ಹುಬ್ಬಳ್ಳಿ: ದಾಜೀಬಾನ ಪೇಟೆಯ ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಶ್ರೀ ತುಳಜಾಭವಾನಿ ದೇವಸ್ಥಾನ ಕೇಂದ್ರ ಪಂಚ ಸಮಿತಿ ಆಶ್ರಯದಲ್ಲಿ ಅ. 29ರಂದು ಬೆಳಗ್ಗೆ 10 ಗಂಟೆಗೆ ಸಮಾಜದ ಕುಲಪುರುಷ ರಾಜರಾಜೇಶ್ವರ ಶ್ರೀ ಸಹಸ್ರಾರ್ಜುನ ಮಹಾರಾಜರ ಜಯಂತಿ ಮಹೋತ್ಸವ ನಿಮಿತ್ತ ಶ್ರೀ ಸಹಸ್ರಾರ್ಜುನ ಮಹಾರಾಜರ ಬೆಳ್ಳಿ ಮೂರ್ತಿಯ ಭವ್ಯ ಮೆರವಣಿಗೆ ಏರ್ಪಡಿಸಲಾಗಿದೆ ಎಂದು ಸಮಿತಿಯ ಚೀಫ್ ಟ್ರಸ್ಟಿ ಸತೀಶ ಮೆಹರವಾಡೆ ತಿಳಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 6 ಗಂಟೆಗೆ ಸಂತ ವಾರಕರಿ ಮಂಡಳಿಯಿಂದ ಕಾಕಡಾರತಿ, 8 ಗಂಟೆಗೆ ಸಹಸ್ರಾರ್ಜುನ ಮಹಾರಾಜರ ಬೆಳ್ಳಿ ಮೂರ್ತಿಗೆ ಅಭಿಷೇಕ, ಬಳಿಕ ತೊಟ್ಟಿಲು ಕಾರ್ಯಕ್ರಮ, ಹೋಮ-ಹವನ ನೆರವೇರಲಿದೆ. ಬೆಳಗ್ಗೆ 9 ಗಂಟೆಗೆ ಧ್ವಜಾರೋಹಣ, 10.30ಕ್ಕೆ ಬೆಳ್ಳಿ ಮೂರ್ತಿ ಹಾಗೂ ತೈಲ ಚಿತ್ರಗಳ ಭವ್ಯ ಮೆರವಣಿಗೆ ನೆರವೇರಲಿದೆ. ಸಂಜೆ 6 ಗಂಟೆಗೆ ಶ್ರೀ ತುಳಜಾಭವಾನಿ ದೇವಸ್ಥಾನದ ಎದುರಿನ ವೇದಿಕೆಯಲ್ಲಿ ಜಯಂತ್ಯುತ್ಸವದ ಸಮಾರೋಪ ಸಮಾರಂಭ ಜರುಗಲಿದೆ.
ವಿಧಾನಸಭೆ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ, ಅಖಿಲ ಭಾರತೀಯ ಎಸ್.ಎಸ್.ಕೆ ಸಮಾಜದ ಅಧ್ಯಕ್ಷ ಶ್ರೀನಿವಾಸ ಹರೀಸಾ ಖೋಡೆ ಉದ್ಘಾಟನೆ ಮಾಡುವರು. ನಾನು ಅಧ್ಯಕ್ಷತೆ ವಹಿಸುವೆ ಎಂದರು.
ಶಾಸಕರಾದ ಪ್ರಸಾದ ಅಬ್ಬಯ್ಯ, ಮಹೇಶ ಟೆಂಗಿನಕಾಯಿ, ಗಣ್ಯರಾದ ಶಾಮ ಕಬಾಡೆ, ಶಶಿಕುಮಾರ ಮೆಹರವಾಡೆ, ಶ್ರೀಧರ ಪವಾರ, ಮಾಜಿ ಶಾಸಕ ಅಶೋಕ ಕಾಟವೆ, ಜಯಂತಿಲಾಲ ಕಟಾರಿಯಾ ಸೇರಿದಂತೆ ಹಲವು ಗಣ್ಯರು ಭಾಗಿಯಾಗಲಿದ್ದಾರೆ ಎಂದರು.
