ಜಿಲ್ಲೆ

ಎಡೆಯೂರು ಸಿದ್ದಲಿಂಗೇಶ್ವರ ಜಾತ್ರೆ ನಾಳೆಯಿಂದ  : ಶ್ರೀ ಸಿದ್ದಲಿಂಗೇಶ್ವರನ ಸನ್ನಿಧಿಯಲ್ಲಿ ಜಾತ್ರೆ ವೈಭೋಗ

Tumakuru

ತುಮಕೂರು : ಜಿಲ್ಲೆಯ ಪ್ರಮುಖ ದೇಗುಲ ಎನಿಸಿರುವ ಎಡೆಯೂರು ಸಿದ್ದಲಿಂಗೇಶ್ವರ ಸ್ವಾಮಿಯ ಪುಣ್ಯ ಕ್ಷೇತ್ರದ ನೆಲವೀಡು.

15ನೇ ಶತಮಾನದ ಸಿದ್ದಲಿಂಗೇಶ್ವರರು 700 ವಿರಕ್ತ ಶಿಷ್ಯ ಸಮುದಾಯದೊಂದಿಗೆ ದೇಶದಾದ್ಯಂತ ಸಂಚರಿಸಿ ಧರ್ಮ ಪ್ರಚಾರ ಮಾಡುತ್ತಾ ಕೊನೆಗೆ ಎಡೆಯೂರು ಸಮೀಪದ ಕಗ್ಗೆರೆಯ ತೋಟವೊಂದರಲ್ಲಿ ನೆಲೆಸಿ ತಪಸ್ಸನ್ನಾಚರಿಸಿದ್ದ ಇಂದು ಪುಣ್ಯಕ್ಷೇತ್ರವಾಗಿದೆ.

ತಪಸ್ಸಿಗೆ ಕುಳಿತ ಮುನಿಯನ್ನು ಭಕ್ತರು ಪೂಜಿಸಿ ತೋಂಟದ ಸಿದ್ದಲಿಂಗಸ್ವಾಮಿಗಳು ಎಂದು ಕರೆಯುತ್ತಾರೆ. ಹೀಗೆ 12 ವರ್ಷ ತಪಸ್ಸಿಗೆ ಕುಳಿತ ಯತಿಗಳ ಸುತ್ತ ಹುತ್ತ ಬೆಳೆಯುತ್ತದೆ. ಹಸುವೊಂದು ನಿತ್ಯವೂ ತಾನಾಗಿಯೇ ಬಂದು ಹಾಲು ಸುರಿಸುತ್ತಿತ್ತು ಎಂಬ ನಂಬಿಕೆ ಇಂದಿಗೂ ಭಕ್ತರಲ್ಲಿದೆ. ಬರಗಾಲದಿಂದ ಬಸವಳಿದಿದ್ದಾಗ ಬಂಡೆಯೊಂದನ್ನು ಎತ್ತಿ ಜಲವುಕ್ಕಿಸಿ ಬರಗಾಲದ ಬೇಗೆಯನ್ನು ಸಿದ್ದಲಿಂಗೇಶ್ವರರು ನೀಗಿಸಿದ್ದ ಆ ಕ್ಷೇತ್ರವೇ ಸಿದ್ಧಗಂಗೆ. ನಂತರ ಸಿದ್ದಲಿಂಗೇಶ್ವರರು ಪರ್ಯಟನೆ ಮುಂದುವರಿಸಿ ಎಡೆಯೂರಿನಲ್ಲಿ ಜೀವಂತ ಸಮಾಧಿ ಹೊಂದಿ ನಂಬಿದ ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸುತ್ತಿದ್ದಾರೆ ಎಂಬ ಪ್ರತೀತಿ ಇದೆ.

ಕೊಡುವ ಇಷ್ಟದೈವ, ಎಡೆಯೂರದೊರೆ, ಎಂಬ ಭಕ್ತಿಯ ಆರಾಧನೆ ಲಕ್ಷಲಕ್ಷಜನರಿಂದ ನಡೆಯುತ್ತಿದೆ. ಇಷ್ಟೇ ಪ್ರಖರವಾದ ಸಿದ್ದಲಿಂಗೇಶ್ವರರ ಜ್ಞಾನ ಚಿಂತನೆ ಮತ್ತು ವಿಚಾರವಾದಿ ಮುಖಗಳು ಜಾತಿ ಧರ್ಮಗಳ ಭೇದವಿಲ್ಲದೆಯೇ ಲಕ್ಷಾಂತರ ಜನ ಎಡೆಯೂರಿಗೆ ಬಂದು ಭಕ್ತಿಯಿಂದ ನಮಿಸಲು ಕಾರಣವಾಗಿದೆ.

