ಶಿರಸಿ: ನಗರದ ಗಣೇಶನಗರದಲ್ಲಿ ಈಗ ಗಜಾನನ ಸಕಲ ಭಕ್ತರನ್ನು ಹರಸುತ್ತಿದ್ದಾನೆ. ಇಲ್ಲಿಯ ಗಣೇಶ ಮಂಟಪದಲ್ಲಿ ಪ್ರತಿಷ್ಠಾಪಿಸಲಾಗಿರುವ ಗಣೇಶನ ದರ್ಶನ ಮಾಡಿ, ಇಷ್ಟಾರ್ಥ ಸಿದ್ಧಿಸುವಂತೆ ಪ್ರಾರ್ಥಿಸಲು ನಗರದ ಮೂಲೆ ಮೂಲೆಯಿಂದ, ಗ್ರಾಮೀಣ ಪ್ರದೇಶದಿಂದಲೂ ಭಕ್ತರ ದಂಡು ಹರಿದುಬರುತ್ತಿದೆ.
ಗಣೇಶ ನಗರದ ಗಣೇಶ ಎಂದೇ ನಗರದಲ್ಲಿ ಪ್ರಸಿದ್ಧಿ ಹೊಂದಿದೆ. ಕಳೆದ 41 ವರ್ಷಗಳಿಂದ ಇಲ್ಲಿಯ ಸಾರ್ವಜನಿಕರು ಮಹಾಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಿಕೊಂಡು ಬಂದಿರುವುದು ವಿಶೇಷ. ಇದರ ಜೊತೆಯಲ್ಲಿಯೇ ಲೋಕ ಕಲ್ಯಾಣಕ್ಕಾಗಿ ಮಂಗಲ ಮೂರ್ತಿಯ ವಿಶೇಷ ಪೂಜೆ, ಧಾರ್ಮಿಕ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿದೆ. ಸಾರ್ವಜನಿಕರಿಗಾಗಿ ಸ್ಪರ್ಧಾ ಕಾರ್ಯಕ್ರಮಗಳು, ಪರ ಊರುಗಳಿಂದಲೂ ಕಲಾವಿರದರನ್ನು ಕರೆಸಿಕೊಂಡು ವಿಶೇಷ ಸಾಂಸ್ಕೃತಿಕ ಹಾಗೂ ಮನೋರಂಜನೆಯ ಕಾರ್ಯಕ್ರಮಗಳು ನಡೆಯುವುದು ಗಣೇಶನಗರದ ಗಣೇಶೋತ್ಸವದ ವಿಶೇಷ. ಗಣೇಶನಗರದ ಗಣೇಶೋತ್ಸವ ಯಾವೊಂದು ಜಾತಿ ಧರ್ಮಕ್ಕೆ ಮೀಸಲಾಗಿಲ್ಲ. ಈ ಉತ್ಸವದಲ್ಲಿ ಸಂಪೂರ್ಣ ಗಣೇಶನಗರವೇ ಪಾಲ್ಗೊಳ್ಳುತ್ತಿದ್ದು, ಇಲ್ಲಿ ವಾಸಿಸುವ ಅಲ್ಪ ಸಂಖ್ಯಾತರೂ ಸಹ ತಮ್ಮ ಕೈಲಾದ ಆರ್ಥಿಕ ಸಹಾಯ, ಕೆಲಸ ಕಾರ್ಯಗಳನ್ನು ನಡೆಸಿಕೊಟ್ಟು ಮಾದರಿಯಾಗಿದ್ದಾರೆ. ಮಹಾ ಮಂಗಲ ಮೂರ್ತಿಯ ದೇಣಿಗೆಯನ್ನು ಒಂದು ಕುಟುಂಬ ನೀಡಿದರೆ, ಪಂಚ ಕಜ್ಜಾಯ ಪ್ರಸಾದ ದೇಣಿಗೆಯನ್ನೂ ಇನ್ನೊಂದು ಕುಟುಂಬ ಸೇವೆ ರೂಪದಲ್ಲಿ ನೀಡುತ್ತಿದೆ.
