ಬೇಲೂರು: ಸಾಹಿತಿ ಬೇಲೂರು ಕೃಷ್ಣಮೂರ್ತಿ ಅವರು ದೈಹಿಕ ಶಿಕ್ಷಣ ಶಿಕ್ಷಕ, ನಾಟಕಕಾರ, ನಾಟಕ ರಚನೆಕಾರರಾಗಿ ಉತ್ತಮ ಹೆಸರು ಪಡೆಯುವ ಮೂಲಕ ಇಂದಿಗೂ ಜನರ ಮನಸ್ಸಿನಲ್ಲಿ ಉಳಿದಿದ್ದಾರೆ ಎಂದು ಕಸಾಪ ತಾಲೂಕು ಅಧ್ಯಕ್ಷ ಮಾ.ನಾ.ಮಂಜೇಗೌಡ ಹೇಳಿದರು.
ಸಾಹಿತಿ ದಿ.ಬೇಲೂರು ಕೃಷ್ಣಮೂರ್ತಿ ಅವರ ಜಯಂತಿ ಅಂಗವಾಗಿ ಪಟ್ಟಣದ ಕಸಾಪ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೇಲೂರು ಕೃಷ್ಣಮೂರ್ತಿ ಅವರು ಶಿಸ್ತಿನ ಸಿಪಾಯಿಯಾಗಿ ಸಮಯ ಪರಿಪಾಲನೆ ಮಾಡುತಿದ್ದರು. ತಮ್ಮ ನಾಟಕಗಳ ಮೂಲಕವೇ ಸಮಾಜವನ್ನು ತಿದ್ದುವ, ಜನರಲ್ಲಿ ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸುವ ಹಾಗೂ ಜಾತಿ ಪದ್ಧತಿಯನ್ನು ಹೋಗಲಾಡಿಸುವತ್ತ ಹೆಚ್ಚು ಒತ್ತು ಕೊಡುತಿದ್ದರು. ಅವರ ನಾಟಕಗಳು ಇಂದಿಗೂ ಮನೆ ಮಾತಾಗಿವೆ. ಕೆಲವು ಚಲನಚಿತ್ರಗಳಾಗಿ ಮೂಡಿ ಬಂದಿವೆ. ಅಲ್ಲದೆ ನೂರಕ್ಕೂ ಹೆಚ್ಚು ನಾಟಕಗಳನ್ನು ಬರೆದು ಶತ ನಾಟಕ ಸಾರ್ವಭೌಮ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಎಂದರು.
ಸಾಹಿತಿ ಇಂದಿರಮ್ಮ ಮಾತನಾಡಿ, ಸಾಹಿತಿ ದಿ.ಬೇಲೂರು ಕೃಷ್ಣಮೂರ್ತಿ ಅವರು ನಾಟಕಗಳು ಚಲನಚಿತ್ರಗಳಾಗಿ ಮಾರ್ಪಟ್ಟಿರುವುದು ಬೇಲೂರಿಗೆ ಕೀರ್ತಿ ತಂದಿದೆ. ಶಾಲೆಯಲ್ಲಿ ಅವರು ನಮ್ಮ ಗುರುಗಳಾಗಿ, ಮಾರ್ಗದರ್ಶಕರಾಗಿ ಉತ್ತಮ ಕೆಲಸ ಮಾಡಿದ್ದಾರೆ ಎಂದರು.
ಕಸಾಪದ ಸುಲೇಮಾನ್, ಗೌರವ ಸಲಹೆಗಾರ ಶಿವಮೂರ್ತಿ, ಗೌರವಾಧ್ಯಕ್ಷ ರಾಜೇಗೌಡ, ಸಾಂಸ್ಕೃತಿಕ ಕಾರ್ಯದರ್ಶಿ ಕುಮಾರಸ್ವಾಮಿ, ಕೃಷ್ಣಮೂರ್ತಿ, ನಿವೃತ್ತ ತಹಸೀಲ್ದಾರ್ ಅಣ್ಣೇಗೌಡ, ನಿರ್ದೇಶಕರಾದ ಧರ್ಮ ಪ್ರಕೃತಿ, ಶೋಭಾ, ನಾಗರಾಜ್, ಜಾದುಗಾರ ವಸಂತ್, ಮಂಜಣ್ಣ ಕಲ್ಪನಾ ಸೇರಿದಂತೆ ಇತರರಿದ್ದರು.