ಜಿಲ್ಲೆ

ವೈಭವ ಕಳೆದುಕೊಳ್ಳುತ್ತಿರುವ ಜಾತ್ರೋತ್ಸವ

Mysuru - Desk - Ravikumar

ಮಡಿಕೇರಿ: ಬೇಸಾಯಕ್ಕೆ ಟ್ರ್ಯಾಕ್ಟರ್, ಟಿಲ್ಲರ್ ಯಂತ್ರೋಪಕರಣಗಳ ಬಳಕೆಯಿಂದ ಜಾನುವಾರುಗಳ ಸಾಕಣೆ ಕಡಿಮೆಯಾಗಿರುವುದರಿಂದ ಜಾತ್ರೋತ್ಸವಗಳ ಹಿಂದಿನ ವೈಭವವನ್ನು ಕಳೆದುಕೊಳ್ಳುತ್ತಿದೆ ಎಂದು ಕೊಡ್ಲಿಪೇಟೆ ಕಲ್ಲುಮಠದ ಪೀಠಾಧ್ಯಕ್ಷ ಶ್ರೀ ಮಹಾಂತ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.


ಶನಿವಾರಸಂತೆ ಗುಡುಗಳಲೆ ಜಾತ್ರಾ ಮೈದಾನದಲ್ಲಿ ಬುಧವಾರ ಆರಂಭವಾದ 80ನೇ ವರ್ಷದ ಗುಡುಗಳಲೆ ಜಯದೇವ ಜಾನುವಾರುಗಳ ಜಾತ್ರೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, ಆಧುನಿಕ ಬದಲಾವಣೆಯಿಂದ ಗ್ರಾಮೀಣ ಪ್ರದೇಶಗಳಲ್ಲಿ ಯುವಕರು ಡಾಕ್ಟರ್, ಇಂಜಿನಿಯರ್‌ಗಳಾಗಿ ಪಟ್ಟಣ ಸೇರಿರುವುದರಿಂದ ಮನೆಗಳು ವೃದ್ಧಾಶ್ರಮಗಳಾಗುತ್ತಿದ್ದು, ರೈತರು ಯಂತ್ರೋಪಕರಣಗಳನ್ನು ಬಳಸಿ ವ್ಯವಸಾಯ ಮಾಡುತ್ತಿರುವುದರಿಂದ ಜಾನುವಾರುಗಳ ಸಾಕಣೆ ಮರೆಯಾಗುತ್ತಿದೆ ಎಂದು ಹೇಳಿದರು.


ರೈತರು ಹಿಂದಿನ ಕಾಲದಂತೆ ಜಾನುವಾರುಗಳನ್ನು ಬಳಸಿ ಬಸವಣ್ಣನವರು ಹೇಳಿದಂತೆ ಕಾಯಕೆವೇ ಕೈಲಾಸ ಎಂಬಂತೆ ಶ್ರಮವಹಿಸಿ ವ್ಯವಸಾಯ ಮಾಡಲು ಪ್ರಯತ್ನಿಸಿದರೆ ಜಾನುವಾರುಗಳ ಸಂಖ್ಯೆ ವೃದ್ಧಿಯಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಗುಡುಗಳಲೆ ಜಯದೇವ ಜಾನುವಾರುಗಳ ಜಾತ್ರೆ ಕೆಳಗುಂದುತ್ತಿದ್ದು, ಜಾತ್ರಾ ಸಮಿತಿ ಪದಾಧಿಕಾರಿಗಳು ಜಾತ್ರೆ ಹೆಸರಿನಲ್ಲಿ ರಥೋತ್ಸವವನ್ನು ಹಮ್ಮಿಕೊಂಡರೆ ಜಾತ್ರೆಯ ವೈಭವ ಮರುಕಳಿಸಲು ಸಾಧ್ಯವಾಗಬಹುದು ಎಂದು ಸಲಹೆ ನೀಡಿದರು.


ಮುದ್ದಿನಕಟ್ಟೆ ಮಠಾಧೀಶ ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಮನುಷ್ಯನ ದುರಾಸೆಯಿಂದ ವಿಶ್ವಾಸ ಎಂಬುವುದು ಮರೆಯಾಗುತ್ತಿದೆ. ರೈತರು ದೇಶೀಯ ತಳಿಯ ಹಸುಗಳನ್ನು ಸಾಕಣೆ ಮಾಡುತ್ತಿಲ್ಲ. ಹೆಚ್ಚು ಹಾಲು, ಹಣ ತಂದುಕೊಡುವಂತಹ ವಿದೇಶಿ ತಳಿಯ ಹಸುಗಳನ್ನು ಸಾಕಣೆ ಮಾಡುತ್ತಿರುವುದರಿಂದ ದೇಶೀ ತಳಿಯ ಹಸುಗಳ ಸಾಕಣೆ ಕಡಿಮೆಯಾಗುತ್ತಿದೆ ಎಂದರು.


