ಮೈಸೂರು: ದುಸ್ಥಿತಿಗೆ ತಲುಪಿರುವ ನಗರದ ಮಾನಸಗಂಗೋತ್ರಿಯ ಜಯಲಕ್ಷ್ಮೀ ವಿಲಾಸ ಅರಮನೆ ಹಾಗೂ ಅರಮನೆಯಲ್ಲಿರುವ ಜಾನಪದ ವಸ್ತು ಸಂಗ್ರಹಾಲಯದ ಕಾಯಕಲ್ಪಕ್ಕೆ ಕಡೆಗೂ ಕಾಲ ಕೂಡಿಬಂದಿದ್ದು, ಒಟ್ಟು 32.4 ಕೋಟಿ ರೂ.ವೆಚ್ಚದಲ್ಲಿ ಈ ಅರಮನೆಯ ಸಂರಕ್ಷಣಾ ಕಾಮಗಾರಿ ನಡೆಯಲಿದೆ.
ಭಾರತದಲ್ಲಿನ ಯುಎಸ್ ಮಿಷನ್ ತನ್ನ ಅಂಬಾಸಡರ್ಸ್ ಫಂಡ್ ಫಾರ್ ಕಲ್ಚರಲ್ ಪ್ರಿಸರ್ವೇಷನ್ (ಎಎಫ್‌ಸಿಪಿ) ಮೂಲಕ 2.4 ಕೋಟಿ ರೂ.ವೆಚ್ಚದಲ್ಲಿ ಅರಮನೆಯ ಪಶ್ಚಿಮ ಭಾಗ ಹಾಗೂ ಜಾನಪದ ವಸ್ತುಸಂಗ್ರಹಾಲಯದ ಸಂರಕ್ಷಣಾ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಿದೆ. ಈ ಕಾಮಗಾರಿಗೆ ಸಂಬಂಧಿಸಿದಂತೆ ಮೊದಲ ಕಂತನ್ನು ಚೆನ್ನೈನ ಯುಎಸ್ ಕೌನ್ಸಲ್ ಜನರಲ್ ಕ್ರಿಸ್ಟೋಫರ್ ಡಬ್ಲುೃ. ಹಾಡ್ಜಸ್ ಮೈಸೂರು ವಿಶ್ವ ವಿದ್ಯಾಲಯ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಅವರಿಗೆ ಗುರುವಾರ ವಿವಿಯ ಕ್ರಾಫರ್ಡ್ ಭವನದ ಅಕಾಡೆಮಿಕ್ ಕೌನ್ಸಿಲ್ ಸಭಾಂಗಣದಲ್ಲಿ ಹಸ್ತಾಂತರಿಸಿದರು. ಅರಮನೆಯ ಉಳಿದ ಭಾಗವನ್ನು 30 ಕೋಟಿ ರೂ.ವೆಚ್ಚದಲ್ಲಿ ಮೈಸೂರು ವಿಶ್ವ ವಿದ್ಯಾಲಯದ ಹಳೇ ವಿದ್ಯಾರ್ಥಿ ಹರೀಶ್ ಶಾ ಅವರು ತಮ್ಮ ‘ಹರೀಶ್ ಬಿನಾ ಶಾ ಫೌಂಡೇಷನ್’ ಮೂಲಕ ಕೈಗೆತ್ತಿಕೊಳ್ಳಲಿದ್ದು, ಇದಕ್ಕೆ ಸಂಬಂಧಿಸಿದ ಒಡಂಬಡಿಕೆಗೆ ಹರೀಶ್ ಶಾ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಅವರೊಂದಿಗೆ ಸಹಿ ಹಾಕಿದರು.
