ಜಿಲ್ಲೆ

ಆಸಕ್ತಿ ಇಲ್ಲದಿದ್ದರೆ ಸರ್ಕಾರಿ ಕೆಲಸ ಬಿಡಿ ; ಕುಣಿಗಲ್ ಟಿಎಚ್‌ಒಗೆ ಸಚಿವ ಮಾಧುಸ್ವಾಮಿ ತರಾಟೆ

Tumakuru

ತುಮಕೂರು ; ಸರ್ಕಾರಿ ಕೆಲಸ ಮಾಡಲು ಆಸಕ್ತಿ ಇಲ್ಲದವರು ದಯವಿಟ್ಟು ಕೆಲಸ ಬಿಟ್ಟು ಹೋಗಿ, ಕರೊನಾ ಸಂಕಷ್ಟದಲ್ಲಿ ಗಟ್ಟಿ ಕಾಳುಗಳು ಮಾತ್ರ ಉಳಿದುಕೊಳ್ಳಲಿವೆ. ಸರ್ಕಾರಿ ಸಂಬಳ ತೆಗೆದುಕೊಂಡು ಖಾಸಗಿ ಕ್ಲಿನಿಕ್ ನಡೆಸುವುದನ್ನು ಸಹಿಸುವುದಿಲ್ಲ ಎಂದು ಕುಣಿಗಲ್ ತಾಲೂಕು ವೈದ್ಯಾಧಿಕಾರಿ ವಿರುದ್ಧ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಹರಿಹಾಯ್ದರು.

ನಗರದ ಜಿಲ್ಲಾಧಿಕಾರಿ ಕಚೇರಿಯಿಂದ ಜಿಲ್ಲೆಯ ಗ್ರಾಪಂ ಅಧ್ಯಕ್ಷರು, ಅಧಿಕಾರಿಗಳ ಜತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ ವೇಳೆ ಕುಣಿಗಲ್ ತಾಲೂಕು ವೈದ್ಯಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಅವರು, ‘ಖಾಸಗಿ ಕ್ಲಿನಿಕ್ ನಡೆಸುತ್ತಿದ್ದೀರಾ, ಈ ಬಗ್ಗೆ ದೂರುಗಳು ಬಂದಿವೆ. ಸರ್ಕಾರಿ ಕೆಲಸ ಮಾಡಲು ಆಸಕ್ತಿ ಇಲ್ಲದವರು ದಯವಿಟ್ಟು ಕೆಲಸ ಬಿಡಬಹುದು’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪಾವಗಡ ತಾಲೂಕಿನಿಂದ ತಹಸೀಲ್ದಾರ್, ತಾಪಂ ಇಒ ಸಭೆಗೆ ಗೈರಾಗಿದ್ದಕ್ಕೆ ಕೆಂಡಾಮಂಡಲರಾದ ಸಚಿವರು, ಅಧಿಕಾರಿಗಳು ಸೋಮಾರಿಗಳಾದರೆ ಸಹಿಸುವುದಿಲ್ಲ, ಗ್ರಾಮೀಣ ಭಾಗದಲ್ಲಿ ಕರೊನಾ ಲಗ್ಗೆ ಇಟ್ಟಿದ್ದು ಅದನ್ನು ನಿಯಂತ್ರಿಸಲು ಕ್ರಮಕೈಗೊಳ್ಳಬೇಕು ಎಂದು ತಾಕೀತು ಮಾಡಿದರು.

ಸೋಂಕು ಪತ್ತೆಯಾಗಿರುವ ಗ್ರಾಮಗಳಲ್ಲಿ ಗರಿಷ್ಠ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು, ಸೋಂಕಿತರನ್ನು ಕಡ್ಡಾಯವಾಗಿ ಕೋವಿಡ್ ಆರೈಕೆ ಕೇಂದ್ರಕ್ಕೆ ಸ್ಥಳಾಂತರಿಸಬೇಕು. ಬರಲು ಹಿಂದೇಟು ಹಾಕುವ ಸೋಂಕಿತರಿಗೆ ಆಯಾ ಸ್ಥಳೀಯ ಜನಪ್ರತಿನಿಧಿಗಳು ಮನವರಿಕೆ ಮಾಡಿ ಸ್ಥಳಾಂತರಿಸಬೇಕು ಎಂದರು.

ಹೆಚ್ಚು ಪ್ರಕರಣಗಳಿರುವ ಗ್ರಾಮಗಳನ್ನು ಲಾಕ್‌ಡೌನ್ ಮಾಡಿ, ಸಾರ್ವಜನಿಕರ ಅನಗತ್ಯ ಸಂಚಾರಕ್ಕೆ ಕಡಿವಾಣ ಹಾಕಬೇಕು, ಈಗಾಗಲೇ ನಿಗದಿಯಾಗಿರುವ ಮದುವೆಗಳು ನಡೆಯಲು ಅನುಮತಿ ನೀಡಿ. ಆದರೆ, ಹೊಸ ಮದುವೆಗಳು ನಡೆಯಲು ಅವಕಾಶ ಮಾಡಿಕೊಡಬೇಡಿ. ಜೂಜಾಟ ಸೇರಿ ವಿವಿಧ ಅಕ್ರಮ ಚಟುವಟಿಕೆಗಳ ನಿಯಂತ್ರಣಕ್ಕೆ ಪೊಲೀಸ್ ಇಲಾಖೆ ತಕ್ಷಣವೇ ಕ್ರಮವಹಿಸಬೇಕು ಎಂದರು.