ಎಸ್‌ಎಸ್‌ಕೆ ಸಮಾಜವು ಮೂಲತಃ ಮಧ್ಯಪ್ರದೇಶದ ಮಹಷ್ಮತಿ ಸಾಮಾಜ್ಯದ ಮೂಲಕ ಸಪ್ತಖಂಡಗಳನ್ನಾಳಿರುವ ಸಮಾಜ. ಸಮಾಜದ ಕುಲಪುರುಷ ರಾಜರಾಜೇಶ್ವರ ಶ್ರೀ ಸಹಸ್ರಾರ್ಜುನ ಮಹಾರಾಜರು ಸಪ್ತಖಂಡಗಳನ್ನಾಳಿರುವ ಸಪ್ತ ಮಹಾನ್ ಚಕ್ರವರ್ತಿಗಳಲ್ಲಿ ಒಬ್ಬರು ಎಂಬುದು ನಮ್ಮ ಸಮಾಜದ ಹೆಮ್ಮೆ. ಮೊಗಲರ ಆಳ್ವಿಕೆಯ ವೇಳೆ ನಮ್ಮ ಸಮಾಜವು ದೇಶಾದ್ಯಂತ ಚದುರಿತು. ಸೈನ್ಯ, ನೇಕಾರಿಕೆ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತ ಈಗ ಎಲ್ಲ ಕ್ಷೇತ್ರದಲ್ಲಿಯೂ ಛಾಪು ಮೂಡಿಸಿದೆ ಎಂದರು.
ಹುಬ್ಬಳ್ಳಿಯಲ್ಲಿ ಐದು ನೂರು ವರ್ಷಗಳ ಹಿಂದೆ ಬಂದು ಈ ಸಮಾಜ ನೆಲೆಸಿದೆ. ಈಗ ಒಂದು ಲಕ್ಷ 50 ಸಾವಿರ ಜನರು ಇದ್ದಾರೆ. ಎಸ್‌ಎಸ್‌ಕೆ ಕೇಂದ್ರ ಪಂಚ ಸಮಿತಿಯು 54 ಟ್ರಸ್ಟಿಗಳ ಮುಂದಾಳತ್ವದಲ್ಲಿ ಸಮಾಜ ಮುನ್ನಡೆಯುತ್ತಿದೆ. ಪ್ರಸ್ತುತ ಎಸ್‌ಎಸ್‌ಕೆ ಕೇಂದ್ರ ಪಂಚ ಸಮಿಯು ಶ್ರೀ ತುಳಜಾಭವಾನಿ ದೇವಸ್ಥಾನ, 2 ಕಲ್ಯಾಣ ಮಂಟಪ, ಎಸ್‌ಎಸ್‌ಕೆ ಕಾಲೇಜ್, 2 ವಾಣಿಜ್ಯ ಕಟ್ಟಡ ಸೇರಿ ಇತರ ಕಟ್ಟಡಗಳನ್ನು ಹೊಂದಿದೆ ಎಂದರು.
ಕುಸುಗಲ್ ರಸ್ತೆಯ ದೇಶಪಾಂಡೆ ಲೇಔಟ್‌ನಲ್ಲಿ ನಾಗರಿಕ ಸೌಲಭ್ಯದಡಿ 36 ಗುಂಟೆ ನಿವೇಶನವನ್ನು ಶೇ. 10ರಷ್ಟು ಶುಲ್ಕ ತುಂಬಿ (ಕರ್ನಾಟಕ ಸರ್ಕಾರದ ಸಚಿವ ಸಂಪುಟದ ನಿರ್ಣಯದಂತೆ) ಪಡೆಯಲಾಗಿದೆ. ಇಲ್ಲಿ ಶ್ರೀಸಹಸ್ರಾರ್ಜುನ ಮಹಾರಾಜರ ಬೃಹತ್ ನಿರ್ಮಿಸಿ ಪ್ರವಾಸಿ ತಾಣ ಮಾಡುವ ಸಂಕಲ್ಪವಿದೆ. ಅಲ್ಲದೇ ಕನಿಷ್ಠ 5 ಎಕರೆ ಸ್ಥಳ ಪಡೆದು ಮೆಡಿಕಲ್ ಮತ್ತು ಇಂಜಿನಿಯರಿಂಗ್ ಕಾಲೇಜ್ ಸ್ಥಾಪಿಸುವ ಯೋಜನೆ ಇದ್ದು, ಶೀಘ್ರವೇ ಚಾಲನೆ ಸಿಗಲಿದೆ ಎಂದರು.
ಮಾಜಿ ಶಾಸಕ ಅಶೋಕ ಕಾಟವೆ, ಉಪ ಚೀಫ್ ಟ್ರಸ್ಟಿ ಭಾಸ್ಕರ ಜಿತೂರಿ, ಪ್ರಮುಖರಾದ ರಂಗಾ ಬದ್ದಿ, ವಿಠ್ಠಲ ಲದವಾ, ನೀಲಕಂಠಸಾ ಜಡಿ, ಗೋಪಾಲ ಬದ್ದಿ, ಸಾಯಿ ದಲಬಂಜನ ಇತರರು ಸುದ್ದಿಗೋಷ್ಠಿಯಲ್ಲಿದ್ದರು.