ಜಯಲಕ್ಷ್ಮೀ ವಿಲಾಸ ಅರಮನೆಯನ್ನು 1905ರಲ್ಲಿ ಮೈಸೂರು ಮಹಾರಾಜ ಶ್ರೀ ಕೃಷ್ಣರಾಜ ಒಡೆಯರ್ ಅವರು ರಾಜಕುಮಾರಿ ಜಯಲಕ್ಷ್ಮೀ ಅಮ್ಮಣ್ಣಿ ಅವರಿಗೋಸ್ಕರ ನಿರ್ಮಾಣ ಮಾಡಿದರು. ರಾಜಕುಮಾರಿ ಜಯಲಕ್ಷ್ಮೀ ಅಮ್ಮಣ್ಣಿ 1897 ರಲ್ಲಿ ಕಾಂತರಾಜ ಅರಸ್ ಅವರನ್ನು ವಿವಾಹವಾದರು. ನಂತರ ಕಾಂತರಾಜ ಅರಸು ಅವರು ಮೈಸೂರಿನ ದಿವಾನರಾಗಿ ನೇಮಕಗೊಂಡರು. ಪ್ರಸ್ತುತ ಇದು ಮೈಸೂರು ವಿಶ್ವ ವಿದ್ಯಾಲಯದ ಸುಪರ್ದಿಯಲ್ಲಿದ್ದು, ಅರಮನೆಯ ಒಂದು ಭಾಗವನ್ನು ಜಾನಪದ ವಸ್ತು ಸಂಗ್ರಹಾಲಯಕ್ಕೆ ಬಳಕೆ ಮಾಡಿಕೊಳ್ಳಲಾಗಿದ್ದು, 6,500 ಸಾವಿರ ಜನಪದ ವಸ್ತುಗಳ ಸಂಗ್ರಹ ಇಲ್ಲಿದೆ.
ಅರಮನೆಯ ಸಂರಕ್ಷಣಾ ಕಾಮಗಾರಿ ಕುರಿತು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಮೈಸೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್, ಪಾರಂಪರಿಕ ಕಟ್ಟಡಗಳ ಸಂರಕ್ಷಣೆಯಲ್ಲಿ ಹೆಸರುವಾಸಿಯಾಗಿರುವ ಡೆಕ್ಕನ್ ಹೆರಿಟೇಜ್ ಫೌಂಡೇಷನ್ ಅರಮನೆಯ ಸಂರಕ್ಷಣಾ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಿದೆ. ಈಗಾಗಲೇ ಕಟ್ಟಡದ ಸಂರಕ್ಷಣಾ ಕಾಮಗಾರಿ ಕೈಗೆತ್ತಿಕೊಳ್ಳಲು ಜಾನಪದ ವಸ್ತು ಸಂಗ್ರಹಾಲಯದಲ್ಲಿರುವ ಜಾನಪದ ವಸ್ತುಗಳನ್ನು ಸುರಕ್ಷಿತವಾಗಿ ಪ್ಯಾಕ್ ಮಾಡುವ ಕಾರ್ಯ ನಡೆಯುತ್ತಿದ್ದು, ಶೀಘ್ರದಲ್ಲಿಯೇ ಅರಮನೆಯ ಪಶ್ಚಿಮ ಭಾಗದ ಕಾಮಗಾರಿ ಪ್ರಾರಂಭಗೊಳ್ಳಲಿದೆ ಎಂದರು.
