ಜಿಲ್ಲೆ

ಸ್ಥಳೀಯರಿಗೆ ಹೆಚ್ಚಿನ ಉದ್ಯೋಗಾವಕಾಶ ಲಭಿಸಬೇಕು: ಶಾಸಕ ಸುರೇಶ್ ಶೆಟ್ಟಿ

ಗೋಪಾಲಕೃಷ್ಣ ಪಾದೂರ್

ಉಡುಪಿ: ಕಡಲ್ಕೊರೆತ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸುವ ನಿಟ್ಟಿನಲ್ಲಿ ಸ್ಥಳೀಯರ ತಾಂತ್ರಿಕ ಪರಿಣಿತ ತಂತ್ರಜ್ಞರ ಜತೆ ಸಭೆ ನಡೆಸಿ ಸೂಕ್ತ ಪರಿಹಾರ ಕಂಡುಕೊಳ್ಳಬೇಕಿದೆ.  ಅವಿಜಿತ ದಕ್ಷಿಣ ಕನ್ನಡ ಜಿಲ್ಲೆಗೆ ಉದ್ಯೋಗದಾತ ಕಂಪೆನಿಗಳು ಬರಬೇಕು.  ಸ್ಥಳೀಯರಿಗೆ ಉದ್ಯೋಗದಲ್ಲಿ ಹೆಚ್ಚಿನ ಅವಕಾಶ ಲಭಿಸಬೇಕು ಎಂದು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು.

ಶನಿವಾರ ಜಯಶ್ರೀಕ್ರಷ್ಣ ಪರಿಸರ ಪ್ರೇಮಿ ಸಮಿತಿ ಆಶ್ರಯದಲ್ಲಿ ಕರಾವಳಿ ಕರ್ನಾಟಕದ ಪ್ರವಾಸೋದ್ಯಮ ಸಮಗ್ರ ಅಭಿವೃದ್ಧಿ ಹಾಗೂ ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರ ಮತ್ತು ರುದ್ರ ಭೂಮಿ ಚಿತಾಗಾರಗಳ ನಿರ್ಮಾಣ ಬಗ್ಗೆ ಸಮಾಲೋಚನಾ ಸಭೆಯನ್ನು  ಉದ್ಘಾಟಿಸಿ ಮಾತನಾಡಿದರು.

ಜಯಶ್ರೀಕ್ರಷ್ಣ ಪರಿಸರ ಪ್ರೇಮಿ ಸಮಿತಿ ಜಿಲ್ಲಾಧ್ಯಕ್ಷ ಡಿ ಆರ್ ರಾಜು ಅವರು ರಾಜ್ಯದ ಪ್ರವಾಸೋದ್ಯಮದಲ್ಲಿ ಕರಾವಳಿ ಕರ್ನಾಟಕದ ಪಾತ್ರ ಮಹತ್ತರವಾಗಿದೆ.  ಕರಾವಳಿ ಕರ್ನಾಟಕದ ಉಳ್ಳಾಲದಿಂದ ಕಾರವಾರದವರೆಗಿನ ಸುಮಾರು 320 ಕಿ.ಮೀ ಸಮುದ್ರ ತೀರವು ನಿರಂತರವಾಗಿ ಪ್ರತೀವರ್ಷ ಕಡಲ್ಕೊರೆತದ ಹೊಡೆತಕ್ಕೆ ಸಿಲುಕಿದ್ದರೂ ಈವರೆಗೂ ಕಡಲ್ಕೊರೆತ ತಡೆಗಟ್ಟುವ ನಿಟ್ಟಿನಲ್ಲಿ ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡಿಲ್ಲ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸೂಕ್ತ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕು. ಎಲ್ಲಾ ಪ್ರಮುಖ ಸಂಪರ್ಕ ರಸ್ತೆಗಳು ಚತುಷ್ಪಥ ರಸ್ತೆಗಳಾದರೆ ಮೂಲಸೌಕರ್ಯ ಅಭಿವೃದ್ಧಿಯಾಗುತ್ತದೆ ಜತೆಗೆ ಪ್ರವಾಸೋದ್ಯಮವೂ ಬೆಳೆಯಲು ಸಾಧ್ಯವಿದೆ ಎಂದರು.

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಸಂಸ್ಥಾಪಕ
ತೋನ್ಸೆ ಜಯಕ್ರಷ್ಣ ಶೆಟ್ಟಿ ಮಾತನಾಡಿ, ಮಹಾರಾಷ್ಟ್ರ ಮಾದರಿಯಲ್ಲಿ ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರ ಕಂಡು ಹುಡುಕಬೇಕಾಗಿದೆ. ರುದ್ರಭೂಮಿಗಳಲ್ಲಿ ವಿಧ್ಯುತ್  ಚಿತಾಗಾರಗಳನ್ನು ರಚಿಸಲು ಸರಕಾರ ಮುಂದಾಗಬೇಕು. ಆ ಮೂಲಕ ಪರಿಸರ ಹಾಗೂ ಅರಣ್ಯ ಸಂಪತ್ತನ್ನು ಉಳಿಸುವ ಕೆಲಸ ಆಗಬೇಕಿದೆ. ಮಾತ್ರವಲ್ಲದೆ ವಿದ್ಯುತ್ ಚಿತಾಗಾರದ ಸಾಮಾಗ್ರಿಗಳಿಗೆ ಸಬ್ಸಿಡಿ ನೀಡುವಂತೆ ಆಗ್ರಹಿಸಿದರು.

ಜಯಶ್ರೀಕೃಷ್ಣ ಪರಿಸರ ಪ್ರೇಮಿ
ಅಧ್ಯಕ್ಷ ಎಲ್.ವಿ ಅಮೀನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.  ಜಿಲ್ಲಾ ಸಮಿತಿ ಉಪಾಧ್ಯಕ್ಷ ಜಗದೀಶ್ ಅಧಿಕಾರಿ  ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಉಪಾಧ್ಯಕ್ಷ  ನಿತ್ಯಾನಂದ ಡಿ ಕೋಟ್ಯಾನ್, ಗೌರವ ಪ್ರಧಾನ ಕಾರ್ಯದರ್ಶಿ ಮುಂಡ್ಕೂರು ಸುರೇಂದ್ರ ಸಾಲಿಯಾನ್, ಗೌರವ ಕೋಶಾಧಿಕಾರಿ ತುಳಸಿದಾಸ್ ಎಲ್ ಅಮೀನ್, ಪ್ರದೀಪ್ ಎನ್ ಆರ್ ಕಾರ್ಕಳ ,ಗೌರವ ಕಾರ್ಯದರ್ಶಿಗಳಾದ ಅರುಣ್ ಪ್ರಕಾಶ್ ಶೆಟ್ಟಿ, ಪ್ರೊ ಶಂಕರ್, ಮಾಜಿ ಅಧ್ಯಕ್ಷರಾದ ಹರೀಶ್ ಕುಮಾರ್ ಶೆಟ್ಟಿ, ಧರ್ಮಪಾಲ್ ಯು ದೇವಾಡಿಗ ಉಪಸ್ಥಿತರಿದ್ದರು