ಜಿಲ್ಲೆ

ನೇತ್ರಾವತಿ ನದಿ ಶುದ್ಧೀಕರಣಕ್ಕಾಗಿ ಹೋರಾಟ

ಗೋಪಾಲಕೃಷ್ಣ ಪಾದೂರ್

ಉಡುಪಿ: ಬಂಟ್ವಾಳ ಮತ್ತು ಮಂಗಳೂರಿಗೆ ಕುಡಿಯುವ ನೀರಿನ ಸರಬರಾಜು ಮಾಡುವ ನೇತ್ರಾವತಿ ನದಿ ಈಗಾಗಲೇ ಕಲುಷಿತಗೊಳ್ಳಲು ಪ್ರಾರಂಭಗೊಂಡಿದೆ. ಈ ಬಗ್ಗೆ ಸರ್ಕಾರದ ಗಮನಸೆಳೆಯುವ ನಿಟ್ಟಿನಲ್ಲಿ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ವತಿಯಿಂದ ಮೇ ಕೊನೆಯ ವಾರದಲ್ಲಿ ಮಂಗಳೂರಿನಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದು ಸಮಿತಿ ಸ್ಥಾಪಕಾಧ್ಯಕ್ಷ ತೋನ್ಸೆ ಜಯಕೃಷ್ಣ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಮಿತಿ ನಿಯೋಗವು ಸದ್ಯದಲ್ಲಿಯೇ ರಾಜ್ಯದ ಪರಿಸರ ಮತ್ತು ಅರಣ್ಯ ಸಚಿವ ಈಶ್ವರ ಖಂಡ್ರೆಯವರನ್ನು ಭೇಟಿಯಾಗಲಿದ್ದು, ಉಡುಪಿ ಮತ್ತು ದ,ಕ. ಜಿಲ್ಲೆಯ ನದಿಗಳ ರಕ್ಷಣೆಗಾಗಿ ವಿವಿಧ ಬೇಡಿಕೆಗಳನ್ನು ಸಲ್ಲಿಸಲಿದೆ. ಇದರೊಂದಿಗೆ ಅವಳಿ ಜಿಲ್ಲೆಗಳ ಸಮುದ್ರ ತೀರ ಸ್ವಚ್ಛತೆಯ ಬಗ್ಗೆ ವಿಶೇಷ ಗಮನಹರಿಸಲಿದ್ದೇವೆ ಎಂದರು.

ಜಿಲ್ಲೆಗೆ ನಿರಂತರ ವಿದ್ಯುತ್​ ನೀಡಲು ಆಗ್ರಹ

ಉಡುಪಿ ಜಿಲ್ಲೆಯಲ್ಲೇ ಕಾರ್ಯಾಚರಿಸುತ್ತಿರುವ ಉಷ್ಣ ವಿದ್ಯುತ್​ ಸ್ಥಾವರದಿಂದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೆ 24 * 7 ?ವಿದ್ಯುತ್​ ಪೂರೈಕೆ ಮಾಡಬೇಕು ಎಂಬ ಸಮಿತಿಯ ಹೋರಾಟಕ್ಕೆ ರಾಜ್ಯ ಸರ್ಕಾರ ಸಕರಾತ್ಮಕ ಪ್ರತಿಕ್ರಿಯೆ ನೀಡಿದೆ. ಈ ಬಗ್ಗೆ ಸ್ಪೀಕರ್​ ಯು.ಟಿ ಖಾದರ್​, ಡಿಸಿಎಂ ಡಿಕೆ ಶಿವಕುಮಾರ್​, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್​, ಮಾಜಿ ಸಿಎಂಗಳಾದ ವೀರಪ್ಪ ಮೊಯ್ಲಿ, ಸದಾನಂದ ಗೌಡ ಅವರನ್ನು ಭೇಟಿಯಾಗಿ ಚರ್ಚಿಸಲಾಗಿದ್ದು, ಸಮಿತಿ ಬೇಡಿಕೆ ಹಿನ್ನೆಲೆಯಲ್ಲಿ ಸೂಕ್ತಕ್ರಮಕ್ಕಾಗಿ ಸ್ಪೀಕರ್​ ಯು.ಟಿ. ಖಾದರ್​ ಇಂಧನ ಸಚಿವರಿಗೆ ಪತ್ರವನ್ನು ಬರೆದಿದ್ದಾರೆ ಎಂದರು.

ಉಡುಪಿ ಜಿಲ್ಲೆಯ ಪಡುಬಿದ್ರಿಯಲ್ಲಿ 2010ರಿಂದ ಕಾರ್ಯಾಚರಿಸುತ್ತಿರುವ ಈ ಉಷ್ಣ ವಿದ್ಯುತ್​ ಸ್ಥಾವರ ಪ್ರಸ್ತುತ 1,300 ಮೆಗಾ ವ್ಯಾಟ್​ ವಿದ್ಯುತ್​ ಉತ್ಪಾದಿಸುತ್ತಿದೆ. ಇಲ್ಲಿಂದ ರಾಜಧಾನಿ ಬೆಂಗಳೂರಿಗೆ ಶೇ 45ರಷ್ಟ್ಟು ವಿದ್ಯುತ್​ ಸರಬರಾಜು ಮಾಡಲಾಗುತ್ತಿದೆ. ಇದಕ್ಕೆ ತಮ್ಮ ವಿರೋಧ ಇಲ್ಲ, ಆದರೇ ಈ ಸ್ಥಾವರ ಅಸ್ತಿತ್ವದಲ್ಲಿರುವ ಅವಳಿ ಜಿಲ್ಲೆಗಳಿಗೆ ನಿರಂತರ ವಿದ್ಯುತ್​ ಪೂರೈಕೆಯಾಗಬೇಕು. ನಂತರ ಬೇರೆಡೆಗೆ ಕಳುಹಿಸಬೇಕು ಎಂಬುದು ಸಮಿತಿಯ ಪ್ರಮುಖ ಬೇಡಿಕೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸಮಿತಿ ಅಧ್ಯಕ್ಷ ನಿತ್ಯಾನಂದ ಕೋಟ್ಯಾನ್​, ಉಪಾಧ್ಯಕ್ಷರಾದ ಕೆ.ಪಿ.ಜಗದೀಶ್​ ಅಧಿಕಾರಿ, ಅರುಣ್​ ಪ್ರಕಾಶ್​ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ಸುರೇಂದ್ರ ಮೆಂಡನ್​ ಉಪಸ್ಥಿತರಿದ್ದರು.