ಅರಮನೆಯ ಪಶ್ಚಿಮ ಭಾಗದ ಕಾಮಗಾರಿ ಪೂರ್ಣಗೊಳ್ಳಲು 2 ರಿಂದ 3 ಮೂರು ವರ್ಷಗಳು, ಅರಮನೆಯ ಸಂಪೂರ್ಣ ಸಂರಕ್ಷಣಾ ಕಾಮಗಾರಿ ಪೂರ್ಣವಾಗಲು 5 ರಿಂದ 7 ವರ್ಷಗಳ ಅವಶ್ಯಕತೆ ಇದೆ. ಈ ಅರಮನೆಯ ಒಂದು ಭಾಗವನ್ನು ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರಕ್ಕೆ ನೀಡಲು ನಿರ್ಧರಿಸಲಾಗಿತ್ತು. ಅರಮನೆಯನ್ನು ಕೇಂದ್ರಕ್ಕೆ ನೀಡಿದರೆ ನಾವೇ ಅರಮನೆಯ ಸಂರಕ್ಷಣಾ ಕಾಮಗಾರಿ ಕೈಗೊಳ್ಳುತ್ತೇವೆ ಎಂದು ಕೇಂದ್ರದವರು ತಿಳಿಸಿದ್ದರು. ಆದರೆ, ಅವರ ಬಳಿ ಅಷ್ಟೊಂದು ಅನುದಾನ ಇಲ್ಲದ ಹಿನ್ನೆಲೆಯಲ್ಲಿ ಕಾಮಗಾರಿ ಕೈಗೊಳ್ಳಲು ಸಾಧ್ಯವಾಗಲಿಲ್ಲ. ಈ ನಡುವೆ ಯುಎಸ್ ಮಿಷನ್ ಮತ್ತು ‘ಹರೀಶ್ ಬಿನಾ ಶಾ ಫೌಂಡೇಷನ್’ ಮುಂದೆ ಬಂದರು ಎಂದು ತಿಳಿಸಿದರು. ಈ ಸಂದರ್ಭ ಡೆಕ್ಕನ್ ಹೆರಿಟೇಜ್ ಫೌಂಡೇಷನ್ ಅಧ್ಯಕ್ಷೆ ಲತಾ ರೆಡ್ಡಿ, ಕುಲಸಚಿವೆ ವಿ.ಆರ್. ಶೈಲಜಾ ಹಾಗೂ ಇತರರು ಇದ್ದರು.
ಭಾರತ ವೈವಿಧ್ಯತೆಯಿಂದ ಕೂಡಿರುವ ರಾಷ್ಟ್ರ. ಇಲ್ಲಿನ ಕಲೆ, ಸಂಸ್ಕೃತಿಗಳು ಭಿನ್ನವಾಗಿದೆ. ಸಾಂಸ್ಕೃತಿಕ ನಗರಿ ಮೈಸೂರಿನ ಪರಂಪರೆ ಭವ್ಯವಾಗಿದ್ದು, ಇಲ್ಲಿನ ಅರಮನೆ ಹಾಗೂ ಪಾರಂಪರಿಕ ಕಟ್ಟಡಗಳನ್ನು ವೀಕ್ಷಿಸಲು ದೇಶ ವಿದೇಶದಿಂದ ಪ್ರವಾಸಿಗರು ಆಗಮಿಸುತ್ತಾರೆ. ಯುಎಸ್ ಮಿಷನ್ ಮೂಲಕ ಜಯಲಕ್ಷ್ಮೀ ವಿಲಾಸ ಅರಮನೆಯ ಸಂರಕ್ಷಣಾ ಕಾಮಗಾರಿ ಕೈಗೆತ್ತಿಕೊಂಡಿರುವುದು ಸಂತಸ ತಂದಿದೆ. ಈ ರೀತಿ ಯುಎಸ್ ಮಿಷನ್ ವಿವಿಧ ಕಾಮಗಾರಿಗಳಿಗೆ ಅನುದಾನ ನೀಡಿದ್ದು, ಜಯಲಕ್ಷ್ಮೀ ವಿಲಾಸ ಅರಮನೆಗೆ ನೀಡುತ್ತಿರುವ ಮೊತ್ತವು ಯುಎಸ್ ಮಿಷನ್‌ನ 2ನೇ ಅತಿ ದೊಡ್ಡ ಮೊತ್ತವಾಗಿದೆ.
ಕ್ರಿಸ್ಟೋಫರ್ ಡಬ್ಲುೃ. ಹಾಡ್ಜಸ್, ಯುಎಸ್ ಕೌನ್ಸಲ್ ಜನರಲ್, ಚೆನ್ನೈ