ಜಿಲ್ಲೆ

ಮಾಘ ಅಮಾವಾಸ್ಯೆ ಆಚರಣೆ

Uttara Kannada - Subash Hegde

ಕಾರವಾರ: ಮಾಘ ಅಮವಾಸ್ಯೆಯ ಅಂಗವಾಗಿ ತಾಲೂಕಿನ ಮಾಜಾಳಿ ಕಡಲ ತೀರದಲ್ಲಿ ಸಾವಿರಾರು ಜನ ಸೇರಿ ಸಮುದ್ರ ಸ್ನಾನ ಮಾಡಿ ಪುನೀತರಾದರು.

ಮಾಘ ಅಮಾವಾಸ್ಯೆಯಂದು ಸಮುದ್ರ ಸ್ನಾನ ಮಾಡಿದರೆ ಪಾಪವೆಲ್ಲ ತೊಳೆದು ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬುದು ಆಸ್ತಿಕರ ನಂಬಿಕೆ. ಈ ಹಿನ್ನೆಲೆಯಲ್ಲಿ ತಾಲೂಕಿನ ಎಲ್ಲೆಡೆ ತೀರದಲ್ಲಿ ಭಕ್ತರು ಸಮುದ್ರ ಸ್ನಾನ ಮಾಡಿದರು. ಮಾಜಾಳಿಯಲ್ಲಿ ಮರಳಿನ ಲಿಂಗಗಳನ್ನು ಮಾಡಿ ಪೂಜಿಸಿ, ನಂತರ ಸ್ನಾನ ಮಾಡಿ, ಪಡಿ ದಾನ ಮಾಡಿದರು. ಯುವಕರು ಮಾನವ ಫಿರಾಮಿಡ್ ಮಾಡಿ ಆನಂದಿಸಿದರು. ಹಲವರು ಬಾಳೆ ಹಣ್ಣುಗಳನ್ನು ಸಮುದ್ರಕ್ಕೆ ಎಸೆದು ಹರಕೆ ಒಪ್ಪಿಸಿದರು. ಕೆಲವರು ಪಿತೃಗಳ ಹೆಸರಿನಲ್ಲಿ ಪಿಂಡ ಪ್ರದಾನ ಮಾಡಿದರು.

ಪಲ್ಲಕ್ಕಿಗಳ ಸ್ನಾನ:

ನಾವು ಮಾನವರು ಸಮುದ್ರ ಸ್ನಾನ ಮಾಡಿಸಿದಂತೆ ದೇವರಿಗೂ ಸಮುದ್ರ ಸ್ನಾನ ಮಾಡಿಸುವುದು ಭಕ್ತರ ವಾಡಿಕೆ. ಮಾಜಾಳಿಯ ರಾಮನಾಥ ದೇವಸ್ಥಾನ ಹಾಗೂ ಅದರ ಏಳು ಪರಿವಾರ ದೇವರ ಪಲ್ಲಕ್ಕಿಗಳನ್ನು ಏಕಕಾಲದಲ್ಲಿ ವಾದ್ಯ, ಛತ್ರ, ಚಾಮರಗಳೊಂದಿಗೆ ಮಾಜಾಳಿ ಕಡಲ ತೀರಕ್ಕೆ ತಂದು ಸಮುದ್ರ ಸ್ನಾನ ಮಾಡಿಸಿ ವಾಪಸ್ ಕರೆದೊಯ್ದರು. ಸಮುದ್ರ ಸ್ನಾನ ಮಾಡಿದ ಭಕ್ತರು ಪಲ್ಲಕ್ಕಿಯಲ್ಲಿ ಬಂದ ದೇವರಿಗೆ ಪೂಜೆ ಸಲ್ಲಿಸಿದರು.