ಜಿಲ್ಲೆ

ಸೆ.6ಕ್ಕೆ ಜಯಪುರ ಸಮುದಾಯ ಆರೋಗ್ಯ ಕೇಂದ್ರ ಉದ್ಘಾಟನೆ

ಜಯಪುರ: ವೈದ್ಯರು ರೋಗಿಗಳನ್ನು ಪ್ರೀತಿಯಿಂದ ಮಾತನಾಡಿಸಿ, ಕಾಳಜಿಯಿಂದ ಆರೈಕೆ ಮಾಡಿ ಚಿಕಿತ್ಸೆ ನೀಡಬೇಕು. ಕೇವಲ ದುಡಿಮೆಗಾಗಿ ಬರುವವರು ವೈದ್ಯವೃತ್ತಿ ಬಿಟ್ಟು ಬೇರೆ ವೃತ್ತಿಗಳನ್ನು ನೋಡಿಕೊಳ್ಳಬಹುದು ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.

ಜಯಪುರದ ಸಮುದಾಯ ಆರೋಗ್ಯ ಕೇಂದ್ರ ಉದ್ಘಾಟನಾ ಕಾರ್ಯಕ್ರಮದ ಪೂರ್ವ ತಯಾರಿ ಸಭೆಯಲ್ಲಿ ಮಾತನಾಡಿದ ಅವರು, ಜಯಪುರದ ಸಮುದಾಯ ಆರೋಗ್ಯ ಕೇಂದ್ರ ನಿರ್ಮಾಣ ಕಾರ್ಯವನ್ನು ಪಕ್ಷಾತೀತವಾಗಿ ಪ್ರಶಂಸಿರುವುದು ಸಂತೋಷದ ವಿಷಯ. ಈ ರೀತಿಯ ಪ್ರಶಂಸೆ ಇನ್ನೂ ಹೆಚ್ಚಿನ ಕೆಲಸ ಮಾಡಲು ಸ್ಪೂರ್ತಿ ನೀಡುತ್ತಿದೆ. ಟೀಕೆ ಟಿಪ್ಪಣಿಗಳನ್ನು ಚುನಾವಣಾ ಸಮಯದಲ್ಲಿ ಮಾತ್ರ ಮಾಡೋಣ. ಕೇವಲ ರಾಜಕೀಯ ಪ್ರೇರಿತ ಟೀಕೆಗಳು ಅಭಿವೃದ್ಧಿಗೆ ಸವಾಲಾಗುತ್ತಿವೆ. ಅ.6 ರಂದು ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಹಾಗೂ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆಸ್ಪತ್ರೆ ಉದ್ಘಾಟನೆ ಮಾಡಲಿದ್ದಾರೆ. ನಂತರ ಜಯಪುರ ಬಸ್‌ನಿಲ್ದಾಣದಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ ಎಂದರು.

ಡಿಹೆಚ್‌ಒ ಅಶ್ವಥ್ ಬಾಬು ಮಾತನಾಡಿ, ಅ.6ರಂದು ಬೆಳಗ್ಗೆ ಕೊಪ್ಪದ ತಾಯಿ-ಮಗು ಆಸ್ಪತ್ರೆ ಉದ್ಘಾಟನೆ, ಮಧ್ಯಾಹ್ನ 1ಕ್ಕೆ ಶೃಂಗೇರಿ 100ಬೆಡ್ ಆಸ್ಪತ್ರೆ ಶಂಕುಸ್ಥಾಪನೆ, ಸಂಜೆ 3ಕ್ಕೆ ಜಯಪುರದ ಆಸ್ಪತ್ರೆ ಉದ್ಘಾಟನೆ ಮತ್ತು ಸಾರ್ವಜನಿಕ ಸಭೆ ನಡೆಯಲಿದೆ ಎಂದರು.

ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ನನ್ನ ವಿರುದ್ಧ ಪ್ರಕರಣ ದಾಖಲಾಗಿದೆ ಎಂಬ ಮಾಹಿತಿ ಮಾಧ್ಯಮಗಳಲ್ಲಿ ನೋಡಿದ್ದೇನೆ. ನನಗೆ ಈ ಬಗ್ಗೆ ಯಾವುದೇ ನೋಟೀಸ್ ಬಂದಿಲ್ಲ. ನಾನು ಯಾವುದೇ ಅವ್ಯವಹಾರ ನಡೆಸಿಲ್ಲ. ಈ ಬಗ್ಗೆ ನನ್ನ ಬಳಿ ಎಲ್ಲ ದಾಖಲೆಗಳಿವೆ. ಇದೇ ಪ್ರಕರಣವನ್ನು ಲೋಕಾಯುಕ್ತ ವಿಚಾರಣೆ ನಡೆಸಿ ಕೈ ಬಿಟ್ಟಿದ್ದು, ರಾಜಕೀಯ ದ್ವೇಷಕ್ಕಾಗಿ ಮತ್ತೆ ಪ್ರಕರಣ ದಾಖಲು ಮಾಡಿದ್ದಾರೆ. ನಾನು ಶಾಸಕನಾಗುವ ಮೊದಲಿದ್ದ ಅಸ್ತಿಗಿಂತ ಈಗ ನನ್ನ ಬಳಿ ಜಾಸ್ತಿ ಅಸ್ತಿ ಇದ್ದರೆ ನನ್ನೆಲ್ಲಾ ಅಸ್ತಿಯನ್ನು ಸರ್ಕಾರ ಮುಟ್ಟುಗೊಲು ಹಾಕಿಕೊಳ್ಳಲಿ ಎಂದು ಸವಾಲು ಎಸೆದರು.

ಗ್ರಾಪಂ ಅಧ್ಯಕ್ಷ ಕರುಣಾಕರ, ಸದಸ್ಯರಾದ ಪಣಿರಾಜ್, ಜಯಾಮುರುಗೇಶ್, ಪಳನಿ, ಶ್ರೀನಿವಾಸ್, ಕೀರ್ತಿರಾಜ್, ಸುದೇವ್ ಬಿ ಎಂ, ಮುಖಂಡರಾದ ಹೆಚ್.ಎಂ.ಸತೀಶ್, ರಾಜೇಂದ್ರ ಇದ್ದರು.