ಆಲೂರು : ತಾಲೂಕಿನ ಕುಂದೂರು ಹೋಬಳಿ ಕಿರಗಡಲು ಗ್ರಾಮದಲ್ಲಿರುವ ಶ್ರೀ ಪಂಚಲಿಂಗೇಶ್ವರ ಸ್ವಾಮಿ ಜಾತ್ರೆಗೆ ಸಿದ್ಧತೆ ಪೂರ್ಣಗೊಂಡಿದೆ. ಮುಜರಾಯಿ ಇಲಾಖೆಗೆ ಸೇರಿದ ದೇಗುಲದಲ್ಲಿ ಡಿ.12 ಮತ್ತು ಡಿ.13ರಂದು ಜಾತ್ರೋತ್ಸವ ನಡೆಯಲಿದ್ದು, ಗ್ರಾಮ ತಳಿರು ತೋರಣದಿಂದ ಅಲಂಕೃತಗೊಂಡಿದೆ.
ಜಿಲ್ಲಾ ಕೇಂದ್ರದಿಂದ 12 ಕಿ.ಮೀ. ದೂರದಲ್ಲಿರುವ ಕಿರಗಡಲು ಗ್ರಾಮದ ಪಂಚಲಿಂಗೇಶ್ವರ ದೇಗುಲ ವಿಶಿಷ್ಟ ಧಾರ್ಮಿಕ ಹಿನ್ನೆಲೆ ಹೊಂದಿದೆ. ಯಗಚಿ ನದಿ ದಡದಲ್ಲಿರುವ ಗ್ರಾಮದಲ್ಲಿ ಚೋಳರು ಆಡಳಿತ ನಡೆಸುತ್ತಿದ್ದರು. ಸುತ್ತಮುತ್ತಲ ಹತ್ತಾರು ಗ್ರಾಮಗಳ ಜನರು ಪುರಾತನ ಕಾಲದಿಂದಲೂ ಪ್ರತಿ ವರ್ಷದ ಕಾರ್ತಿಕ ಮಾಸದಲ್ಲಿ ನಡೆಯುವ ಪೂಜೆಯಲ್ಲಿ ಭಕ್ತಿಯಿಂದ ಪಾಲ್ಗೊಳ್ಳುತ್ತಿರುವುದರಿಂದ ಸಂಭ್ರಮದಿಂದ ಜಾತ್ರೆ ನಡೆಯುತ್ತಿದೆ.
ಡಿ.12 ಮತ್ತು 13 ರಂದು ನಡೆಯುವ ಜಂಪೋತ್ಸವ, ರಾತ್ರಿ ಸುಗ್ಗಿ ಕುಣಿತ, ನಂದಿ ಧ್ವಜ ಕುಣಿತದಲ್ಲಿ ಗ್ರಾಮದ ಯುವಕರು ದೇವರ ವಿಗ್ರಹಗಳನ್ನು ಹೊತ್ತು ಸುಗ್ಗಿ ಕುಣಿತ ಮಾಡುತ್ತಾರೆ. ದೇವಸ್ಥಾನದ ಎದುರು ಇಡೀ ರಾತ್ರಿ ಕಾಳಮ್ಮನ ಕಳಸ ಹೊರಿಸಿ ಹೆಣ್ಣುಮಕ್ಕಳು ಕಳಸ ಹಾಗೂ ದೀಪಗಳೊಂದಿಗೆ ಇಡೀ ರಾತ್ರಿ ಕುಣಿಯುತ್ತಾರೆ. ಮರುದಿನ ಬೆಳಗ್ಗೆ ಯಗಚಿ ನದಿಯಲ್ಲಿ ಗಂಗಾಪೂಜೆ, ತೀರ್ಥಸ್ನಾನ ಸಮೇತ ನಂದಿಧ್ವಜ ಕುಣಿತ, ಭದ್ರಕಾಳಮ್ಮನ ಕಳಸ, ವೀರಭದ್ರೇಶ್ವರ ಮತ್ತು ದಕ್ಷ ಬ್ರಹ್ಮದೇವರ ಅಡ್ಡೆಯೊಂದಿಗೆ ತೆರಳುತ್ತಾರೆ. ಈ ಅಮೂಲ್ಯ ಹಾಗೂ ಅಪರೂಪದ ಕ್ಷಣವನ್ನು ಸಾವಿರಾರು ಭಕ್ತರು ಕಣ್ತುಂಬಿಕೊಳ್ಳುತ್ತಾರೆ. ಇದು ಇಲ್ಲಿನ ವಿಶೇಷ ಆಚರಣೆಯಾಗಿದೆ. 12ರಂದು ಮಧ್ಯಾಹ್ನ 12ಕ್ಕೆ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ. ತಲಕಾಡಿನ ಪಂಚಲಿಂಗ ದರ್ಶನ ವೈಭವವನ್ನು ಜಿಲ್ಲೆಯ ಆಲೂರು ತಾಲೂಕಿನ ಕಿರಗಡಲು ಗ್ರಾಮದಲ್ಲೇ ನೋಡುವ ಅವಕಾಶ ನಮಗೆ ಸಿಕ್ಕಿದೆ. ಈ ಅಪರೂಪದ ಸ್ಥಳವನ್ನು ಇನ್ನಷ್ಟು ಅಭಿವೃದ್ಧಿಪಡಿಸಬೇಕಿದೆ.