ಜಿಲ್ಲೆ

ಮೂರು ದಿನ ನಡೆಯಲಿರುವ ಮಾರಮ್ಮ ದೇವಿ ಜಾತ್ರೆಗೆ ಕೆಳಗೋಟೆ ಸಜ್ಜು

Chitradurga

ಚಿತ್ರದುರ್ಗ: ನಗರದ ರಾಜಬೀದಿಗಳಲ್ಲಿ ಕೆಳಗೋಟೆಯ ಮಾರಮ್ಮ ಮತ್ತು ಜೋಗಿಮಟ್ಟಿ ರಸ್ತೆಯ ತ್ರಿಪುರಸುಂದರಿ ತಿಪ್ಪಿನಘಟ್ಟಮ್ಮ ಶಕ್ತಿದೇವತೆಗಳ ಮೆರವಣಿಗೆ ನೂರಾರು ಭಕ್ತರ ಸಮ್ಮುಖದಲ್ಲಿ ಸೋಮವಾರ ಅದ್ದೂರಿಯಾಗಿ ನಡೆಯಿತು.

ಬುಡಕಟ್ಟು ಸಂಸ್ಕೃತಿಯ ತವರೂರಾದ ಚಿತ್ರದುರ್ಗದಲ್ಲಿ ಮಾರಮ್ಮ ದೇವಿಯನ್ನು ಅರಾಧಿಸುವ ಅಸಂಖ್ಯಾತ

ಭಕ್ತಗಣವಿದೆ. ಚಳ್ಳಕೆರೆ ತಾಲೂಕಿನ ಗೌರಸಂದ್ರ ಮಾರಮ್ಮ ದೇವಿಯ ಜಾತ್ರೆಯಾದ ಬಳಿಕ ಜಿಲ್ಲೆಯ ಹಲವೆಡೆ ಮಾರಮ್ಮ ದೇವಿ ಜಾತ್ರೆಯನ್ನು ಹಂತ ಹಂತವಾಗಿ ಮಂಗಳವಾರದಂದು ಆಚರಿಸುತ್ತ ಬರಲಾಗಿದೆ. ಈಗಾಗಲೇ ನಗರದ ವಿವಿಧೆಡೆ ಜಾತ್ರೆ ಆಚರಿಸಲಾಗಿದ್ದು, ಇದಕ್ಕೆ ಕೆಳಗೋಟೆಯೂ ಹೊರತಾಗಿಲ್ಲ.

ಈ ಬಡಾವಣೆಯಲ್ಲಿ ಬಹುಮುಖ್ಯವಾಗಿ ಎರಡು ಕಡೆ ಮಾರಮ್ಮ ದೇವಿ ದೇಗುಲವಿದ್ದು, ಪ್ರತಿ ವರ್ಷ ಜಾತ್ರಾ ಮಹೋತ್ಸವವನ್ನು ಮೂರು ದಿನ ಅದ್ದೂರಿಯಾಗಿ ಆಚರಿಸುವ ಪರಂಪರೆ ಇದೆ. ವಿದ್ಯುತ್ ದೀಪಾಲಂಕಾರದಿಂದ

ಪ್ರಮುಖ ಮಾರ್ಗ ಕಂಗೊಳಿಸುತ್ತಿದ್ದು, ಭಕ್ತರನ್ನು ಕೈಬೀಸಿ ಕರೆಯುತ್ತಿದೆ. ಇಲ್ಲಿಯ ಅನೇಕರ ಮನೆಗಳಲ್ಲೂ ಸಂಭ್ರಮ ಮನೆಮಾಡಿದೆ. ಕೋವಿಡ್ ಕಾರಣಕ್ಕೆ 2ವರ್ಷ ಕಳೆಗುಂದಿದ್ದ ಉತ್ಸವ ಪುನಃ ಕಳೆಗಟ್ಟಿದೆ. ಅದರ ಅಂಗವಾಗಿ ಗಂಗಾಪೂಜೆ ಸೇರಿದಂತೆ ವಿವಿಧ ಪೂಜಾ ವಿಧಿವಿಧಾನಗಳು ಜರುಗಿದವು.