41 ವರ್ಷಗಳ ಹಿಂದೆ ಗಣೇಶನಗರದ ಸ್ಥಳೀಯರೇ ಸಣ್ಣ ಪ್ರಮಾಣದಲ್ಲಿ ಆರಂಭಿಸಿದ ಸಾರ್ವಜನಿಕ ಗಣೇಶೋತ್ಸವ ಪ್ರತಿ ವರ್ಷವೂ ಭಕ್ತರ ಕೊಡುಗೆ, ವಿಶೇಷ ಪೂಜೆಗಳ ಮೂಲಕ ತ್ನನ ವ್ಯಾಪ್ತಿಯನ್ನು ಹೆಚ್ಚಿಸಿಕೊಂಡಿದೆ. ನಂತರದ ದಿನಗಳಲ್ಲಿ ಗಣೇಶೋತ್ಸವದ ವೇಳೆ ಭಕ್ತಾದಿಗಳಿಗೆ ಒಂದು ದಿನ ಅನ್ನ ಸಂತರ್ಪಣೆ ಮಾಡಿಕೊಂಡು ಬರಲಾಗುತ್ತಿದ್ದು, ಇಂದಿಗೂ ಮುಂದುವರಿದಿದೆ. ಗಣೇಶೋತ್ಸವಕ್ಕೆ ಬೇಕಾದ ಕಪಾಟು, ಸಲಕರಣೆಗಳು ಎಲ್ಲವೂ ಭಕ್ತರಿಂದ ಕೊಡುಗೆ ರೂಪದಲ್ಲಿ ಬಂದಿದೆ. ಕೆಲ ವರ್ಷಗಳ ಹಿಂದೆ ಗಜಾನನೋತ್ಸದ ಮೂಲಕ ಭಕ್ತರಿಂದ ಬಂದ ಆದಾಯ ಹಾಗೂ ಕೆಲ ಸಹಕಾರಿಗಳ ದಾನದಿಂದಾಗಿ ಇಲ್ಲಿ ಭವ್ಯವಾದ ಗಣೇಶ ಮಂಟಪ ಹಾಗೂ ಸಭಾಭವನವನ್ನು ನಿರ್ಮಿಸಲಾಗಿದೆ. ಗಣೇಶ ಚೌತಿಯ ದಿನದಂದು ಪ್ರತಿಷ್ಠಾಪನೆಗೊಂಡ ಗಣೇಶನಗರದ ಗಣೇಶ ಸೆ.3ರಂದು ಬೃಹತ್ ಮೆರವಣಿಗೆ, ಭಕ್ತರ ಜಯಘೋಷದೊಂದಿಗೆ ವಿಸರ್ಜನೆಗೊಳ್ಳಲಿದ್ದಾನೆ.
ಕಾರ್ಯಕ್ರಮಗಳು
ಇಲ್ಲಿಯ ಗಣೇಶೋತ್ಸವದಲ್ಲಿ ಜಾತಿ ಧರ್ಮ ಬೇಧ ಭಾವವಿಲ್ಲದೇ ಸಂಪೂರ್ಣ ಗಣೇಶನಗರವೇ ಒಂದಾಗಿ ಸಾರ್ವಜನಿಕ ಗಣೇಶೋತ್ಸವ ಆಚರಿಸುವುದು ಇಲ್ಲಿಯ ವಿಶೇಷ. ತಾಲೂಕಿನ ಎಲ್ಲೆಡೆಯಿಂದ ಇಲ್ಲಿಯ ಗಣೇಶ ಮೂರ್ತಿಯ ದರ್ಶನ ಪಡೆಯಲು ಪ್ರತಿ ವರ್ಷವೂ ಆಗಮಿಸುತ್ತಾರೆ. - ಪ್ರದೀಪ ಶೆಟ್ಟಿ., ನಗರಸಭಾ ಸದಸ್ಯರು, ಗಣೇಶೋತ್ಸವ ಮಂಡಳಿ ಅಧ್ಯಕ್ಷರು.