ಚಿಕ್ಕನಾಯಕನಹಳ್ಳಿ : ಶಾಸಕ ಜೆ.ಸಿ.ಮಾಧುಸ್ವಾಮಿ ನಿರೀಕ್ಷೆಯಂತೆ ಬಸವರಾಜು ಬೊಮ್ಮಾಯಿ ಸಂಪುಟದಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದು ಜಿಲ್ಲೆಯ ಜನರಲ್ಲಿ ಅಭಿವೃದ್ಧಿ ಕನಸು ಮುಂದುವರಿದಿದೆ.
ಎನ್.ಬಸವಯ್ಯ, ಟಿ.ಬಿ.ಜಯಚಂದ್ರ ನಂತರ ತಾಲೂಕಿನ ಜೆ.ಸಿ.ಮಾಧುಸ್ವಾಮಿ ಸಚಿವರಾಗಿದ್ದರು. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಮಾಧುಸ್ವಾಮಿಗೆ ಅರ್ಹವಾಗಿಯೇ ಸ್ಥಾನ ಲಭಿಸಿದ್ದು, ಮಹತ್ವದ ಖಾತೆಯ ನಿರೀಕ್ಷೆ ಮೂಡಿಸಿದೆ.
ಬಿ.ಎಸ್.ಯಡಿಯೂರಪ್ಪ ಆಪ್ತ ಸಚಿವ ಎಂದೇ ಗುರುತಿಸಿಕೊಂಡಿದ್ದ ಮಾಧುಸ್ವಾಮಿ ಸಿಎಂ ಬದಲಾದರೂ ಎಲ್ಲಿಯೂ ಮಂತ್ರಿ ಸ್ಥಾನಕ್ಕೆ ಲಾಬಿ ನಡೆಸದೆ ಕ್ಷೇತ್ರದಲ್ಲಿಯೇ ಉಳಿದಿದ್ದರು.
ಸಣ್ಣ ನೀರಾವರಿ ಸಚಿವರಾಗಿ ಜಿಲ್ಲೆಯ ನೀರಾವರಿ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಮಾಡುತ್ತಿರುವ ಮಾಧುಸ್ವಾಮಿ ಸಚಿವರಾಗಲಿ ಎಂದು ಪಕ್ಷಾತೀತವಾಗಿ ಅಭಿಪ್ರಾಯ ವ್ಯಕ್ತವಾಗಿತ್ತು. ಸ್ವಪಕ್ಷೀಯರ ವಿರೋಧದ ನಡುವೆಯೂ ಸಚಿವರಾಗಿ ಬುಧವಾರ ಪ್ರಮಾಣವಚನ ಸ್ವೀಕರಿಸಿದರು.
ನಾಲ್ಕನೇ ಬಾರಿ ಶಾಸಕರಾಗಿರುವ ಜೆ.ಸಿ.ಮಾಧುಸ್ವಾಮಿ ಬಿಎಸ್‌ವೈ ಬಣದಲ್ಲಿದ್ದರೂ ಎಲ್ಲ ವಿಷಯದಲ್ಲಿಯೂ ಅವರ ಪರವಾಗಿ ನಿಲ್ಲದೆ ಪಕ್ಷದ ಮುಖಂಡರ ಗಮನ ಸೆಳೆದಿದ್ದರು. ನೇರ ಮಾತು, ನಿಷ್ಠುರ ನಡೆ, ಸಚಿವರಾಗಿ ಕಾರ್ಯದಕ್ಷತೆ ಹಾಗೂ ಸಂಸದೀಯ ವ್ಯವಹಾರದೊಂದೊಗಿನ ಅಪಾರ ಜ್ಞಾನ ಅವರನ್ನು ಮತ್ತೊಮ್ಮೆ ಸಚಿವರನ್ನಾಗಿಸಿದೆ.
ಬುಧವಾರ ಬೆಳಗ್ಗೆ ಸ್ವಗ್ರಾಮ ಜೆ.ಸಿ.ಪುರದಲ್ಲೇ ಇದ್ದ ಜೆ.ಸಿ.ಮಾಧುಸ್ವಾಮಿ ಕ್ಷೇತ್ರದ ಕೆಲಸದಲ್ಲಿ ಮಗ್ನರಾಗಿದ್ದರು, ಬೆಂಬಲಿಗರೊಬ್ಬರ ಸಾವಿನ ಸ್ಥಳಕ್ಕೂ ತೆರಳಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದರು. ಬೊಮ್ಮಾಯಿ ೆನ್ ಕರೆಯ ನಂತರ ಕುಟುಂಬ ಸಮೇತರಾಗಿ ಬೆಂಗಳೂರಿಗೆ ಹೊರಟರು. ಮಾರ್ಗಮಧ್ಯೆ ಸಿದ್ಧಗಂಗಾ ಮಠಕ್ಕೆ ತೆರಳಿ ಡಾ.ಶಿವಕುಮಾರ ಸ್ವಾಮೀಜಿ ಗದ್ದುಗೆಗೆ ಪೂಜೆ ಸಲ್ಲಿಸಿದರು.
