ಜಿಲ್ಲೆ

ಜಯಂತಿಗಳಿಂದ ಸಮುದಾಯ ಸಂಘಟನೆ, ರಾಜ್ಯ ಸವಿತಾ ಸಮಾಜದ ನಿಕಟಪೂರ್ವ ಅಧ್ಯಕ್ಷ ಯು.ಕೃಷ್ಣಮೂರ್ತಿ ಅಭಿಮತ

Bengaluru Rural

ನೆಲಮಂಗಲ: ಮಹನೀಯರ ಜಯಂತಿಗಳು ಸಮಾಜ ಸಂಘಟನೆಗೆ ಸಹಕಾರಿ ಎಂದು ರಾಜ್ಯ ಸವಿತಾ ಸಮಾಜದ ನಿಕಟಪೂರ್ವ ಅಧ್ಯಕ್ಷ ಯು.ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು.

ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ರಾಜ್ಯ ಸವಿತಾಸಮಾಜದ ತಾಲೂಕು ಘಟಕ ಆಯೋಜಿಸಿದ್ದ ಸವಿತಾ ಮಹರ್ಷಿ ಜಯಂತಿಯಲ್ಲಿ ಮಾತನಾಡಿದರು.

ಸಮಾಜದ ಇತರೆ ವರ್ಗಗಳಂತೆ ಸವಿತಾ ಮಹರ್ಷಿ ಜಯಂತಿ ಆಚರಣೆ ಜಾರಿಮಾಡುವಂತೆ ಅನೇಕ ವರ್ಷ ಮಾಡಿದ ಹೋರಾಟದ ಲವಾಗಿ ಸರ್ಕಾರದಿಂದ ಆಚರಣೆ ಮಾಡಲಾಗುತ್ತಿದೆ. ಹಾಗೆಯೇ ಸಮಾಜದ ಅಭಿವೃದ್ಧಿ ನಿಗಮ ಸ್ಥಾಪನೆಗೂ ಚಾಲನೆ ದೊರೆತಿದೆ. ಸಿಎಂ ಯಡಿಯೂರಪ್ಪ ಈಗಾಗಲೇ 7 ಕೋಟಿ ಅನುದಾನ ಮೀಸಲಿಟ್ಟಿದ್ದು ಮುಂಬರುವ ಬಜೆಟ್‌ನಲ್ಲಿ 100 ಕೋಟಿ ರೂ. ಮೀಸಲಿಡುವಂತೆ ಒತ್ತಾಯ ಮಾಡಲಾಗುವುದು ಎಂದರು.

ಮುಖಂಡ ಎಂ.ಬಿ.ಶಿವಕುಮಾರ್ ಮಾತನಾಡಿ, ಪರಿಶಿಷ್ಟ ಜಾತಿ, ವರ್ಗಗಳಂತೆ ಸವಿತಾ ಸಮಾಜಕ್ಕೂ ವಿಶೇಷ ಸೌಲಭ್ಯ ಒದಗಿಸಬೇಕು. ಸಮುದಾಯದ ಸಮಾರಂಭಗಳಲ್ಲಿ ಜನಪ್ರತಿನಿಧಿಗಳು, ತಾಲೂಕುಮಟ್ಟದ ಅಧಿಕಾರಿಗಳನ್ನು ಆಹ್ವಾನಿಸಿ ಸಮಾಜದ ಸಮಸ್ಯೆ ಮನವರಿಕೆ ಮಾಡಿಕೊಟ್ಟು ಪರಿಹಾರ ಕಂಡುಕೊಳ್ಳಬೇಕು ಎಂದರು.

ಬಿಹಾರದಲ್ಲಿ 3 ಬಾರಿ ಮುಖ್ಯಮಂತ್ರಿಯಾಗಿ ದೇಶದಲ್ಲಿ ಮೊದಲ ಬಾರಿಗೆ ಮದ್ಯ ನಿಷೇಧ ಖ್ಯಾತಿಗೆ ಪಾತ್ರರಾಗಿರುವ ಸಮುದಾಯದ ಕಪೂರಿ ಠಾಕೂರ್ ಅವರಿಗೆ ಭಾರತರತ್ನ ನೀಡುವಂತೆ ಒತ್ತಾಯಿಸಿದರು.

