ಜಿಲ್ಲೆ

ಜಯಲಕ್ಷ್ಮಿ ಪಾಟೀಲ್, ಡಾ. ಪುಷ್ಪಾಗೆ 'ಬಿ. ಸರೋಜಾದೇವಿ ಸಾಹಿತ್ಯ ಪ್ರಶಸ್ತಿ'

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ‘ಪದ್ಮಭೂಷಣ ಬಿ. ಸರೋಜಾದೇವಿ ಸಾಹಿತ್ಯ ಪ್ರಶಸ್ತಿ’ ಪ್ರಕಟಗೊಂಡಿದ್ದು, 2022ನೇ ಸಾಲಿಗೆ ಮೈಸೂರಿನ ಲೇಖಕಿ ಡಾ. ಪುಷ್ಪಾ ಐಯ್ಯಂಗಾರ ಹಾಗೂ 2023ನೇ ಸಾಲಿಗೆ ಲೇಖಕಿ, ಕಥೆಗಾರ್ತಿ ಹಾಗೂ ನಟಿ ಜಯಲಕ್ಷ್ಮಿ ಪಾಟೀಲ್ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಪ್ರಶಸ್ತಿಯು 15 ಸಾವಿರ ರೂ. ನಗದು, ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಪದ್ಮಭೂಷಣ ಡಾ. ಸರೋಜಾದೇವಿ ಅವರು ತಮ್ಮ ಪುತ್ರಿ ಬಿ. ಭುವನೇಶ್ವರಿ ಅವರ ಸ್ಮರಣಾರ್ಥ ಈ ದತ್ತಿ ಪ್ರಶಸ್ತಿಯನ್ನು ಸ್ಥಾಪಿಸಿದ್ದು, ಲೇಖಕಿಯರಿಗೆ ಈ ಪ್ರಶಸ್ತಿಯನ್ನು ಮೀಸಲಿಟ್ಟಿದ್ದಾರೆ.

ಕಸಾಪ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಸಮಿತಿಯ ಸಭೆಯಲ್ಲಿ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ನೇ.ಭ. ರಾಮಲಿಂಗ ಶೆಟ್ಟಿ, ಡಾ. ಪದ್ಮಿನಿ ನಾಗರಾಜು ಹಾಗೂ ಗೌರವ ಕೋಶಾಧ್ಯಕ್ಷ ಡಾ. ಬಿ.ಎಂ. ಪಟೇಲ್ ಪಾಂಡು ಭಾಗವಹಿಸಿದ್ದರು.