ಅರಸೀಕೆರೆ: ನಗರದ ಗ್ರಾಮದೇವತೆಗಳಾದ ಶ್ರೀ ಕರಿಯಮ್ಮ ಮತ್ತು ಮಲ್ಲಿಗೆಮ್ಮ ದೇವಿಯರ ಜಾತ್ರಾ ಮಹೋತ್ಸವಕ್ಕೆ ಮಡಿಲಕ್ಕಿ ಸೇವೆ ನೆರವೇರಿಸುವುದರ ಮೂಲಕ ವಿಧ್ಯುಕ್ತವಾಗಿ ಚಾಲನೆ ನೀಡಲಾಯಿತು. ದೇವಿಯ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಹೊತ್ತ ಭಕ್ತರು ವಿವಿಧ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಗ್ರಾಮದೇವತೆಯನ್ನು ಶ್ರದ್ಧಾ, ಭಕ್ತಿಯಿಂದ ಬರಮಾಡಿಕೊಂಡ ಭಕ್ತ ಸಮೂಹ ಪೂಜೆ-ಪುನಸ್ಕಾರ ಮಾಡುವ ಮೂಲಕ ಅಮ್ಮನವರಿಗೆ ಅರಿಶಿನ ಕುಂಕುಮ, ಬಳೆ, ಸೀರೆ ತೊಡಿಸಿ ಮುತ್ತೈದೆಯರು ಸಂಭ್ರಮಿಸಿದರು.
ದೇವಾಲಯ ಅಭಿವೃದ್ಧಿ ಸಮಿತಿ ಕಾರ್ಯದರ್ಶಿ ಕಿರಣ್ ಕುಮಾರ್ ಮಾತನಾಡಿ, ಗ್ರಾಮದೇವತೆಗಳ ಜಾತ್ರೆ ಮಹೋತ್ಸವವನ್ನು ಭಕ್ತರ ಸಹಕಾರದೊಂದಿಗೆ ವಿಜೃಂಭಣೆಯಿಂದ ಆಚರಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಏ.29ರಿಂದ ಮೇ 3ರವರೆಗೆ ಜರುಗಲಿದೆ. ಏ.29ರ ಬೆಳಗ್ಗೆ ಮಲ್ಲಿಗೆಮ್ಮ ದೇವಾಲಯದಲ್ಲಿ ರುದ್ರಾಭಿಷೇಕ, ಸಂಜೆ ಮೂರು ಕಳಸ ಮಠದ ಶ್ರೀ ಗುರುಸಿದ್ದರಾಮೇಶ್ವರ ಸ್ವಾಮಿ ಹಾಗೂ ಗ್ರಾಮದೇವತೆ ಕರಿಯಮ್ಮ ಮತ್ತು ಮಲ್ಲಿಗೆಮ್ಮ ದೇವಿಯರ ಸಮ್ಮುಖದಲ್ಲಿ ಕೆಂಗಲ್ ಸಿದ್ದೇಶ್ವರ ದೇವಸ್ಥಾನದಲ್ಲಿ ನೂರೊಂದೆಡೆ ಸೇವೆ, ಏ.30 ಮಂಗಳವಾರ ಮೂಲ ಸನ್ನಿಧಾನದಲ್ಲಿ ಬಾನ ನೈವೇದ್ಯ, ಮೇ 1ರಂದು ಗಂಗಾಸ್ನಾನ, ಮೇ 2ರಂದು ಮಹಾ ರಥೋತ್ಸವ ವಿಜೃಂಭಣೆಯಿಂದ ಜರುಗಲಿದೆ. ಮೇ 3ರಂದು ಸಂಜೆ ಕರಿಯಮ್ಮ, ಮಲ್ಲಿಗೆಮ್ಮದೇವಿ ಆನೆ ಅಂಬಾರಿ ಉತ್ಸವ ನಗರದ ಪ್ರಮುಖ ರಸ್ತೆಗಳಲ್ಲಿ ನಡೆಯಲಿದೆ.