ಜಿಲ್ಲೆ

ನಂಜದೇವರ ಕಾವಲಿನಲ್ಲಿ ಕಲ್ಯಾಣೋತ್ಸವ

ಎ. ಆರ್. ರಘುರಾಮ

ಆಲೂರು : ತಾಲೂಕಿನ ಸೋಂಪುರ ಗ್ರಾಮದ ನಂಜದೇವರ ಕಾವಲಿನಲ್ಲಿರುವ ಶ್ರೀ ನಂಜುಂಡೇಶ್ವರಸ್ವಾಮಿ ಮತ್ತು ಪಾರ್ವತಮ್ಮನವರ ಗಿರಿಜಾ ಕಲ್ಯಾಣೋತ್ಸವ ಹಾಗೂ ಜಾತ್ರಾ ಮಹೋತ್ಸವ ಮೂರು ದಿನಗಳ ಕಾಲ ಸಂಭ್ರಮ- ಸಡಗರದಿಂದ ನೆರವೇರಿತು. ಗ್ರಾಮದ ನಂಜುಂಡೇಶ್ವರ- ಪಾರ್ವತಮ್ಮ ಸೇರಿದಂತೆ ಸುತ್ತಮುತ್ತಲಿನ ದೇವರ ಅಡ್ಡೆಗಳನ್ನು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಈ ಸಂದರ್ಭ ವೀರಗಾಸೆ ನೃತ್ಯ, ನಂದಿ ಧ್ವಜ ಕುಣಿತ, ಕೀಲು ಕುದುರೆ ಸೇರಿದಂತೆ ಬಗೆಬಗೆಯ ಜಾನಪದ ಕಲಾ ತಂಡಗಳು ಮೆರುಗು ನೀಡಿದವು.
ಗ್ರಾಮಸ್ಥರು ಎಲ್ಲಾ ದೇವರ ಅಡ್ಡೆಗಳನ್ನು ಬರಮಾಡಿಕೊಂಡು ವಿವಿಧ ಪೂಜಾ ಕೈಂಕರ್ಯ ನಡೆಸಿದರು. ಹಳೇಬೀಡು ಶ್ರೀ ಪುಷ್ಪಗಿರಿ ಪೀಠದ ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯದಲ್ಲಿ ವೀರಭದ್ರೇಶ್ವರಸ್ವಾಮಿ ಕೆಂಡೋತ್ಸೋವ ನಡೆಯಿತು.