ಜನ್ಮದಿನದ ಪೂರ್ವದಿನ ಮಂತ್ರಿಯಾಗಿ ಪ್ರಮಾಣ : ಸಚಿವರಾಗಿ ಎರಡನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿದ ಜೆ.ಸಿ.ಮಾಧುಸ್ವಾಮಿ ಗುರುವಾರ ಜನ್ಮದಿನ ಆಚರಿಸಿಕೊಳ್ಳುತ್ತಿದ್ದು, ಅಭಿಮಾನಿಗಳ ಸಂಭ್ರಮ ಹೆಚ್ಚಿಸಿದೆ. ಸಮಾಜವಾದಿ ಸಿದ್ಧಾಂತದ ಹಿನ್ನೆಲೆಯ ಮಾಧುಸ್ವಾಮಿ ಸಾರ್ವಜನಿಕವಾಗಿ ಜನ್ಮದಿನ, ಸಂಭ್ರಮಾಚರಣೆ ಮಾಡಿಕೊಂಡಿದ್ದು ವಿರಳ. ಕಾಕತಾಳೀಯ ಎಂಬಂತೆ ಜನ್ಮದಿನ ಪೂರ್ವದಿನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿರುವುದು ಸಹಜವಾಗಿ ಹೆಚ್ಚು ಖುಷಿ ತಂದಿದೆ.
ವಿದ್ಯುತ್ ಇಲ್ಲದೆ ಪರದಾಟ : ಜೆ.ಸಿ.ಮಾಧುಸ್ವಾಮಿ ಪ್ರಮಾಣವಚನ ಸ್ವೀಕರಿಸುವ ಕ್ಷಣವನ್ನು ಕಣ್ತುಂಬಿಕೊಳ್ಳುವ ಕ್ಷೇತ್ರದ ಜನರ ಆಸೆಗೆ ಬೆಸ್ಕಾಂ ತಣ್ಣೀರು ಎರಚಿತು. ಹಂದನಕೆರೆ ಹೋಬಳಿಯ ಗ್ರಾಮಗಳಲ್ಲಿ ವಿದ್ಯುತ್ ಇಲ್ಲದೆ ಸಚಿವ ಸಂಪುಟದ ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ಜನರು ನೋಡಲು ಸಾಧ್ಯವಾಗಲಿಲ್ಲ. ರಿಪೇರಿ ಕಾರ್ಯ ನಡೆಯುತ್ತಿರುವ ಕಾರಣಕ್ಕೆ ಕರೆಂಟ್ ತೆಗೆಯಲಾಗಿದೆ ಎಂದು ಬೆಸ್ಕಾಂ ಅಧಿಕಾರಿಗಳ ಉತ್ತರದಿಂದ ರೋಸಿಹೋದ ಜನರು ಮಂತ್ರಿಗಳ ಪ್ರಮಾಣವಚನ ಸಮಾರಂಭ ನೋಡಬಾರದೆಂದೇ ಅಧಿಕಾರಿಗಳು ವಿದ್ಯುತ್ ತೆಗೆದಿದ್ದಾರೆ ಎಂದು ದೂರಿದರು.
ಬಿ.ಸಿ.ನಾಗೇಶ್ ಪಕ್ಷ ನಿಷ್ಠೆಗೆ ಒಲಿದ ಮಂತ್ರಿಗಿರಿ : ಅನಿರೀಕ್ಷಿತ ಬೆಳವಣಿಗೆಯಲ್ಲಿ ಶಾಸಕ ಬಿ.ಸಿ.ನಾಗೇಶ್‌ಗೆ ಇದೇ ಮೊದಲ ಸಲ ಮಂತ್ರಿಯಾಗುವ ಅದೃಷ್ಟ ಒಲಿದಿದೆ. ತಿಪಟೂರು ಜಿಲ್ಲೆಯಾಗಬೇಕೆನ್ನುವ ಈ ಭಾಗದ ಜನರ ಬಹುದಿನದ ಕನಸಿಗೆ ರೆಕ್ಕೆಪುಕ್ಕ ಬಂದಿದೆ.