ಅಂಗನವಾಡಿ, ಆಶಾ ಕಾರ್ಯಕರ್ತೆಯರನ್ನು ಬಳಸಿಕೊಂಡು ಹೋಂ ಐಸೋಲೇಷನ್‌ನಲ್ಲಿರುವ ಸೋಂಕಿತರ ಆರೈಕೆಗೆ ಹೆಚ್ಚು ಆದ್ಯತೆ ಕೊಡಬೇಕು. ಸೋಂಕು ದೃಢಪಟ್ಟ ಆರಂಭದ ದಿನದಿಂದಲೇ ಚಿಕಿತ್ಸೆ ನೀಡುವ ಕಾರ್ಯ ಪರಿಣಾಮಕಾರಿಯಾಗಿ ಆಗಬೇಕು ಎಂದರು.

ನ್ಯಾಯಬೆಲೆ ಅಂಗಡಿಗಳಲ್ಲಿ ನೀಡಲಾಗುವ ಆಹಾರ ಪಡಿತರಕ್ಕೆ ಬಯೋಮೆಟ್ರಿಕ್ ಕಡ್ಡಾಯವಲ್ಲ. ತಂಬಿಂಗ್‌ನಿಂದ ಸೋಂಕು ಹರಡುವ ಸಾಧ್ಯತೆಯಿದೆ. ಹಾಗಾಗಿ ದಿನಕ್ಕೆ 20 ಪಡಿತರದಾರರಿಗೆ ಕೂಪನ್ ನೀಡಿ ಪಡಿತರ ವಿತರಣೆಗೆ ಅಧಿಕಾರಿಗಳು ಕ್ರಮವಹಿಸುವಂತೆ ಸೂಚನೆ ನೀಡಿದರು.

ಸಂಸದ ಜಿ.ಎಸ್.ಬಸವರಾಜು ವಾತನಾಡಿದರು. ಸಚಿವರ ಜತೆಯಲ್ಲಿ ಶಾಸಕ ಜಿ.ಬಿ.ಜ್ಯೋತಿಗಣೇಶ್, ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ಜಿಪಂ ಸಿಇಒ ಕೆ.ವಿದ್ಯಾಕುಮಾರಿ, ಪೊಲೀಸ್ ಅಧೀಕ್ಷಕ ಡಾ.ಕೆ.ವಂಶಿಕೃಷ್ಣ, ಡಿಎಚ್‌ಒ ಡಾ.ನಾಗೇಂದ್ರಪ್ಪ, ಜಿಲ್ಲಾ ಶಸಚಿಕಿತ್ಸಕ ಡಾ.ಸುರೇಶ್‌ಬಾಬು ಇದ್ದರು.

ಅಕ್ರಮ ಮದ್ಯ ಮಾರಾಟ ನಿಲ್ಲಿಸಿ : ಪಾವಗಡ ತಾಲೂಕಿನ ಪ್ರತಿ ಊರಿನಲ್ಲಿಯೂ ನಾಲ್ಕೈದು ಅಂಗಡಿಗಳಲ್ಲಿ ಮದ್ಯವನ್ನು ಅಕ್ರಮವಾಗಿ ದಿನಪೂರ್ತಿ ಮಾರಾಟ ಮಾಡಲಾಗುತ್ತಿದೆ. ಮಟ್ಕಾ, ಜೂಜಾಟ ಕೂಡ ನಿರಂತರವಾಗಿ ನಡೆಯುತ್ತಿದ್ದು ಇದಕ್ಕೆ ಕೂಡಲೇ ಕಡಿವಾಣ ಹಾಕಬೇಕು ಎಂದು ಪಾವಗಡ ತಾಲೂಕಿನ ಬಹುತೇಕ ಗ್ರಾಪಂ ಅಧ್ಯಕ್ಷರು ಸಚಿವರಲ್ಲಿ ಮನವಿ ಮಾಡಿದರು. ಕರೊನಾ ಉಲ್ಬಣವಾಗಿರುವ ಸಂದರ್ಭದಲ್ಲಿ ಧೈರ್ಯದಿಂದ ಕೆಲಸ ಮಾಡುತ್ತಿರುವ ಗ್ರಾಪಂ ಸಿಬ್ಬಂದಿಯನ್ನು ಕರೊನಾ ವಾರಿಯರ್ಸ್‌ ಎಂದು ೋಷಿಸಬೇಕು ಎಂದು ಮನವಿ ಮಾಡಿದರು.

ಕರೊನಾ ನಿರ್ವಹಣೆಗಾಗಿ ದಾನಿಗಳಿಂದ ಪಲ್ಸ್ ಆಕ್ಸಿಮೀಟರ್, ಸ್ಯಾನಿಟೈಸರ್, ವಾಸ್ಕ್, ವಾತ್ರೆ ಮತ್ತಿತರ ಅಗತ್ಯ ಪರಿಕರಗಳು ಬಂದಿದೆ. ಪ್ರತಿ ಗ್ರಾಪಂಗೆ ಸರ್ಕಾರ ನೀಡಿರುವ ತಲಾ 50,000 ರೂ. ಅನುದಾನವನ್ನು ಕುಡಿಯುವ ನೀರು ನಿರ್ವಹಣೆಗೆ ಬಳಸಿಕೊಳ್ಳಬೇಕು. ಕೆ.ವಿದ್ಯಾಕುಮಾರಿ, ಸಿಇಒ, ತುಮಕೂರು ಜಿಪಂ