ಮೈಸೂರು: ಸಾಧಕರ ಸಂದೇಶಗಳನ್ನು, ಜೀವನ ಮೌಲ್ಯಗಳನ್ನು ಸಮಾಜಕ್ಕೆ ನೀಡುವ ಸಲುವಾಗಿ ಜಯಂತಿಗಳನ್ನು ಆಚರಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಡಾ. ಪಿ.ಶಿವರಾಜು ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ದೇವರ ದಾಸಿಮಯ್ಯ ಜಯಂತಿ ಹಾಗೂ ಭಗವಾನ್ ಮಹಾವೀರ ಜಯಂತಿಗಳ ಆಚರಣೆ ಸಂಬಂಧ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿವಿಧ ಜಯಂತಿಗಳನ್ನು ಅರ್ಥಪೂರ್ಣವಾಗಿ ಹಾಗೂ ಮಹಾನುಭವರ, ಸಾಧಕರ ಸಂದೇಶಗಳನ್ನು ಜೀವನ ಮೌಲ್ಯಗಳನ್ನು ಸಮಾಜಕ್ಕೆ ನೀಡುವ ಸಲುವಾಗಿ ಜಯಂತಿಗಳನ್ನು ಆಚರಿಸಲಾಗುವುದು ಎಂದು ತಿಳಿಸಿದರು.
ಏ.2ರಂದು ಬೆಳಗ್ಗೆ ದೇವರ ದಾಸಿಮಯ್ಯ ಜಯಂತಿಯ ಮೆರವಣಿಗೆ ಕೋಟೆ ಆಂಜನೇಯ ದೇವಸ್ಥಾನದ ಆವರಣದಿಂದ ಆರಂಭಗೊಂಡು ಕಲಾಮಂದಿರ ಆವರಣ ತಲುಪಲಿದೆ. ಬೆಳಗ್ಗೆ 11.30 ಗಂಟೆಗೆ ದೇವರ ದಾಸಿಮಯ್ಯ ಜಯಂತಿಯನ್ನು ಕರ್ನಾಟಕ ಕಲಾಮಂದಿರದಲ್ಲಿ ಆಚರಿಸಲಾಗುವುದು ಎಂದು ಹೇಳಿದರು.
ಏ.10 ರಂದು ಭಗವಾನ್ ಮಹಾವೀರ ಜಯಂತಿ ಅಂಗವಾಗಿ ಕಲಾಮಂದಿರದಲ್ಲಿ ಸಂಜೆ 4 ಗಂಟೆಗೆ ಗೀತ ಗಾಯನ ಹಾಗೂ ಸಂಜೆ 6ಕ್ಕೆ ಭಗವಾನ್ ಮಹಾವೀರ ಜಯಂತಿ ಆಚರಿಸಲಾಗುವುದು ಎಂದು ತಿಳಿಸಿದರು.
ಜಯಂತಿಗಳ ಆಚರಣೆ ಕೇವಲ ಒಂದು ಸಮುದಾಯಕ್ಕೆ ಸೀಮಿತವಲ್ಲ. ಎಲ್ಲ ಸಮುದಾಯದವರು ಸೇರಿ ಜಯಂತಿಗಳನ್ನು ಆಚರಿಸಬೇಕು. ಜಯಂತಿ ಆಚರಣೆಯ ಉದ್ದೇಶ ಮಹನೀಯರ ಆದರ್ಶಗಳನ್ನು ಪಾಲನೆ ಮಾಡುವುದೇ ಆಗಿದೆ ಎಂದರು.
ಮೆರವಣಿಗೆ ಆರಂಭವಾಗುವ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಶಾಮಿಯಾನ ಸ್ವಚ್ಛತೆ, ಆಸನಗಳ ವ್ಯವಸ್ಥೆ, ಜಯಂತಿ ನಡೆಯುವ ಸ್ಥಳದ ಸ್ವಚ್ಛತೆ, ಕುಡಿಯುವ ನೀರಿನ ವ್ಯವಸ್ಥೆ, ತಳಿರು-ತೋರಣ, ಊಟದ ಜಾಗಕ್ಕೆ ಶಾಮಿಯಾನ ವ್ಯವಸ್ಥೆಯನ್ನು ನಗರಪಾಲಿಕೆ ಮಾಡಬೇಕು ಎಂದು ಹೇಳಿದರು.
ಸಮುದಾಯದ ಮುಖಂಡರು ತಮ್ಮ ಸಮುದಾಯದ ಬಡವರಿಗೆ ಸಹಾಯ ಮಾಡಬೇಕು. ಸಮುದಾಯದ ಮಕ್ಕಳಿಗೆ ಶೈಕ್ಷಣಿಕವಾಗಿ ನೆರವವು ಒದಗಿಸಬೇಕು. ಜಯಂತಿಗಳನ್ನು ಆಚರಿಸುವುದು ಅವರ ಆಚಾರ ವಿಚಾರಧಾರೆಗಳನ್ನು ಯುವ ಜನತೆ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಆಗ ಜಯಂತಿಗಳನ್ನು ಆಚರಣೆ ಮಾಡಿದ್ದಕ್ಕೆ ಒಂದು ಅರ್ಥ ಬರುತ್ತದೆ ಎಂದು ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಎಂ.ಡಿ. ಸುದರ್ಶನ್ ಮಾತನಾಡಿ, ಜಯಂತಿಗಳ ಆಚರಣೆಗೆ ಶಿಷ್ಟಾಚಾರದಂತೆ ಆಮಂತ್ರಣ ಪತ್ರಿಕೆ ಮುದ್ರಿಸಿ ಜನಪ್ರತಿನಿಧಿಗಳಿಗೆ ಮುಖಂಡರಿಗೆ ಆಹ್ವಾನ ನೀಡಲಾಗುವುದು. ಮೆರವಣಿಗೆಗೆ ಕಲಾ ತಂಡಗಳನ್ನು ನೀಡಲಾಗುವುದು. ಕಲಾಮಂದಿರದಲ್ಲಿ ಗೀತಾ ಗಾಯನ ಆಯೋಜಿಸಲಾಗುವುದು ಎಂದು ಹೇಳಿದರು.
ಜಯಂತಿ ಆಚರಣೆಯ ಸಾನ್ನಿಧ್ಯ ವಹಿಸಲು ತಮ್ಮ ಸಮುದಾಯದ ಸ್ವಾಮೀಜಿಗಳ ಹೆಸರನ್ನು ಆಯ್ಕೆ ಮಾಡಿ, ಒಂದೆರಡು ದಿನಗಳಲ್ಲಿ ನೀಡಲಾಗುವುದು. ಜಯಂತಿಯಲ್ಲಿ ವಿಶೇಷ ಉಪನ್ಯಾಸ ನೀಡಲು ಸಂಪನ್ಮೂಲ ವ್ಯಕ್ತಿಗಳನ್ನು ಆಯ್ಕೆ ಮಾಡಿ ಹೆಸರನ್ನು ನೀಡಲಾಗುವುದು ಎಂದು ಸಮುದಾಯದ ಮುಖಂಡರು ಸಭೆಗೆ ಮಾಹಿತಿ ನೀಡಿದರು.
ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ವಿವಿಧ ಜಯಂತಿಗಳ ಆಚರಣೆಯ ಸಂಬಂಧ ಸಮುದಾಯಗಳ ಮುಖಂಡರು ಇದ್ದರು.