ಜಿಲ್ಲೆ

ವಜ್ರಮುಷ್ಟಿ ಕಾಳಗಕ್ಕೆ ಚನ್ನಪಟ್ಟಣದ ಜಟ್ಟಿ ಸಜ್ಜು

ನಾಡಹಬ್ಬ ದಸರಾದಲ್ಲಿ ಎದುರಾಳಿ ಮಣಿಸಲು ನಾಡಿನ ಹಿರಿಮೆ ಹೆಚ್ಚಿಸಲು ರಘು ಕಸರತ್ತು


ಅಭಿಲಾಷ್ ತಿಟ್ಟಮಾರನಹಳ್ಳಿ ಚನ್ನಪಟ್ಟಣ
ವಿಶ್ವವಿಖ್ಯಾತ ಮೈಸೂರು ದಸರಾಗೆ ಸರಿಸಾಟಿ ಬೇರೊಂದಿಲ್ಲ. ವಿಜಯದಶಮಿಯ ದಿನ ನಡೆಯುವ ಜಂಬೂ ಸವಾರಿಗೂ ಮುನ್ನ ಅರಮನೆ ಆವರಣದಲ್ಲಿ ಹಲವು ಸಂಪ್ರದಾಯಗಳನ್ನು ನೆರವೇರಿಸಲಾಗುತ್ತದೆ. ಅದರಲ್ಲಿ ವಜ್ರಮುಷ್ಟಿ ಕಾಳಗವೂ ಒಂದು. ಈ ಬಾರಿಯ ಕಾಳಗದಲ್ಲಿ ಎದುರಾಳಿಯ ರಕ್ತ ಚಿಮ್ಮಿಸಲು ಚನ್ನಪಟ್ಟಣದ ಜಟ್ಟಿ ರಘು ಸನ್ನದ್ಧರಾಗಿದ್ದಾರೆ.
ವಿಜಯದಶಮಿಯ ದಿನ ರಾಜವಂಶಸ್ಥರು ವಿಜಯ ಯಾತ್ರೆಗೆ ಹೋಗುವ ಮುನ್ನ ಅರಮನೆಯ ಕನ್ನಡಿ ತೊಟ್ಟಿ (ಕರಿಕಲ್ಲು ತೊಟ್ಟಿ)ಯಲ್ಲಿ ಜಟ್ಟಿಗಳಿಂದ ಆಯೋಜಿಸುವ ಜಟ್ಟಿ ಕಾಳಗ ಅಥವಾ ವಜ್ರಮುಷ್ಠಿ ಕಾಳಗಕ್ಕೆ ತನ್ನದೇ ಆದ ವೈಶಿಷ್ಟ್ಯ ಹಾಗೂ ಇತಿಹಾಸವಿದೆ. ಹಲವು ವರ್ಷಗಳಿಂದ ಈ ಕಾಳಗ ನಡೆಸಿಕೊಂಡು ಬರಲಾಗುತ್ತಿದ್ದು, ಈಗಲೂ ಅದನ್ನು ಮುಂದುವರಿಸಲಾಗುತ್ತಿದೆ. ಜಟ್ಟಿ ಕಾಳಗದಲ್ಲಿ ರಕ್ತ ಚಿಮ್ಮಿದ ನಂತರವೇ ಜಂಬೂಸವಾರಿ ಹೊರಡುವುದು ಈ ಕಾಳಗದ ಮಹತ್ವಕ್ಕೆ ಸಾಕ್ಷಿಯಾಗಿದೆ.
ಈ ವಜ್ರಮುಷ್ಟಿ ಕಾಳಗದಲ್ಲಿ ಎರಡು ಜೋಡಿ ಜಟ್ಟಿಗಳು ಚಾಮುಂಡೇಶ್ವರಿ ತಾಯಿಯ ಆಶೀರ್ವಾದ ಪಡೆದು, ರಾಜವಂಶಸ್ಥರ ಎದುರು ಕಾಳಗ ನಡೆಸುತ್ತಾರೆ. ಈ ಹಿಂದಿನಿಂದಲೂ ಜಟ್ಟಿ ಜನಾಂಗದವರು ಈ ವಜ್ರಮುಷ್ಟಿ ಕಾಳಗ ನಡೆಸಿಕೊಂಡು ಬರುತ್ತಿದ್ದಾರೆ. ಮೈಸೂರು, ಚಾಮರಾಜನಗರ, ಬೆಂಗಳೂರು ಹಾಗೂ ಚನ್ನಪಟ್ಟಣದಿಂದ ತಲಾ ಒಬ್ಬ ಜಟ್ಟಿಯನ್ನು ಆಯ್ಕೆ ಮಾಡಿ ರಾಜವಂಶಸ್ಥರ ಎದುರು ನಿಲ್ಲಿಸಲಾಗುತ್ತದೆ. ಮಹಾರಾಣಿಯವರು, ಕಾದಾಡಬೇಕಾದ ಜಟ್ಟಿಗಳ ಜೋಡಿಯನ್ನು ಆಯ್ಕೆ ಮಾಡುತ್ತಾರೆ. ಬಳಿಕ ವಜ್ರಮುಷ್ಟಿ ಕಾಳಗ ರಾಜ ಪರಂಪರೆಯಂತೆ ಸಾಗುತ್ತದೆ. ಎರಡು ಜೋಡಿ ಜಟ್ಟಿಗಳು ಕೈ ಬೆರಳುಗಳಲ್ಲಿ ಧರಿಸಿದ ಆಯುಧ (ವಜ್ರಮುಷ್ಟಿ)ದಿಂದ ಕಾದಾಟ ನಡೆಸುತ್ತಾರೆ. ಎದುರಾಳಿಯ ತಲೆಯಿಂದ ರಕ್ತ ಚಿಮ್ಮಿದಾಗ ವಜ್ರಮುಷ್ಟಿ ಕಾಳಗ ಕೊನೆಗೊಳ್ಳುತ್ತದೆ.

ಈ ಬಾರಿ ರಘು ಚನ್ನಪಟ್ಟಣದ ಜಟ್ಟಿ
ವಜ್ರಮುಷ್ಟಿ ಕಾಳಗದಲ್ಲಿ ಈ ಬಾರಿ ಚನ್ನಪಟ್ಟಣವನ್ನು ರಘು ಜಟ್ಟಿ ಪ್ರತಿನಿಧಿಸುತ್ತಿದ್ದಾರೆ. ಇದೇ ಮೊದಲ ಬಾರಿಗೆ ಕಾಳಗದಲ್ಲಿ ಭಾಗವಹಿಸುತ್ತಿರುವ ರಘು ಇದಕ್ಕಾಗಿ ಕಠಿಣ ತಾಲೀಮು ನಡೆಸುತ್ತಿದ್ದಾರೆ. ನಗರದ ಜಟ್ಟಿಗರ ಬೀದಿ ನಿವಾಸಿಯಾಗಿರುವ ನರೇಂದ್ರಮೂರ್ತಿ ಅವರ ಪುತ್ರನಾಗಿರುವ ರಘುಜಟ್ಟಿ ಖಾಸಗಿ ಸಂಸ್ಥೆಯ ಉದ್ಯೋಗಿಯಾಗಿದ್ದಾರೆ. ಈ ಬಾರಿಯ ಜಟ್ಟಿ ಕಾಳಗದಲ್ಲಿ ಭಾಗವಹಿಸಲು ರಘು ಈಗಾಗಲೇ ಮಾಜಿ ಜಟ್ಟಿಗಳ ಮಾರ್ಗದರ್ಶನದಲ್ಲಿ ಎದುರಾಳಿಯ ರಕ್ತ ಚಿಮ್ಮಲು ಬೇಕಾದ ತಂತ್ರಗಳ ಕಲಿಕೆಯಲ್ಲಿ ನಿರತರಾಗಿದ್ದಾರೆ.

ಮೈಸೂರು ರಾಜಮನೆತನಕ್ಕೂ ಚನ್ನಪಟ್ಟಣ ಜಟ್ಟಿ ಜನಾಂಗಕ್ಕೂ ಅವಿನಾಭಾವ ಸಂಬಂಧವಿದೆ. ನಮಗೆ ರಾಜಮನೆತನದ ಬಗ್ಗೆ ಅಪಾರವಾದ ಸ್ವಾಮಿ ನಿಷ್ಠೆ ಇದೆ. ಈ ಬಾರಿಯ ಕಾಳಗದಲ್ಲಿ ಭಾಗವಹಿಸುತ್ತಿರುವುದು ನನ್ನ ಪುಣ್ಯ.| ರಘು ಜಟ್ಟಿ, ಕಾಳಗದಲ್ಲಿ ಭಾಗವಹಿಸಲಿರುವರು.