ಜಾನುವಾರುಗಳಿಂದ ಎಲ್ಲ ರೀತಿಯಲ್ಲೂ ಉಪಯೋಗವಿದ್ದು ಸಗಣಿಯಿಂದ ಸಾವಯವ ಗೊಬ್ಬರ, ಉತ್ತಮ ಆಮ್ಲಜನಕ ದೊರೆಯುತ್ತದೆ. ಈ ನಿಟ್ಟಿನಲ್ಲಿ ಜಾನುವಾರುಗಳ ಸಂಖ್ಯೆ ವೃದ್ಧಿಯಾಗಬೇಕಿದೆ. ಯುವಕರು ಆಧುನಿಕತೆಗೆ ಮಾರುಹೋಗಿ ತನ್ನ ಬದುಕನ್ನು ಕಳೆದುಕೊಳ್ಳುತ್ತಿರುವುದು ದುರಂತ. ಭೂಮಿಯ ಸ್ಪರ್ಶಕ್ಕಿಂತ ಕಾಂಕ್ರೀಟ್ ಸ್ಪರ್ಶವೇ ಹೆಚ್ಚಾಗುತ್ತಿರುವುದ್ದರಿಂದ ಅದರ ಆಯಸ್ಸು ಕಮ್ಮಿಯಾಗುತ್ತಿದೆ ಎಂದು ವಿಷಾದಿಸಿದರು.


ಜಾತ್ರೆಯನ್ನು ಶನಿವಾರಸಂತೆ ಸಿಐ ಚಂದ್ರಶೇಖರ್ ಸಾಂಕೇತಿಕವಾಗಿ ಉದ್ಘಾಟಿಸಿದರು. ವೇದಿಕೆ ಕಾರ್ಯಕ್ರಮದಲ್ಲಿ ಜಾತ್ರಾ ಸಮಿತಿ ಅಧ್ಯಕ್ಷ ವಿನಿತ್‌ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಶಿಡುಗಳಲೆ ಮಠದ ಶ್ರೀ ಇಮ್ಮಡಿ ಶಿವಲಿಂಗ ಸ್ವಾಮೀಜಿ, ಹಂಡ್ಲಿ ಗ್ರಾ.ಪಂ.ಅಧ್ಯಕ್ಷೆ ಸುಧಾ ಈರೇಶ್, ಗ್ರಾ.ಪಂ.ಉಪಾಧ್ಯಕ್ಷ ಎಚ್.ಎಸ್.ಅಶೋಕ್, ಪ್ರಮುಖರಾದ ಡಿ.ಬಿ.ಸೋಮಪ್ಪ, ಡಿ.ಬಿ.ಧರ್ಮಪ್ಪ, ಪೂರ್ಣಿಮಾ ಕಿರಣ್, ವೀರೇಂದ್ರ ಕುಮಾರ್, ಹಾಲಪ್ಪ, ವಿನೂತ್ ಶಂಕರ್, ಉಮಾಶಂಕರ್, ತಾ.ಪಂ.ಮಾಜಿ ಸದಸ್ಯ ಕುಶಾಲಪ್ಪ ಇತರರು ಇದ್ದರು.

ಬಸವೇಶ್ವರ ದೇವರ ಅಡ್ಡಪಲ್ಲಕ್ಕಿ ಮೆರವಣಿಗೆ
ಜಾತ್ರೆ ಪ್ರಯುಕ್ತ ಬೆಳಗ್ಗೆ 9 ಗಂಟೆಯಿಂದ ಗುಡುಗಳಲೆ ಜಾತ್ರಾ ಮೈದಾನದಲ್ಲಿರುವ ಬಸವೇಶ್ವರ ದೇವರ ಅಡ್ಡಪಲ್ಲಕ್ಕಿ ಮೆರವಣಿಗೆ ಶನಿವಾರಸಂತೆ ಬನ್ನಿಮಂಟಪದಿಂದ ಮುಖ್ಯ ರಸ್ತೆ ಮೂಲಕ ಸಾಗಿ ಗುಡುಗಳಲೆ ಜಂಕ್ಷನ್‌ನಲ್ಲಿರುವ ಬಸವೇಶ್ವರ ದೇವಾಲಯದ ಸುತ್ತ ಪ್ರದಕ್ಷಣೆ ಹಾಕಿ ಗುಡುಗಳಲೆ ಜಾತ್ರಾ ಮೈದಾನದ ದ್ವಾರವನ್ನು ಪ್ರವೇಶಿಸಿತು. ನಂತರ ಬಸವೇಶ್ವರ ದೇವಾಲಯದಲ್ಲಿ ದೇವರ ಅಡ್ಡಪಲ್ಲಕ್ಕಿ ಮೆರವಣಿಗೆ ಕೊನೆಗೊಂಡಿತು. ಮೆರವಣಿಗೆ ಸಂದರ್ಭ ಸಾಂಕೇತಿಕವಾಗಿ ಅಲಂಕರಿಸಿದ ಎತ್ತುಗಳು, ನಂದಿ ಧ್ವಜ, ವೀರಾಗಾಸೆ ಕುಣಿತ, ವಾದ್ಯಗೋಷ್ಠಿಯೊಂದಿಗೆ ಮೆರವಣಿಗೆ ನಡೆಸಲಾಯಿತು.