ಜಿಲ್ಲೆ

1,000 ಆಂಜಿಯೋಗ್ರಾಮ್, ಆಂಜಿಯೋಪ್ಲಾಸ್ಟಿ ಚಿಕಿತ್ಸೆ

ಪಂಕಜ ಕೆ.ಎಂ.
  • ಜಯದೇವ ಕೆಸಿಜಿ ಉಪ ಕೇಂದ್ರದಲ್ಲಿ ಟ್ರೀಟ್‌ಮೆಂಟ್ : ಡಾ.ಸಿ.ಎನ್. ಮಂಜುನಾಥ್ ಮಾಹಿತಿ

ಪಂಕಜ ಕೆ.ಎಂ. ಬೆಂಗಳೂರು


ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿನ ಜಯದೇವ ಹೃದ್ರೋಗ ಉಪ ಕೇಂದ್ರವು ವರ್ಷದಲ್ಲಿ ಸಾವಿರಕ್ಕೂ ಅಧಿಕ ಆಂಜಿಯೋಗ್ರಾಮ್ ಮತ್ತು ಆಂಜಿಯೋಪ್ಲಾಸ್ಟಿ ಪ್ರಕ್ರಿಯೆಗಳನ್ನು ಯಶಸ್ವಿಯಾಗಿ ನಡೆಸಿದೆ.

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ (ಎಸ್‌ಜೆಐಸಿಎಸ್‌ಆರ್) 50 ಹಾಸಿಗೆಗಳ ಉಪ ಕೇಂದ್ರವನ್ನು ಪ್ರಾರಂಭಿಸಿತು. 13 ತಿಂಗಳಲ್ಲಿ 845 ಆ್ಯಂಜಿಯೋಗ್ರಾಮ್ ಹಾಗೂ 375 ಆ್ಯಂಜಿಯೋಪ್ಲಾಸ್ಟಿ ಸೇರಿ ಈವರೆಗೂ 1,220 ಪ್ರಕ್ರಿಯೆಗಳನ್ನು ನಡೆಸಲಾಗಿದೆ.

ಬೆಂಗಳೂರಿನ ಕೇಂದ್ರ ಭಾಗದಲ್ಲಿರುವ ಈ ಉಪಕೇಂದ್ರವು ಸುವರ್ಣ ಸಮಯದಲ್ಲಿ ಹೃದಯಸಂಬಂಧಿ ತುರ್ತು ಚಿಕಿತ್ಸೆ ಅಗತ್ಯ ಇರುವವರಿಗೆ ವರದಾನವಾಗಿದೆ. ಈ ಕೇಂದ್ರದಲ್ಲಿ ನಿತ್ಯ 100- 125 ಹೊರ ರೋಗಿಗಳು (ಒಪಿಡಿ) ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಈವರೆಗೂ 550 ಟ್ರೆಡ್‌ಮಿಲ್ ಟೆಸ್ಟ್, 16 ಸಾವಿರ ಇಸಿಜಿ, 18,400 ಎಕೋ ಕಾರ್ಡಿಯೋಗ್ರಾಮ್ ನಡೆಸಲಾಗಿದೆ. ಇದರ ಹೊರತಾಗಿ ಸ್ಟೆಂಟ್ ಅಳವಡಿಕೆ ಕಾರ್ಯವಿಧಾನಗಳನ್ನೂ ಮಾಡಲಾಗಿದೆ.

