ಜಿಲ್ಲೆ

ಮಧುಗಿರಿ ಪುರಸಭೆಗೆ ಜೆಸಿಬಿ ಅಧ್ಯಕ್ಷ

ಜಗನ್ನಾಥ್ ಕಾಳೇನಹಳ್ಳಿ

ತುಮಕೂರು: ಜೆಡಿಎಸ್ ಪಕ್ಷದಿಂದ ಗೆದ್ದು ಬಂದಿದ್ದರೂ ಕಾಂಗ್ರೆಸ್ ಸದಸ್ಯರ ಬೆಂಬಲದೊಂದಿಗೆ ಹಾಗೂ ಬಿಜೆಪಿ ಸಂಸದ ಜಿ.ಎಸ್. ಬಸವರಾಜು ಆಶೀರ್ವಾದದಿಂದ ಮಧುಗಿರಿ ಪುರಸಭೆ ನೂತನ ಅಧ್ಯಕ್ಷರಾಗಿ ತಿಮ್ಮರಾಜು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಆ ಮೂಲಕ ಜೆಸಿಬಿ (ಜೆಡಿಎಸ್,ಕಾಂಗ್ರೆಸ್, ಬಿಜೆಪಿ) ಅಧ್ಯಕ್ಷ ಎಂಬ ಪಟ್ಟ ಗಳಿಸಿದರು.

ಪುರಸಭೆ ಚುನಾವಣೆ ನಡೆದು 6 ತಿಂಗಳೊಳಗೆ ತಿಮ್ಮರಾಯಪ್ಪ ಕಾಂಗ್ರೆಸ್‌ನೊಂದಿಗೆ ಗುರುತಿಸಿಕೊಂಡು ಕೆ.ಎನ್. ರಾಜಣ್ಣರ ಕೃಪಾ ಕಟಾಕ್ಷದಿಂದ ಅಧ್ಯಕ್ಷ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಪುರಸಭೆ ಅಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡಕ್ಕೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು ಬುಧವಾರ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣಾ ಪ್ರಕ್ರಿಯೆ ನಡೆಯಿತು. 23 ಸದಸ್ಯಬಲವುಳ್ಳ ಪುರಸಭೆಯಲ್ಲಿ ಕಾಂಗ್ರೆಸ್-13, ಜೆಡಿಎಸ್-09 ಹಾಗೂ ಪಕ್ಷೇತರ-01 ಸ್ಥಾನ ಗೆದ್ದಿದ್ದು ಕಾಂಗ್ರೆಸ್‌ಗೆ ಸ್ಟಷ್ಟಬಹುತಮತ ಹೊಂದಿತ್ತಾದರು ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ವಾಲಿದ್ದ ತಿಮ್ಮರಾಜು ಅವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆಯಾದರು. ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನ ರಾಧಿಕಾ ಅವಿರೋಧವಾಗಿ ಆಯ್ಕೆಯಾದರು.

ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಒಂದೊಂದೇ ನಾಮಪತ್ರ ಸಲ್ಲಿಕೆಯಾಗಿದ್ದರಿಂದ ಅವಿರೋಧ ಆಯ್ಕೆ ನಡೆಯಿತು. ಕಾಂಗ್ರೆಸ್-13, ಜೆಡಿಎಸ್-04 ಹಾಗೂ ಓರ್ವ ಪಕ್ಷೇತರ, ಬಿಜೆಪಿ ಸಂಸದ ಜಿ.ಎಸ್.ಬಸವರಾಜು ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯನ್ನು ಅನುಮೋದಿಸಿದರು.