ಗಂಗೊಳ್ಳಿ: ಗಂಗೊಳ್ಳಿ ಗ್ರಾಪಂ ಕಾಂಗ್ರೆಸ್ ತೆಕ್ಕೆಗೆ ಜಾರಿದ್ದು, ಮೊದಲ ಅವಧಿಗೆ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಸದಸ್ಯೆ ಜಯಂತಿ ಖಾರ್ವಿ ಮತ್ತು ಉಪಾಧ್ಯಕ್ಷರಾಗಿ ಎಸ್‌ಡಿಪಿಐ ಬೆಂಬಲಿತ ಸದಸ್ಯ ತಬ್ರೇಜ್ ಆಯ್ಕೆಯಾದರು.
ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಅ (ಮಹಿಳೆ)ಕ್ಕೆ ಮೀಸಲಾಗಿದ್ದರಿಂದ ಅಧ್ಯಕ್ಷ ಸ್ಥಾನಕ್ಕೆ ಗಂಗೊಳ್ಳಿ-6 ಕ್ಷೇತ್ರದಿಂದ ಗೆದ್ದ ಕಾಂಗ್ರೆಸ್ ಬೆಂಬಲಿತ ಜಯಂತಿ ಖಾರ್ವಿ ಮತ್ತು ಗಂಗೊಳ್ಳಿ-1 ಕ್ಷೇತ್ರದಿಂದ ಗೆದ್ದ ಬಿಜೆಪಿ ಬೆಂಬಲಿತ ರೇಖಾ ಖಾರ್ವಿ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದರಿಂದ ಗಂಗೊಳ್ಳಿ-2 ಕ್ಷೇತ್ರದಿಂದ ಗೆದ್ದ ಎಸ್‌ಡಿಪಿಐ ಬೆಂಬಲಿತ ತಬ್ರೇಜ್ ಮತ್ತು ಗಂಗೊಳ್ಳಿ-1 ಕ್ಷೇತ್ರದಿಂದ ಗೆದ್ದ ಬಿಜೆಪಿ ಬೆಂಬಲಿತ ನಾಗರಾಜ ಖಾರ್ವಿ ನಾಮಪತ್ರ ಸಲ್ಲಿಸಿದ್ದರು. ಜಯಂತಿ ಖಾರ್ವಿ 19, ರೇಖಾ ಖಾರ್ವಿ 13 ಮತ ಪಡೆದರು. ಒಂದು ಮತ ಅಸಿಂಧುವಾಯಿತು. ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ತಬ್ರೇಜ್ 18, ನಾಗರಾಜ ಖಾರ್ವಿ 15 ಮತ ಪಡೆದುಕೊಂಡರು. ಬಿಜೆಪಿಯಿಂದ ಬಂಡಾಯವಾಗಿ ಸ್ಪರ್ಧಿಸಿ ಗೆದ್ದ ಇಬ್ಬರು ಪಕ್ಷೇತರ ಅಭ್ಯರ್ಥಿಗಳು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಗೆ ಬೆಂಬಲ ಘೋಷಿಸಿದರು. ರಸ್ತೆ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಾಂಗ್ರೆಸ್ ಬೆಂಬಲಿತ ಸದಸ್ಯ ರಿಯಾಜ್ ಅಹಮ್ಮದ್ ಆಂಬುಲೆನ್ಸ್‌ನಲ್ಲಿ ಬಂದು ಮತ ಚಲಾಯಿಸಿದರು.
ಕುಂದಾಪುರ ತಾಲೂಕು ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಅರುಣ್ ಕುಮಾರ್ ಶೆಟ್ಟಿ ಚುನಾವಣಾ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು. ಪಿಡಿಒ ಉಮಾಶಂಕರ, ಗ್ರಾಪಂನ ನಾರಾಯಣ ಶ್ಯಾನುಭಾಗ್ ಹಾಗೂ ಸಿಬ್ಬಂದಿ ಸಹಕರಿಸಿದರು.