25 ಸಾವಿರಕ್ಕೂ ಅಧಿಕ ಮಂದಿಗೆ ಚಿಕಿತ್ಸೆ: ಕೇಂದ್ರದಲ್ಲಿ ಇದುವರೆಗೂ 25,350 ಹೊರ ರೋಗಿಗಳಾಗಿ ಹಾಗೂ 1,800 ಒಳರೋಗಿಗಳಾಗಿ ಚಿಕಿತ್ಸೆ ಪಡೆದಿದ್ದಾರೆ. ಜಯದೇವ ಮುಖ್ಯ ಆಸ್ಪತ್ರೆ ಮೇಲೆ ಹೊರೆ ಹೆಚ್ಚುತ್ತಿರುವಾಗ ಈ ಉಪಕೇಂದ್ರದಲ್ಲಿ ನಿತ್ಯ 80 ಎಕೋ ಕಾರ್ಡಿಯೋಗ್ರಾಂ, 70 ಇಸಿಜಿ ಹಾಗೂ 6ಕ್ಕೂ ಹೆಚ್ಚು ಆಂಜಿಯೋಗ್ರಾಮ್ ಮತ್ತು ಆಂಜಿಯೋಪ್ಲಾಸ್ಟಿ ಮಾಡಲಾಗುತ್ತಿದೆ. ಜತೆಗೆ ಕೆ.ಜಿ. ಜನರಲ್ ಆಸ್ಪತ್ರೆಗೆ ದಾಖಲಾಗುವ ರೋಗಿಗಳಿಗೂ ಹೃದಯ ಆರೋಗ್ಯದ ಮೌಲ್ಯಮಾಪನಕ್ಕೆ ಈ ಕೇಂದ್ರ ನೆರವಾಗಲಿದೆ ಎನ್ನುತ್ತಾರೆ ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಡಾ. ಸಿ.ಎನ್. ಮಂಜುನಾಥ್.

ಮುಖ್ಯ ಕೇಂದ್ರಕ್ಕೆ ತಪ್ಪದ ಒತ್ತಡ: ಜಯದೇವ ಹೃದ್ರೋಗ ಸಂಸ್ಥೆ ಮುಖ್ಯ ಕೇಂದ್ರ 1,050 ಹಾಸಿಗೆಗಳ ಸಾಮರ್ಥ್ಯ ಹೊಂದಿದೆ. ಕೆ.ಸಿ. ಜನರಲ್ ಆಸ್ಪತ್ರೆಯ ಉಪಕೇಂದ್ರದಲ್ಲಿ 50 ಹಾಸಿಗೆ, ಇಎಸ್‌ಐನಲ್ಲಿ 75 ಹಾಸಿಗೆಗಳ ಸೌಲಭ್ಯ ಹೊಂದಿದೆ. ಇದಲ್ಲದೆ ಮೈಸೂರಿನಲ್ಲಿ 400 ಹಾಸಿಗೆಗಳ ಆಸ್ಪತ್ರೆ, ಕಲಬುರಗಿಯಲ್ಲಿ 135 (ಜನವರಿ ವೇಳೆಗೆ 371 ಹಾಸಿಗೆಗಳ ನೂತನ ಕಟ್ಟಡ ಲೋಕಾರ್ಪಣೆಯಾಗಲಿದೆ), ಹುಬ್ಬಳ್ಳಿಯಲ್ಲಿ 400 ಹಾಸಿಗೆಗಳ ಆಸ್ಪತ್ರೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಇಷ್ಟಾಗಿಯೂ ಮುಖ್ಯ ಕೇಂದ್ರದ ಮೇಲಿನ ಒತ್ತಡ ತಪ್ಪಿಲ್ಲ ಎಂದು ಹೇಳಿದರು.

ಇನ್ಫೋಸಿಸ್ ಕಾಂಪ್ಲೆಕ್ಸ್: ಜಯದೇವ ಮುಖ್ಯ ಕೇಂದ್ರದ ಆವರಣದಲ್ಲಿ ಇನ್ಫೋಸಿಸ್ ಪ್ರತಿಷ್ಠಾನದಿಂದ ನಿರ್ಮಿಸಿಕೊಟ್ಟಿರುವ ಕಾಂಪ್ಲೆಕ್ಸ್‌ನಲ್ಲಿ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, 2021ರ ನವೆಂಬರ್‌ನಲ್ಲಿ ಆರಂಭವಾದಾಗಿನಿಂದ ಈವರೆಗೂ ಲಕ್ಷಕ್ಕೂ ಅಧಿಕ ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ. 1,250ಕ್ಕೂ ಅಧಿಕ ಹೃದಯ ಶಸಚಿಕಿತ್ಸೆ ಮತ್ತು 5 ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ಚಿಕಿತ್ಸೆ ನೀಡಲಾಗಿದೆ. 30 ಸಾವಿರಕ್ಕೂ ಅಧಿಕ ಇಸಿಜಿ ಹಾಗೂ 40 ಸಾವಿರಕ್ಕೂ ಹೆಚ್ಚು ಎಕೋ ನಡೆಸಲಾಗಿದೆ ಎಂದು ಹೇಳಿದರು.

ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿನ ಜಯದೇವ ಉಪಕೇಂದ್ರವು ಬೆಳಗೆ 9ರಿಂದ ಸಂಜೆ 5ರವರೆಗೆ ಸೇವೆ ನೀಡಲಿದೆ. ನಂತರ ತುರ್ತು ಅಗತ್ಯವಿದ್ದರೆ ಆಸ್ಪತ್ರೆ ವತಿಯಿಂದ ಆಂಬುಲೆನ್ಸ್ ಮೂಲಕ ಮುಖ್ಯ ಕೇಂದ್ರಕ್ಕೆ ಕಳುಹಿಸಲಾಗುವುದು. ಹೃದ್ರೋಗ, ನರರೋಗ ಹಾಗೂ ನೆ್ರೆೆ ಸಂಬಂಧಿತ ಚಿಕಿತ್ಸೆಗಳಿಗೆ ಮುಖ್ಯ ಕೇಂದ್ರಗಳಿಗೆ ಶಿಫಾರಸ್ಸು ಮಾಡುವುದೇ ಪ್ರಮುಖ ಕೆಲಸ ಆಗಬಾರದು. ಬದಲಿಗೆ ಜಿಲ್ಲಾಮಟ್ಟದಲ್ಲಿರುವ ವೈದ್ಯಕೀಯ ಶಿಕ್ಷಣ ಸಂಸ್ಥೆಗಳಲ್ಲಿ ಈ ಚಿಕಿತ್ಸೆಗಳಿಗೆ ಘಟಕಗಳನ್ನು ಪ್ರಾರಂಭಿಸಿದ ಗೋಲ್ಡನ್ ಅವರ್‌ನಲ್ಲಿ ಚಿಕಿತ್ಸೆ ಒದಗಿಸುವ ಕೆಲಸ ಆಗಬೇಕಿದೆ. ಎಂದರು.

ಸಂಸದೀಯ ಸಮಿತಿಯಿಂದ ಮೆಚ್ಚುಗೆ: ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯ ಅನುಷ್ಠಾನ ಸಂಬಂಧ ಅಧ್ಯಯನ ನಡೆಸಲು ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಗೆ ಭೇಟಿ ನೀಡಿದ ಆರೋಗ್ಯ ಸಂಸದೀಯ ಸ್ಥಾಯಿ ಸಮಿತಿಯ 14 ಸದಸ್ಯರು ರೋಗಿಗಳಿಗೆ ಒದಗಿಸುವ ಸೇವೆಗಳ ಗುಣಮಟ್ಟ ಕಂಡು ಪ್ರಭಾವಿತರಾದರು. ಭುವನೇಶ್ವರ ಕಲಿತ ನೇತೃತ್ವದ ನಿಯೋಗವು, ಸಂಸ್ಥೆಯಲ್ಲಿನ ನೈರ್ಮಲ್ಯ, ಮೂಲಸೌಕರ್ಯ ಮತ್ತು ತಾಳ್ಮೆಯ ವಾತಾವರಣ ಕಂಡು ಇದು ಸರ್ಕಾರಿ ಸೌಲಭ್ಯ ಎಂದುರೆ ನಂಬಲು ಸಾಧ್ಯವಿಲ್ಲ. ಖಾಸಗಿ ಆಸ್ಪತ್ರೆಯ ರೀತಿಯಲ್ಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು.