ಜಿಲ್ಲೆ

ಹರಾಜು ಪ್ರಕ್ರಿಯೆ ವಿಳಂಬಕ್ಕೆ ಆಕ್ರೋಶ ಲೋಕಾ ಮೊರೆಗೆ ನಿರ್ಧಾರ

Davangere - Desk - Shobha Krishna Gowda

ಹರಿಹರ: ನಗರದ ಗಾಂಧಿ ಮೈದಾನದಲ್ಲಿರುವ ತಾಲೂಕು ಕ್ರೀಡಾಂಗಣ ವಾಣಿಜ್ಯ ಮಳಿಗೆಗಳ ಮರು ಹರಾಜು ಪ್ರಕ್ರಿಯೆಯನ್ನು ಪದೇ ಪದೆ ಮುಂದೂಡುತ್ತಿರುವ ಕ್ರೀಡಾ ಇಲಾಖೆ ಅಧಿಕಾರಿಗಳ ಕರ್ತವ್ಯಲೋಪದ ವಿರುದ್ಧ ಲೋಕಾಯುಕ್ತರಿಗೆ ದೂರು ನೀಡಲಿದ್ದೇವೆ ಎಂದು ಜಯ ಕರ್ನಾಟಕ ಸಂಘಟನೆಯ ತಾಲೂಕು ಅಧ್ಯಕ್ಷ ಎಸ್. ಗೋವಿಂದ್ ಹೇಳಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹರಿಹರದ ತಾಲೂಕು ಕ್ರೀಡಾಂಗಣದ ಆವರಣದಲ್ಲಿರುವ ಮಳಿಗೆಗಳ ಬಾಡಿಗೆ ಕರಾರು ಅವಧಿ 2019ರ ಡಿಸೆಂಬರ್​ನಲ್ಲಿ ಪೂರ್ಣಗೊಂಡಿದೆ. ಮರು ಹರಾಜಿಗೆ ಒತ್ತಾಯಿಸಿ ಕಳೆದ 182 ದಿನಗಳಿಂದ ನಮ್ಮ ಸಂಘಟನೆ ಗಾಂಧಿ ವೃತ್ತದ ಬಳಿ ಪ್ರತಿಭಟನೆ ಮಾಡುತ್ತಿದೆ ಎಂದರು.

ನಮ್ಮ ಹೋರಾಟದ ಫಲವಾಗಿ ಯುವಜನ ಕ್ರೀಡಾ ಇಲಾಖೆ ಮಾ.13, 20 ಹಾಗೂ ಏ.1 ರಂದು ಮಳಿಗೆಗಳ ಮರು ಹರಾಜು ಪ್ರಕ್ರಿಯೆ ಕೈಗೊಳ್ಳುತ್ತೇವೆಂದು ಪ್ರಕಟಣೆ ಹೊರಡಿಸಿ ಕೈತೊಳೆದುಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆಸಕ್ತರು 500 ರೂ. ಶುಲ್ಕ ನೀಡಿ ಅರ್ಜಿಯನ್ನು ಪಡೆದಿದ್ದು, ಸುಮಾರು 74 ಜನ ತಲಾ 25 ಸಾವಿರ ರೂ. ಡಿಡಿ ಪಡೆದು ಹರಾಜಿನಲ್ಲಿ ಭಾಗವಹಿಸಲು ತಯಾರಿ ನಡೆಸಿದ್ದರು. ಆದರೆ ಕ್ರೀಡಾ ಇಲಾಖೆ ಅಧಿಕಾರಿಗಳು ಇವರ ಆಸೆಗೆ ಮತ್ತೊಮ್ಮೆ ತಣ್ಣೀರೆರಚುವ ಕೆಲಸ ಮಾಡಿದ್ದಾರೆ. ಇದನ್ನು ಗಮನಿಸಿದರೆ ಕಾಣದ ಕೈಗಳ ಒತ್ತಡ ಕಾಣಿಸುತ್ತಿದೆ ಎಂದು ತಿಳಿಸಿದರು.

ಅಧಿಕಾರಿಗಳ ನಡೆ ಖಂಡಿಸಿ ಹಾಗೂ ಕರ್ತವ್ಯಲೋಪ ಪ್ರಶ್ನಿಸಿ ಲೋಕಾಯುಕ್ತರಿಗೆ ದೂರು ನೀಡುತ್ತಿದ್ದೇನೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷರು ಎಂ.ಆರ್. ಆನಂದ್, ವಿದ್ಯಾರ್ಥಿಗಳ ಸಂಘಟನೆಯ ಅಧ್ಯಕ್ಷ ಶ್ರೀನಿವಾಸ್ ಹಾಗೂ ಇತರರಿದ್ದರು.