ತೇರದಾಳ: ಪಟ್ಟಣದ ಜೆ.ವಿ. ಮಂಡಳ ಸ್ವತಂತ್ರ ಪಪೂ ಕಾಲೇಜು ಆವರಣದಲ್ಲಿ ಮಂಗಳವಾರ ಜತ್ತಿ ಫೌಂಡೇಷನ್ ವತಿಯಿಂದ ಪ್ರಾನ್ಸ್ ವಿದ್ಯಾರ್ಥಿಗಳ ಸಹಯೋಗದಲ್ಲಿ ಪ್ರೊಜೆಕ್ಟ್ ವಿದ್ಯಾದೇಗುಲ ಕಾರ್ಯಕ್ರಮ ನಡೆಯಿತು.
ಸಂಸ್ಥೆ ಕಾರ್ಯದರ್ಶಿ ಡಾ.ಜೆ.ಬಿ. ಆಲಗೂರ ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ವಿದೇಶಿ ವಿದ್ಯಾರ್ಥಿಗಳ ಸಾಮಾಜಿಕ ಕಾರ್ಯವು ತೇರದಾಳ ಭಾಗದಲ್ಲಿ ದ್ರುವ ಜತ್ತಿ ಅವರ ನೇತೃತ್ವದಲ್ಲಿ ನಡೆಯುತ್ತಿರುವುದು ಶ್ಲಾಘನೀಯವಾಗಿದೆ. ಇವರ ಈ ಕಾರ್ಯಕ್ಕೆ ನಮ್ಮ ಪಿಯು ಕಾಲೇಜು ವಿದ್ಯಾರ್ಥಿಗಳೂ ಸಹಕಾರ ನೀಡಲಿದ್ದಾರೆ. ಅಲ್ಲದೆ, ಪ್ರತಿವರ್ಷ ನಮ್ಮ ಕ್ಯಾಂಪಸ್‌ನಲ್ಲಿ 108 ಸಸಿಗಳನ್ನು ನೆಡುತ್ತಾ ಬಂದಿದ್ದೇವೆ ಎಂದು ತಿಳಿಸಿದರು.
ದ್ರುವ ಜತ್ತಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ವಾತಾವರಣ ಸಂಪೂರ್ಣ ಕಲುಷಿತಗೊಳುತ್ತಿದೆ. ಜಾಗತಿಕ ತಾಪಮಾನ ಹೆಚ್ಚಾಗುತ್ತಿದ್ದು, ಉಸಿರುಗಟ್ಟುವ ವಾತಾವರಣ ನಿರ್ಮಾಣವಾಗುತ್ತಿದೆ. ಆದ್ದರಿಂದ ಪ್ರಾನ್ಸ್ ವಿದ್ಯಾರ್ಥಿಗಳ ಸಹಯೋಗದಲ್ಲಿ ತಾಲೂಕಿನ ಮದನಮಟ್ಟಿ ಗ್ರಾಮದ ಬಳಿ ವಾರದ ಕೊನೆಯ ಎರಡು ದಿನಗಳಲ್ಲಿ ಒಂದು ಸಾವಿರ ಸಸಿ ನೆಡುವ ಕಾರ್ಯದ ಮೂಲಕ ಹಸಿರು ವಾತಾವರಣಕ್ಕೆ ಪೂರಕ ಕಾರ್ಯ ಮಾಡುವ ಉದ್ದೇಶ ಹೊಂದಲಾಗಿದೆ. ಸರ್ಕಾರಿ ಶಾಲೆಗಳ ಉಳಿವಿಗಾಗಿ ಅದರ ಸಮಗ್ರ ಅಭಿವೃದ್ಧಿ ಕಾರ್ಯಕ್ಕಾಗಿ ಪ್ರಾನ್ಸ್ ವಿದ್ಯಾರ್ಥಿಗಳು ಶ್ರಮಿವಹಿಸಲಿದ್ದಾರೆ. ಪ್ರಸ್ತುತ ವರ್ಷ ಕುಲಹಳ್ಳಿ ಸರ್ಕಾರಿ ಶಾಲೆ ಆಯ್ಕೆ ಮಾಡಿಕೊಳ್ಳಲಾಗಿದೆ. ವಾರದ ಎರಡು ದಿನಗಳನ್ನು ಸಸಿ ನೆಡಲು ವಿನಿಯೋಗಿಸಲಾಗುವುದು ಎಂದರು. ಈ ವೇಳೆ ಕಾಲೇಜು ವಿದ್ಯಾರ್ಥಿಗಳು ಪ್ರಾನ್ಸ್ ವಿದ್ಯಾರ್ಥಿಗಳೊಂದಿಗೆ ಪ್ರಶ್ನೋತ್ತರ ಸಂವಾದ ನಡೆಸಿದರು.
ಸಂಸ್ಥೆ ಅಧ್ಯಕ್ಷ ಟಿ.ಸಿ. ಪಡಸಲಗಿ ಅಧ್ಯಕ್ಷತೆ ವಹಿಸಿದ್ದರು. ಪ್ರಾನ್ಸ್ ದೇಶದ ಹುಗೋ, ಲೌರಾ, ಸೊರೆನ್, ಇಸಿಯಾ ಹಾಗೂ ಸಂಸ್ಥೆಯ ಡಿ.ಆರ್. ಪಾಟೀಲ, ಬಾಬು ಸಾವಂತನ್ನವರ, ಪ್ರವೀಣ ನಾಡಗೌಡ, ಬಿ.ಡಿ. ಬದನಿಕಾಯಿ, ಪಿ.ಎಂ. ಹೊಸೂರ, ಪ್ರಾಚಾರ್ಯ ಎಸ್.ಎಸ್. ಕುಳ್ಳಿ ಇದ್ದರು.