ಜಿಲ್ಲೆ

ಕಾಶಪ್ಪನವರ ಜಯಮೃತ್ಯುಂಜಯ ಶ್ರೀಗಳ ಕ್ಷಮೆಯಾಚಿಸಲಿ

ಕುಂದಗೋಳ: ಕೂಡಲ ಸಂಗಮ ಪೀಠದ ಜಯ ಮೃತ್ಯುಂಜಯ ಸ್ವಾಮೀಜಿಯವರನ್ನು ಪೀಠದಿಂದ ಕೆಳಗಿಳಿಸಬೇಕು ಎಂದು ಹೇಳಿರುವ ಶಾಸಕ ವಿಜಯಾನಂದ ಕಾಶಪ್ಪನವರ ಅವರ ಹೇಳಿಕೆ ಖಂಡನೀಯ. ಯಾವತ್ತಿದ್ದರೂ ಜಯ ಮೃತ್ಯುಂಜಯ ಸ್ವಾಮೀಜಿಯವರೇ ಆ ಪೀಠದ ಪೀಠಾಧಿಪತಿಗಳು. ಶ್ರೀಗಳ ಹಿಂದೆ ಇಡೀ ಪಂಚಮಸಾಲಿ ಸಮಾಜವೇ ಇದೆ ಎಂದು ಪಂಚಮಸಾಲಿ ಸಮಾಜದ ಬಸವರಾಜ ನಾವಳ್ಳಿಯವರು ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀಗಳ ಬಗ್ಗೆ ಏಕ ಪಕ್ಷೀಯವಾಗಿ ನಿರ್ಧಾರ ಕೈಗೊಳ್ಳಲು ವಿಜಯಾನಂದ ಕಾಶಪ್ಪನವರಗೆ ಯಾವುದೇ ಹಕ್ಕಿಲ್ಲ. ಅವರು ಕೂಡಲೇ ಶ್ರೀಗಳ ಕ್ಷಮೆ ಕೇಳಬೇಕು’ ಎಂದರು.

ಕಾಶಪ್ಪನವರಿಗೆ ತಮ್ಮ ಮನೆತನಕ್ಕೆ ಎಂಪಿ ಟಿಕೆಟ್ ಬೇಕೆಂದಾಗ ಸ್ವಾಮೀಜಿಯವರನ್ನು ಕರೆದುಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹತ್ತಿರ ಹೋದರು. ಈಗ ಅವರ ವಿರುದ್ಧವೇ ಬಾಯಿಗೆ ಬಂದಂತೆ ಮಾತನಾಡುವುದು ಸರಿಯಲ್ಲ. ಜಯ ಮೃತ್ಯುಂಜಯ ಸ್ವಾಮೀಜಿಗಳಿಗೆ ಕುಂದಗೋಳ ತಾಲೂಕಿನ ಪಂಚಮಸಾಲಿ ಸಮಾಜ ಸೇರಿದಂತೆ ರಾಜ್ಯದ ಪಂಚಮಸಾಲಿ ಸಮಾಜವೇ ಅವರ ಹಿಂದೆ ಇರುತ್ತದೆ. ಏ.20ರಂದು ಶ್ರೀಗಳು ಕೂಡಲ ಸಂಗಮದಲ್ಲಿ ಕರೆದಿರುವ ಪಂಚಮಸಾಲಿಗರ ಸಭೆಯಲ್ಲಿ ಎಲ್ಲದಕ್ಕೂ ಉತ್ತರಿಸುತ್ತೇವೆ ಎಂದರು.

ಸಮಾಜದ ತಾಲೂಕು ಅಧ್ಯಕ್ಷ ನಾಗಗೌಡ ದೇಶಪಾಂಡೆ ಮಾತನಾಡಿ, ಶಾಸಕ ವಿಜಯಾನಂದ ಕಾಶಪ್ಪನವರು ಜವಾಬ್ದಾರಿಯುತ ಸ್ಥಾನದಲ್ಲಿದ್ದು ಈರೀತಿಯ ಮಾತನಾಡುವುದು ಸರಿಯಲ್ಲ ಎಂದರು.

ವೆಂಕನಗೌಡ ಕಂಠೆಪ್ಪಗೌಡ್ರ ಮಾತನಾಡಿ, ಜಯಮೃತ್ಯುಂಜಯ ಸ್ವಾಮೀಜಿಯವರು ಸಮಾಜದ ಸಲುವಾಗಿ ಸಾಕಷ್ಟು ಶ್ರಮಿಸಿದ್ದಾರೆ. ರಾಜಕೀಯ, ಸಾಮಾಜಿಕ ಸಹಿತ ಯಾವುದೇ ರಂಗದಲ್ಲಿ ಅನ್ಯಾಯವಾದರೂ ಬೀದಿಗಿಳಿಯುತ್ತಾರೆ. ಬಸನಗೌಡ ಪಾಟೀಲ ಯತ್ನಾಳ ಅವರ ಬಗ್ಗೆ ಧ್ವನಿ ಎತ್ತಿದ್ದು ಸರಿಯಾದ ಕ್ರಮವಾಗಿದೆ. ಈ ಹಿಂದೆ, ಮುರುಗೇಶ ನಿರಾಣಿ, ವಿನಯ ಕುಲಕರ್ಣಿ, ಲಕ್ಷ್ಮೀ ಹೆಬ್ಬಾಳ್ಕರ್ ಸಹಿತ ಹಲವು ಮುಖಂಡರಿಗೆ ಅನ್ಯಾಯಾವಾದಾಗ ಪ್ರಶ್ನಿಸಿದ್ದಾರೆ ಎಂದರು.

ಪ್ರಭುಗೌಡ ಸಂಕ್ಯಾಗೌಡಶ್ಯಾನಿ, ಬಸವರಾಜ ವೈ.ಸಿ, ಸೋಮನಗೌಡ ಪಾಟೀಲ ಮಾತನಾಡಿದರು. ಗುರುಪಾದಪ್ಪ ಬಂಕದ, ಪಂಚಣ್ಣ ಒಲಿ, ಗುರುಸಿದ್ದಪ್ಪ ಯಲಿವಾಳ, ಯಲ್ಲಪ್ಪ ಸವಣೂರು, ಚನ್ನಬಸನಗೌಡ ಶಿರೂರ, ಭರಮಪ್ಪ ಕುರಟ್ಟಿ, ಪ್ರಕಾಶ ಮರಿಲಿಂಗಗೌಡ್ರ, ಇತರರಿದ್ದರು.