ಸಂಘಟನಾತ್ಮಕ ದೃಷ್ಟಿಯಿಂದ ಸಮಾಜದ ಯುವಕರು ಒಂದಾಗಬೇಕು. ಒಳಪಂಗಡ, ಭಾಷೆ, ರಾಜ್ಯಗಳ ಹೆಸರಿನಲ್ಲಿ ಸಮಾಜ ವಿಭಜನೆ ಮಾಡಿಕೊಳ್ಳುವುದು ಒಳ್ಳೆಯದಲ್ಲ. ಮೊದಲು ನಾವೆಲ್ಲ ಭಾರತೀಯರು ಎಂಬ ವಿಶಾಲ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದು ಯೋಗಶಿಕ್ಷಕ ನಾಮದೇವ್‌ನಾಗರಾಜು ಮನವಿ ಮಾಡಿದರು.

ಕ್ಷೌರಕುಟೀರ ಯೋಜನೆ ಜಾರಿಗೆ ತಂದು ಸಮಾಜದ ಬಡಜನರಿಗೆ ಅನುಕೂಲ ಮಾಡಿಕೊಡಬೇಕು ಎಂದರು.

ಸವಿತಾ ಭವನ ನಿರ್ಮಾಣಕ್ಕಾಗಿ ಅಗತ್ಯವಿರುವ ನಿವೇಶನ ನೀಡುವಂತೆ ಸಮುದಾಯದ ಮುಖಂಡರು ತಹಸೀಲ್ದಾರ್‌ಗೆ ಮನವಿ ಮಾಡಿದರು. ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಹಸೀಲ್ದಾರ್ ಎಂ.ಶ್ರೀನಿವಾಸಯ್ಯ ತಿಳಿಸಿದರು.

ಪ್ರವಾಸಿಮಂದಿರದಿಂದ ತಾಲೂಕು ಕಚೇರಿವರೆಗೆ ಸವಿತಾಮಹರ್ಷಿ ಭಾವಚಿತ್ರ ಹಾಗೂ ಕುಂಚೂರುಮಠದ ಶ್ರೀ ಶ್ರೀಧರಾನಂದಸರಸ್ವತಿ ಸ್ವಾಮೀಜಿವನ್ನು ಬೆಳ್ಳಿರಥದಲ್ಲಿ ಮೆರವಣಿಗೆ ಮಾಡಲಾಯಿತು.

ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ, ಬಿಜೆಪಿ ಎಸ್‌ಸಿ ಮೋರ್ಚಾ ಜಿಲ್ಲಾಧ್ಯಕ್ಷ ಬಿ.ಹೊಂಬಯ್ಯ, ಬೆಂಗಳೂರು ಸವಿತಾ ಸಮಾಜದ ಮುಖಂಡರಾದ ನರೇಶ್, ಎ.ಸುರೇಶ್, ಲಕ್ಷ್ಮೀಪ್ರಸನ್ನ, ಶ್ರೀನಿವಾಸ್, ಶ್ರೀಕಾಂತ್, ಕುಣಿಗಲ್ ನಾರಾಯಣ್, ತಾಲೂಕು ಸವಿತಾ ಸಮಾಜದ ಗೌರವಾಧ್ಯಕ್ಷ ಮುತ್ತುರಾಜ್, ಅಧ್ಯಕ್ಷ ಬಿ.ಎಂ.ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಸಿ.ಅಶೋಕ್, ಖಜಾಂಚಿ ರಮೇಶ್‌ರಾಮ್, ಸಂಚಾಲಕ ಹನುಮಂತರಾಯ, ನಗರ ಘಟಕ ಅಧ್ಯಕ್ಷ ವಿ.ಶ್ರೀನಿವಾಸ್, ಪ್ರ,ಕಾರ್ಯದರ್ಶಿ ನವೀನ್‌ರಾಜ್, ಖಜಾಂಚಿ ಶಿವಕುಮಾರ್ ಮತ್ತಿತರರು ಇದ್ದರು.