ಮೆರವಣಿಗೆಗೆ ಸಜ್ಜಾಗಲು ದೇವತೆಗಳ ಉತ್ಸವ ಮೂರ್ತಿಯನ್ನು ಅರ್ಚಕರು ಕೋಟೆ ರಸ್ತೆಯಲ್ಲಿನ ಗಾರೆಬಾಗಿಲು ಈಶ್ವರನ ಸನ್ನಿಧಾನಕ್ಕೆ ಕರೆತಂದರು. ಅಲ್ಲಿ ವೈಭವೋಪೇತವಾಗಿ ವಿವಿಧ ಬಗೆಯ ಪುಷ್ಪ, ನವಿಲು ಗೆರೆ ಸೇರಿ ಇತರೆ ಆಕರ್ಷಕ ವಸ್ತುಗಳಿಂದ ಭಕ್ತರ ಕಣ್ಮನ ಸೆಳೆಯುವಂತೆ ಅಲಂಕರಿಲಾಯಿತು.

ಅಲಂಕೃತ ಟ್ರ್ಯಾಕ್ಟರ್‌ನಲ್ಲಿ ದೇವಿಯರ ಮೂರ್ತಿಯನ್ನು ಕೂರಿಸಿದ ಬಳಿಕ ಮೆರವಣಿಗೆಗೆ ಚಾಲನೆ ನೀಡಲಾಯಿತು.

ಏಕನಾಥೇಶ್ವರಿ ದೇವಿ ಪಾದದಗುಡಿ, ಫಿಲ್ಟರ್‌ಹೌಸ್ ರಸ್ತೆ, ಕರುವಿನಕಟ್ಟೆ, ಭರಮಣ್ಣನಾಯಕ, ಮದಕರಿನಾಯಕ ವೃತ್ತ, ಬಾರ್‌ಲೈನ್ ಸೇರಿ ವಿವಿಧ ಮಾರ್ಗಗಳಲ್ಲಿ ಸಂಚರಿಸಿತು.

ಮೆರವಣಿಗೆ ಸಾಗಿದ ಮಾರ್ಗದಲ್ಲಿ ರಸ್ತೆಗೆ ನೀರೆರೆಚುವ ಮೂಲಕ ಮಹಿಳೆಯರು ಸ್ವಾಗತಿಸಿದರು. ಕರಡಿ ಚಮ್ಮಳ, ಸೋಮನ ಕುಣಿತ, ಡೊಳ್ಳು, ಬ್ಯಾಂಡ್ ಸೆಟ್, ಉರುಮೆ ಸೇರಿ ಇತರೆ ಜನಪದ ಕಲಾವಿದರು ಮೆರುಗು ನೀಡಿದರು. ಭಕ್ತರ ಉಧೋ ಉಧೋ ಎಂಬ ಹರ್ಷೋದ್ಘಾರದೊಂದಿಗೆ ಸಾಗಿ ದೇಗುಲ ತಲುಪಿತು.

ಜೋಗಿಮಟ್ಟಿ ರಸ್ತೆಯಲ್ಲೂ ಸಂಭ್ರಮ

ಜೋಗಿಮಟ್ಟಿ ರಸ್ತೆಯ ಗೌರಸಂದ್ರ ಮಾರಮ್ಮ ದೇವಿ ದೇಗುಲದಲ್ಲೂ ಜಾತ್ರೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮಂಗಳವಾರ ದೇವಿಯ ಮೂರ್ತಿಗೆ ವಿಶೇಷ ಪುಷ್ಪಾಲಂಕಾರ ಸೇವೆ ನಡೆಯಲಿದೆ. ದೇಗುಲಕ್ಕೆ ಬರುವ ಭಕ್ತರಿಗೆ ಪ್ರಸಾದ ವಿತರಿಸಲಾಗುವುದು ಎಂದು ಸಮಿತಿ ತಿಳಿಸಿದೆ.