1989ರಲ್ಲಿ ಟಿ.ಎಂ.ಮಂಜುನಾಥ್ ಸಚಿವರಾಗಿದ್ದು ಬಿಟ್ಟರೆ ತಾಲೂಕಿನಿಂದ ಯಾರೂ ಸಚಿವರಾಗಿರಲಿಲ್ಲ, ಎಬಿವಿಪಿ ಮೂಲಕ ಸಾರ್ವಜನಿಕ ಬದುಕಿನಲ್ಲಿ ಗುರುತಿಸಿಕೊಂಡು, ಶಾಸಕರಾಗಿ ಜನಮನ್ನಣೆ ಗಳಿಸಿರುವ ಬಿ.ಸಿ.ನಾಗೇಶ್ ಪಕ್ಷ ನಿಷ್ಠೆ, ಬಿಜೆಪಿ ವರಿಷ್ಠ ಬಿ.ಎಲ್.ಸಂತೋಷ್ ಜತೆಗಿನ ಒಡನಾಟ ಮಂತ್ರಿ ಸ್ಥಾನದಲ್ಲಿ ಕೂರಿಸಿದೆ.
ಎಸ್.ಸುರೇಶ್‌ಕುಮಾರ್ ಅವರಂತಹ ಹಿರಿಯರಿಂದ ತೆರವಾದ ಸ್ಥಾನಕ್ಕೆ ಬಿ.ಸಿ.ನಾಗೇಶ್ ನೇಮಕವಾಗಿರುವ ಹಿನ್ನೆಲೆಯಲ್ಲಿ ಅವರ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ಸ್ವಜಾತಿಯ ಮತಗಳಿಲ್ಲದಿದ್ದರೂ ತಿಪಟೂರು ಕ್ಷೇತ್ರದಿಂದ ಎರಡು ಸಲ ವಿಧಾನಸಭೆಗೆ ಆಯ್ಕೆಯಾಗಿರುವ ನಾಗೇಶ್ ಎಲ್ಲ ಸಣ್ಣಪುಟ್ಟ ಜಾತಿಗಳ ಬಗ್ಗೆ ಕಾಳಜಿ ಉಳ್ಳವರು. ಹಾಗಾಗಿ, ಪಕ್ಷಕ್ಕೆ ಲಾಭವಾಗಲಿದೆ ಎಂಬ ಲೆಕ್ಕಾಚಾರ ಬಿಜೆಪಿಯಲ್ಲಿದೆ.
32 ವರ್ಷಗಳ ನಂತರ ಕ್ಷೇತ್ರಕ್ಕೆ ಮಂತ್ರಿಗಿರಿ ಲಭಿಸಿದ್ದು ಕ್ಷೇತ್ರದ ಜನರು ಖುಷಿಯಲ್ಲಿದ್ದಾರೆ, 1959 ರಲ್ಲಿ ತಿಪಟೂರಿನಲ್ಲಿ ಜನಿಸಿದ ಬಿ.ಸಿ.ನಾಗೇಶ್ ನಗರದ ಸ್ಟೆಲ್ಲಾ ಮೆರೀಸ್ ಇಂಗ್ಲಿಷ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಎಸ್‌ವಿಪಿ ಶಾಲೆಯಲ್ಲಿ ಪ್ರೌಢಶಿಕ್ಷಣ, ಕಲ್ಪತರು ಕಾಲೇಜಿನಲ್ಲಿ ಪಿಯುಸಿ ಕಲಿತು, ನಂತರ ಬೆಂಗಳೂರಿನ ಬಿಎಂಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಿಇ ಪದವಿ ಪಡೆದಿದ್ದು ರಾಜಕೀಯ ವಲಯದ ಸಜ್ಜನ ಎಂದೇ ಖ್ಯಾತಿಗಳಿಸಿದ್ದಾರೆ.
ಬಿಎಸ್‌ವೈ ಸರ್ಕಾರದಲ್ಲಿ ತೆಂಗು ನಾರು ಅಭಿವೃದ್ಧಿ ನಿಗಮದ ಅಧ್ಯಕ್ಷ ಗಾದಿ, ನಂತರದ ಕಾರ್ಮಿಕ ಕಲ್ಯಾಣ ನಿಗಮದ ಅಧ್ಯಕ್ಷ ಸ್ಥಾನ ಒಲಿದು ಬಂದಿದ್ದರೂ ಸಚಿವರಾಗಬೇಕೆಂಬ ಸಂಕಲ್ಪದಿಂದ ಅಧಿಕಾರ ಸ್ವೀಕರಿಸದೆ ಹಠವಿಡಿದು ಸಾಧಿಸಿ ತೋರಿಸಿದರು. ಎಂದೂ ಪಕ್ಷ ಹಾಗೂ ಸರ್ಕಾರಕ್ಕೆ ಮುಜುಗರವಾಗುವ ಹೇಳಿಕೆ ನೀಡದ ಬಿ.ಸಿ.ನಾಗೇಶ್‌ಗೆ ಮಂತ್ರಿ ಸ್ಥಾನ ಒಲಿದುಬಂದಿದೆ.