ಶರಣ ಚಳವಳಿ, ಸಿದ್ದಲಿಂಗೇಶ್ವರರು : ಕ್ರಾಂತಿಕಾರಿ ಬಸವಣ್ಣನವರ ನೇತೃತ್ವದಲ್ಲಿ ಅಲ್ಲಮಪ್ರಭು, ಅಕ್ಕಮಹಾದೇವಿ ಹೀಗೆ ಹಲವು ವಚನಕಾರರೊಂದಿಗೆ 1ನೇ ಶತಮಾನದಲ್ಲಿ ಆರಂಭವಾದ ಶರಣ ಚಳವಳಿ, ವಚನ ಚಳವಳಿಗಳು ಕಾಲಾಂತರದಲ್ಲಿ ನಿಂತನೀರಾಗಿದ್ದವು.

ಈ ಎಲ್ಲ ಚಳವಳಿಗಳಿಗೆ ಮರುಜೀವ ಬಂದಿದ್ದು 15ನೇ ಶತಮಾನದಲ್ಲಿ. ಸಿದ್ದಲಿಂಗೇಶ್ವರರು ಆಧ್ಯಾತ್ಮಿಕವಾಗಿ ಜನರಿಗೆ ಮಾರ್ಗದರ್ಶನ ಮಾಡಿದರು. ಕುರುಡು ಸಂಪ್ರದಾಯ ವಿರೋಧಿಸಿ, ಜಿಡ್ಡುಗಟ್ಟಿದ್ದ ಮನಸ್ಸುಗಳಿಗೆ ಚೈತನ್ಯ ತುಂಬಿದರು. ಜನರ ಭಾವನೆಗಳಿಗೆ ಸ್ಪಂದಿಸಿ, ಸಾಮಾಜಿಕ ಕಲ್ಯಾಣ ಕಾರ್ಯಗಳಿಗೆ ಸಿದ್ದಲಿಂಗೇಶ್ವರರು ಮುಂದಾಗುತ್ತಿದ್ದರು. 12ನೇ ಶತಮಾನದಲ್ಲಿ ಕಲ್ಯಾಣ ಕ್ರಾಂತಿ ಮೂಲಕ ಬಸವಣ್ಣ ಮಹಾಶರಣನೆನಿಸುತ್ತಾರೆ. ನಂತರದ ಸ್ಥಾನದಲ್ಲಿ ಸಿದ್ದಲಿಂಗೇಶ್ವರರು ನಿಲ್ಲುತ್ತಾರೆ. ಉತ್ತರ ಕರ್ನಾಟಕದಲ್ಲಿ ಸಾಮಾಜಿಕ ಕ್ರಾಂತಿ ಬಸವಣ್ಣನಿಂದ ಆದರೆ ದಕ್ಷಿಣದಲ್ಲಿ ಸಿದ್ದಲಿಂಗೇಶ್ವರರಿಂದ ಆಯಿತು.

ವಿಶೇಷ ರಥ : ಎಡೆಯೂರಿನ ರಥ ರಾಜ್ಯದಲ್ಲಿಯೇ ವಿಶೇಷ, ರಥಕ್ಕೆ ಸುಮಾರು 6 ಅಡಿ ಎತ್ತರದ 6 ಕಲ್ಲಿನ ಚಕ್ರಗಳಿವೆ. ರಥದ ಮೇಲೆ ಆಕರ್ಷಕ, ವೈವಿಧ್ಯಮಯ ಕೆತ್ತನೆಗಳಿವೆ. ರಥದ ತುದಿಯಲ್ಲಿ ಕಳಸವಿದೆ. ಮರದ ತುಂಡುಗಳನ್ನು ಜೋಡಿಸಿ, ಬಣ್ಣಬಣ್ಣದ ಬಾವುಲಿಗಳನ್ನು ಕಟ್ಟಿ ರಥವನ್ನು ಸಿಂಗರಿಸಲಾಗುತ್ತದೆ. ಚಿತ್ರದುರ್ಗದ ಮೋಕ್ಷಗುಂಡಲ ಶ್ರೀನಿವಾಸ ಅವಧಾನಿಗಳವರ ತೋಟದಲ್ಲಿ ಶ್ರೀ ಸಿದ್ಧಲಿಂಗೇಶ್ವರರು ಷಡಕ್ಷರಿ ಮಂತ್ರದ ಮಹಿಮೆಯನ್ನು ಬಣ್ಣಿಸಿರುವ ವಚನ ಶಿಲಾಶಾಸನವಾಗಿ ಕೆತ್ತಲ್ಪಟ್ಟಿದೆ.

