ಜಿಲ್ಲೆ

ಮೂಡನಂಬಿಕೆ ವಿರುದ್ಧ ಹೋರಾಡಿದ ಕ್ರಾಂತಿಕಾರಿ

ಶಿವರಾಜ.ಎಂ

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ಸಾಮಾಜಿಕ ಅಸಮಾನತೆ, ಅಸ್ಪೃಶ್ಯತೆ, ಜಾತಿ ವ್ಯವಸ್ಥೆ, ಮೂಢನಂಬಿಕೆ ವಿರುದ್ಧ ಹೋರಾಡಿ ಸಮಾಜದಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತರಲು ಹಡಪದ ಅಪ್ಪಣ ಅವರು ತಮ್ಮ ವಚನಗಳ ಮೂಲಕ ಶ್ರಮಿಸಿರುವುದು ಅವಿಸ್ಮರಣೀಯ ಎಂದು ಅಪರ ಜಿಲ್ಲಾಧಿಕಾರಿ ಸೈಯಿದಾ ಆಯಿಶಾ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ದೇವನಹಳ್ಳಿ ತಾಲೂಕಿನ ಬೀರಸಂದ್ರ ಗ್ರಾಮದ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ‘ಹಡಪದ ಅಪ್ಪಣ’ ಜಯಂತಿಯಲ್ಲಿ ಮಾತನಾಡಿದರು. ಹನ್ನೆರಡನೆಯ ಶತಮಾನದ ವಚನ ಚಳುವಳಿ ಮತ್ತು ಸಾಮಾಜಿಕ ಕ್ರಾಂತಿಯ ಹರಿಕಾರ, ಅನುಭವ ಮಂಟಪದ ಪ್ರಧಾನ ಕಾರ್ಯದರ್ಶಿಯಾಗಿದ್ದ ಹಪಪದ ಅವರು ಬಸವಣ್ಣನವರಿಗೆ ಬಲಗೈ ಭಂಟನೆಂದೆ ಹೆಸರು ಪಡೆದಿದ್ದರು ಎಂದು ಸ್ಮರಿಸಿದರು. ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮಸಬಿನಾಳಗ್ರಾಮದ ಚೆನ್ನವೀರಪ್ಪ , ದೇವಕ್ಕೆಮ್ಮನವರ ಮಗನಾಗಿ ಜನಿಸಿದರು. ಲಿಂಗಮ್ಮಅಪ್ಪಣ್ಣನ ಪತ್ನಿ. ಬಸವಪ್ರಿಯ ಕೂಡಲ ಚೆನ್ನಬಸವಣ್ಣ ಎಂಬ ಅಂಕಿತ ನಾಮದಲ್ಲಿ ಸುಮಾರು 250 ವಚನಗಳನ್ನು ಬರೆದಿದ್ದಾರೆ. ಇವರ ಪತ್ನಿ ಶಿವಶರಣೆ ಲಿಂಗಮ್ಮ ಅಪ್ಪಣ್ಣ ಪ್ರಿಯ ಚೆನ್ನಬಸವಣ್ಣ ಅಂಕಿತದಲ್ಲಿ 114 ವಚನಗಳನ್ನು ರಚಿಸಿದ್ದಾರೆ. ಚೆನ್ನಮಲ್ಲೇಶ್ವರ ಅಪ್ಪಣ್ಣನ ಪರಮ ಗುರು. ಕಾರ್ಯ ನಿಷ್ಠೆ, ಜೀವನ ನಿಷ್ಠೆ, ಹಾಗೂ ಸೇವಾ ನಿಷ್ಠೆಗಳು ಇವರ ವ್ಯಕ್ತಿತ್ವದ ವಿಶೇಷತೆಗಳು ಎಂದರು.

ಭಾವಚಿತ್ರಕ್ಕೆ ಪುಷ್ಪಾರ್ಚನೆ: ಅಪರ ಜಿಲ್ಲಾಧಿಕಾರಿ ಸೈಯಿದಾ ಆಯಿಶಾ ಹಡಪದ ಅಪ್ಪಣ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಗೌರವ ನಮನ ಸಲ್ಲಿಸಿದರು.