಲ್ ತಾಲೂಕಿಗೆ ಈಗ ನೀರು ಬಿಡಲಾಗುವುದು. ತಾಲೂಕಿಗೆ ಪ್ರವೇಶವಾದ ದಿನದಿಂದ ಲೆಕ್ಕ ಹಾಕಿ 10 ದಿನಗಳ ಕಾಲ ನೀರು ಹರಿಸಲಾಗುವುದು. ತಾಲೂಕುವಾರು ಹಂಚಿಕೆಯಾಗಿರುವ ನೀರಿಗೆ ಅನುಗುಣವಾಗಿ ಸಮರ್ಪಕವಾಗಿ ಹರಿಸಲಾಗುವುದು ಎಂದು ಭರವಸೆ ನೀಡಿದರು.

ನಾಲೆಯಿಂದ ನೀರು ಹರಿಸಲು ಆರಂಭವಾಗುವ ದಿನದಿಂದ ಮುಕ್ತಾಯದವರೆಗೂ ಕುಡಿಯುವ ನೀರಿನ ಕೆರೆಗಳಿಗೆ ಹಾಗೂ ಕುಡಿಯುವ ನೀರು ಯೋಜನೆಗಳಿಗೆ ನಿರಂತರವಾಗಿ ನೀರು ಹರಿಸಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು. ತುಮಕೂರು ಗ್ರಾಮಾಂತರದಲ್ಲಿ ನೀರು ಹರಿಸಿದರೂ ಕೆರೆಗಳು ಸಮರ್ಪಕವಾಗಿ ಭರ್ತಿಯಾಗುತ್ತಿಲ್ಲ. ಮೋಟಾರ್ ಪಂಪ್‌ಸೆಟ್‌ಗಳು ದುರಸ್ತಿಯಲ್ಲಿವೆ ಎಂಬ ಶಾಸಕ ಡಿ.ಸಿ.ಗೌರಿಶಂಕರ್ ದೂರಿಗೆ ಸ್ಪಂದಿಸಿದ ಸಚಿವ ಮಾಧುಸ್ವಾಮಿ, ಕೂಡಲೇ ದುರಸ್ತಿ ಮಾಡಿ ಹಣ ಕೊಡಿಸುವ ಜವಾಬ್ದಾರಿ ನನ್ನದು ಎಂದರು.

ಸಂಸದ ಜಿ.ಎಸ್.ಬಸವರಾಜು ಮಾತನಾಡಿ, ಜಿಲ್ಲೆಯಲ್ಲಿ ಮೊದಲ ಬಾರಿಗೆ ಕಳೆದ ಸಾಲಿನಲ್ಲಿ 18.5 ಟಿಎಂಸಿಯಿಂದ 21 ಟಿಎಂಸಿ ನೀರನ್ನು ತುಮಕೂರು ನಾಲೆಯಿಂದ ಜಿಲ್ಲೆ ಬಳಸಿಕೊಂಡಿದೆ. ಗೋರೂರು ಡ್ಯಾಂನಲ್ಲಿ ನೀರು ಸಂಗ್ರಹವಾಗಿದ್ದು, ನೀರು ವ್ಯರ್ಥವಾಗದಂತೆ ಜಿಲ್ಲೆಯಲ್ಲಿ ಬಳಸಿಕೊಳ್ಳೋಣ. ಹೇಮಾವತಿ ಇಂಜಿನಿಯರ್‌ಗಳಿಗೆ ಮುಕ್ತ ಸ್ವಾತಂತ್ರ್ಯ ನೀಡಿ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಮುಂದಾಗಬೇಕು ಎಂದರು.

ಸಂಸದ ಡಿ.ಕೆ.ಸುರೇಶ್ ಅವರು ಮಾತನಾಡಿ, ಮೊದಲ ಹಂತದಲ್ಲಿ ಜಿಲ್ಲೆಯ ಹೇಮಾವತಿ ನಾಲೆಯಿಂದ ತಾಲೂಕುವಾರು ಹಂಚಿಕೆಯಾಗಿರುವ ನೀರನ್ನು ಸಮರ್ಪಕವಾಗಿ ಹರಿಸಿ ಎಲೆಕ್ಟ್ರಾನಿಕ್ ಗೇಜ್‌ಗಳನ್ನು ಅಳವಡಿಸಿ ಎಂದರು.

ಶಾಸಕರಾದ ಬಿ.ಸಿ.ನಾಗೇಶ್, ಜಿ.ಬಿ.ಜ್ಯೋತಿಗಣೇಶ್, ಡಾ.ರಂಗನಾಥ್, ಮಸಾಲಾ ಜಯರಾಂ, ಎಂ.ವಿ.ವೀರಭದ್ರಯ್ಯ, ವಿಧಾನ ಪರಿಷತ್ ಶಾಸಕ ತಿಪ್ಪೇಸ್ವಾಮಿ, ಡಿಸಿ ರಾಕೇಶ್ ಕುಮಾರ್ ಇದ್ದರು.

ಬೆಂಗಳೂರಿನ ಗಲಭೆ ಹಿಂದೆ ಪೂರ್ವನಿಯೋಜಿತ ಶಂಕೆ: ಬೆಂಗಳೂರಿನ ಗಲಭೆಗೆ ಕಾರಣರಾದವರಿಂದ ಆಸ್ತಿ ನಷ್ಟ ಭರಿಸುವ ಕಾನೂನು ಕೇಂದ್ರ ಸರ್ಕಾರವೇ ಮಾಡಿದೆ, ಸಿಎಂ ತೀರ್ಮಾನಿಸುತ್ತಾರೆ. ತನಿಖೆಯಾಗದೆ ಯಾವ ಸಂಘಟನೆಗಳ ವಿರುದ್ಧವೂ ನಾವು ಹೇಳಿಕೆ ನೀಡಲು ಸಾಧ್ಯವಿಲ್ಲ ಆದರೆ, ಇದು ಪೂರ್ವನಿಯೋಜಿತ ಎಂಬ ಶಂಕೆ ಇದೆ ಎಂದು ಮಾಧುಸ್ವಾಮಿ ತಿಳಿಸಿದರು. ಸೆ.23ರೊಳಗೆ ಅಧಿವೇಶನ ಮಾಡಬೇಕು ನಮಗಿಂತ ಒಂದು ದಿನ ಮುಂಚೆ ಸಂಸತ್ ಅಧಿವೇಶನ ಕೂಡ ನಡೆಯಲೇಬೇಕು. ನಾನು ಹಾಗೂ ಸಭಾಧ್ಯಕ್ಷರು ಚರ್ಚೆ ನಡೆಸಿದ್ದು, ಪರಸ್ಪರ ಅಂತರ ಕಾಪಾಡಿಕೊಂಡು ಅಧಿವೇಷನ ನಡೆಸಲು ಚಿಂತಿಸಿದ್ದೇವೆ, ಸಂಪುಟ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಬೇಕು ಎಂದರು.