ನಾಳೆ ಜಾತ್ರೆ ಆರಂಭ : ಏ.1ರಿಂದ 16ರವರೆಗೆ ಜಾತ್ರೆ ನಡೆಯಲಿದೆ, ಏ.1 ಹುತ್ತದವಾಹನ, ಶನಿವಾರ ಯುಗಾದಿ ದಿನ ಮಹಾಗಣಪತಿ ಪೂಜೆ, ರಥಕ್ಕೆ ಕಳಸರೋಹಣದಿಂದ ಉತ್ಸವಕ್ಕೆ ಚಾಲನೆ ಸಿಗಲಿದೆ. ಏ.3ರಂದು ಪಲ್ಲಕ್ಕಿ ಉತ್ಸವ, ರುದ್ರಾಕ್ಷಿ ಮಂಟಪ, 4ರಂದು ಪಲ್ಲಕ್ಕಿ ಉತ್ಸವ, ನಂದಿ ವಾಹನ, ಚೌಕಟ್ಟು ಪಲ್ಲಕ್ಕಿ ಉತ್ಸವ, ಏ.5ರಂದು ಗಜ, ಬಸವನ ವಾಹನ, ಏ.6ರಂದು ಉತ್ಸವದ ಜತೆಗೆ ಪಾನಕ, ಲಾಹಾರ ವಿತರಣೆ, ಏ.7ರಂದು ಬೆಳಗ್ಗೆ ಪುಶ್ವರಥ, ಸಂಜೆ ಬಿಲ್ವರುಕ್ಷ ಹಾಗೂ ಉಯ್ಯಲೆ ಉತ್ಸವಗಳು ನಡೆಯಲಿದೆ. ಏ.8ರಂದು ಬೆಳಗ್ಗೆ ಚಂದ್ರ ಮಂಡಲ, ಗದ್ದುಗೆಗೆ ವಿಶೇಷ ಅರ್ಚನೆ, ನಂದಿ ಧ್ವಜ ಪೂಜೆ, ಮಧ್ಯಾಹ್ನ 12ಕ್ಕೆ ಮಹಾರಥೋತ್ಸವ ನಡೆಯಲಿದ್ದು ನಾಡಿನಾದ್ಯಂತ ಸಾವಿರಾರು ಜನರು ಆಗಮಿಸಲಿದ್ದು ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಲಿದ್ದಾರೆ. ರಾತ್ರಿ 10ಕ್ಕೆ ಮುತ್ತಿನ ಪಲ್ಲಕ್ಕಿ, ಏ.9ರಂದು ಬಿಲ್ವರುಕ್ಷವಾಹನ, 10ರಂದು ಬೆಳ್ಳಿ ಪಲ್ಲಕ್ಕಿ ಉತ್ಸವ ನಡೆಯಲಿದೆ. ಏ.16ರಂದು ಜಾತ್ರೆ ಸಂಪನ್ನವಾಗಲಿದೆ.

ಸಿದ್ಧಲಿಂಗೇಶ್ವರ ಸ್ವಾಮಿಗೆ ಕಾರ್ತೀಕ ಸೋಮವಾರ ಪ್ರಿಯವಾದ ವಾರವಾಗಿದ್ದು ಹೆಚ್ಚು ಜನರು ಆಗಮಿಸಿ ಪೂಜೆ ಸಲ್ಲಿಸುತ್ತಾರೆ. ಶ್ರಾವಣದಲ್ಲಿ ತ್ರಿಕಾಲ ಪೂಜೆ, ಅಭಿಷೇಕವಿರುತ್ತದೆ, ಶಿವರಾತ್ರಿಯಲ್ಲಿ ವಿಶೇಷ ಪೂಜೆ, ಅಭಿಷೇಕ ನಡೆಯಲಿದೆ. ಸಿದ್ದನಂಜದೇವರು ಅರ್ಚಕ ಎಡೆಯೂರು ಸಿದ್ದಲಿಂಗೇಶ್ವರ ಸ್ವಾಮಿಗೆ ನಾಡಿನೆಲ್ಲೆಡೆಯಿಂದ ಸಾವಿರಾರು ಭಕ್ತರು ಪ್ರತಿನಿತ್ಯ ಆಗಮಿಸಿ ಪೂಜೆ ಸಲ್ಲಿಸುತ್ತಾರೆ. ದೇವಾಲಯದಲ್ಲಿ ಭಕ್ತರಿಗಾಗಿ ಎಲ್ಲ ವ್ಯವಸ್ಥೆ ಮಾಡಿಕೊಡಲಾಗಿದೆ. ಜಾತ್ರೆ ಸಂದರ್ಭದಲ್ಲಿ ದೇವಾಲಯಕ್ಕೆ ಹೆಚ್ಚು ಜನರು ಬರುತ್ತಾರೆ. ಸುರೇಶ್, ಪಾರುಪತ್ಯದಾರರು