ಜಿಲ್ಲೆ

ಜಯಂತಿಗಳು ಸಂಶೋಧನೆಗೆ ಹೊಸ ದೃಷ್ಟಿಕೋನ ಒದಗಿಸಲಿ

Dharwad

ಧಾರವಾಡ: ಮಹಾನ್ ವ್ಯಕ್ತಿಗಳ ಜಯಂತಿ ಆಚರಣೆಗಳ ಮೂಲಕ ವಿದ್ಯಾರ್ಥಿಗಳು ತಮ್ಮ ಸಂಶೋಧನೆಗೆ ಹೊಸ ದೃಷ್ಟಿಕೋನ ಕಂಡುಕೊಳ್ಳಬೇಕು. ಬುಡಕಟ್ಟು ಸಮುದಾಯಗಳು, ಪರಿಸರ ಹಾಗೂ ಸಾಮಾಜಿಕ, ಸಾಂಸ್ಕೃತಿಕ ಅಧ್ಯಯನದ ಹಿನ್ನೆಲೆಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಆಯುಕ್ತ ಡಾ. ರವಿಕುಮಾರ ಸುರಪುರ ಹೇಳಿದರು.

ನಗರದ ಕರ್ನಾಟಕ ವಿಶ್ವ ವಿದ್ಯಾಲಯದ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರಾಜನಿಗೆ ಅಥವಾ ದೊರೆಗೆ ತನ್ನ ನಾಡಿನಲ್ಲಿ ಮಾತ್ರ ಗೌರವ ದೊರೆತರೆ, ಜ್ಞಾನಿಯಾದವನಿಗೆ ಎಲ್ಲೆಡೆ ಗೌರವ ಸಿಗುತ್ತದೆ. ಭಾರತದ ಮೊಟ್ಟಮೊದಲ ಮಹಾಕಾವ್ಯ ರಚಿಸಿದ ಮಹರ್ಷಿ ವಾಲ್ಮೀಕಿ ಬೇಡ ಸಮುದಾಯದ ಬುಡಕಟ್ಟಿಗೆ ಸೇರಿದ್ದರೂ ಆತ ತನ್ನ ಪ್ರತಿಭೆ ಮೂಲಕ ಜಗತ್ತಿನ ಗೌರವಕ್ಕೆ ಪಾತ್ರನಾಗಿದ್ದಾನೆ ಎಂದರು.

ಅಬಕಾರಿ ಉಪ ಆಯುಕ್ತ ಶಿವನಗೌಡ ಪಾಟೀಲ ಮಾತನಾಡಿದರು. ಗೋಕಾಕದ ನಿವೃತ್ತ ಪ್ರಾಧ್ಯಾಪಕ ಡಾ. ಅರ್ಜುನ ಪಂಗಣ್ಣವರ ವಿಶೇಷ ಉಪನ್ಯಾಸ ನೀಡಿದರು. ಮಹರ್ಷಿ ವಾಲ್ಮೀಕಿ ಬದುಕು ಮತ್ತು ಕೃತಿಗಳು ಎಂಬ ಗ್ರಂಥ ಬಿಡುಗಡೆ ಮಾಡಲಾಯಿತು. ಕುಲಪತಿ ಡಾ. ಕೆ.ಬಿ. ಗುಡಸಿ ಅಧ್ಯಕ್ಷತೆ ವಹಿಸಿದ್ದರು.

ಕುಲಸಚಿವ ಡಾ. ಕೆ.ಟಿ. ಹನುಮಂತಪ್ಪ, ಮೌಲ್ಯಮಾಪನ ಕುಲಸಚಿವ ಡಾ. ರವೀಂದ್ರ ಕದಂ, ಹಣಕಾಸು ಅಧಿಕಾರಿ ಡಾ. ಆರ್.ಆರ್. ಬಿರಾದಾರ, ಎನ್.ಆರ್. ಸಾಧನಿ, ಡಾ. ಜಿ.ಎಸ್. ವೇಣುಮಾಧವ, ಕರ್ನಾಟಕ ಕಲಾ ಕಾಲೇಜಿನ ಪ್ರಾಚಾರ್ಯ ಡಾ. ಡಿ.ಬಿ. ಕರಡೋಣಿ ಇತರರಿದ್ದರು.

ಸಾಮಾಜಿಕ ಸಮಸ್ಯೆಗೆ ಪರಿಹಾರ: ಜಯಂತಿ ಆಚರಣೆಗಳ ಸಂದರ್ಭದಲ್ಲಿ ತಜ್ಞರು, ಚಿಂತಕರು ಒಂದೆಡೆ ಸೇರುವುದರಿಂದ ಅನೇಕ ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಹಕಾರಿಯಾಗುತ್ತದೆ. ಒಬ್ಬ ವ್ಯಕ್ತಿಯ ಜೀವನದಲ್ಲಿ ಯಾವುದೇ ದುರಂತವಾದರೂ ವಿಚಲಿತನಾಗದೆ ಸಂಯಮದಿಂದ ವರ್ತಿಸಬೇಕು. ಬದುಕಿನ ಆಶಯಗಳನ್ನು ಕಳೆದುಕೊಳ್ಳದೆ ಗಟ್ಟಿಯಾಗಿ ನಿಂತು ಆದರ್ಶ ಬದುಕನ್ನು ಸಾಗಿಸುವ ನೀತಿ ರಾಮನ ಜೀವನದಿಂದ ಅರಿಯಬೇಕು. ವರ್ತಮಾನದಲ್ಲಿ ಜಾಗತಿಕವಾಗಿ ಆತ್ಮಹತ್ಯೆಗಳ ಸಂಖ್ಯೆ ಏರುತ್ತಿರುವ ಸಂದರ್ಭದಲ್ಲಿ ರಾಮನ ಬದುಕಿನಿಂದ ನಾವು ಸಂಯಮ, ಸ್ಥಿರತೆಯ ಪಾಠಗಳನ್ನು ಕಲಿಯಬೇಕು ಎಂದು ಡಾ. ರವಿಕುಮಾರ ಹೇಳಿದರು.