ಜಿಲ್ಲೆ

ವಿಶೇಷ ಚೇತನರ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಜಾಥಾ

ಮೈಸೂರು: ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕುಂದುಕೊರತೆ ಸಭೆಯನ್ನು ಪ್ರತಿ ಎರಡು ತಿಂಗಳಿಗೊಮ್ಮೆ ಕಡ್ಡಾಯವಾಗಿ ನಡೆಸಿ ಅಂಗವಿಕಲರ ಪ್ರಮುಖ ಸಮಸ್ಯೆಗಳನ್ನು ಆಲಿಸಿ, ಪರಿಹಾರ ಕೈಗೊಳ್ಳಬೇಕು ಸೇರಿದಂತೆ ಇತರೆ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ವಿಶೇಷ ಚೇತನರ ಹಕ್ಕುಗಳ ಹೋರಾಟ ಸಮಿತಿ ವತಿಯಿಯಿಂದ ಭಾನುವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಸ್ವಂತ ಮನೆಯಿಲ್ಲದ ಅಂಗವಿಕಲರಿಗೆ ವಸತಿ ಯೋಜನೆ ಅಬಡಿ ಅವಕಾಶ ನೀಡಬೇಕು. ಮುಡಾವು ಗುಂಪು/ ಆಶ್ರಯ ಮನೆ ಯೋಜನೆ ಮತ್ತು ಇತರ ವಸತಿ ಯೋಜನೆಗಳನ್ನು ಪ್ರಾರಂಭಿಸುವ ಹಂತದಲ್ಲಿದ್ದು, ನಾವು ಕೊಟ್ಟಂತಹ ದಾಖಲೆಗಳನ್ನು ಪರಿಶೀಲಿಸಿ ಅವಶ್ಯಕತೆ ಇರುವ ಅಂಗವಿಕಲರಿಗೆ ಪ್ರಥಮ ಆಧ್ಯತೆ ನೀಡಿ ವಸತಿ ಸೌಕರ್ಯ ಕಲ್ಪಿಸಿಕೊಡಬೇಕು.

ಹೊಸ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಮರ್ಪಕವಾಗಿ ಅಂಗವಿಕಲರಿಗೆ ಸಹಾಯವಾಗುವಂತೆ ರ‌್ಯಾಂಪ್ ಅಳವಡಿಸುವುದು ಮತ್ತು ಲಿಫ್ಟ್‌ನಲ್ಲಿ ಅಂಗವಿಕಲರಿಗೆ ಮೊದಲ ಆದ್ಯತೆ ಎಂದು ಫಲಕಗಳನ್ನು ಹಾಕಬೇಕು. ಜಿಲ್ಲಾಧಿಕಾರಿಗಳ ಕಚೇರಿ ಹಾಗೂ ನಗರ ಪಾಲಿಕೆಯಲ್ಲಿ ಅಂಗವಿಕಲರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಆಲಿಸಲು ಸಲಹಾ ಕೊಠಡಿಗಳನ್ನು ನೆಲಮಾಳಿಗೆಯಲ್ಲಿ ಇರುವಂತೆ ವ್ಯವಸ್ಥೆ ಮಾಡುವುದು.

ಜಿಲ್ಲಾಧಿಕಾರಿಗಳ ಕಚೇರಿ ಮತ್ತು ನಗರ ಪಾಲಿಕೆಯಲ್ಲಿ ಕಚೇರಿಯಲ್ಲಿ ಕಡ್ಡಾಯವಾಗಿ ವೀಲ್ ಚೇರ್ ವ್ಯವಸ್ಥೆ ಕಲ್ಪಿಸಿಕೊಡಬೇಕು. ಅಂಗವಿಕಲರ ಶೇ. 5 ರಷ್ಟು ಅನುದಾನವನ್ನು ಆದಷ್ಟು ಬೇಗ ಮತ್ತು ಕಡ್ಡಾಯವಾಗಿ ಸೂಕ್ತ ವ್ಯಕ್ತಿಗೆ ಬಳಕೆಯಾಗುವಂತೆ ನೋಡಿಕೊಳ್ಳಬೇಕು. ನಗರ ಪಾಲಿಕೆಯಲ್ಲಿ ಶೇ.5 ರಷ್ಟು ಅನುದಾನದ ಅಡಿಯಲ್ಲಿ ಅಂಗವಿಕಲರಿಗೆ ಸೈಟ್ ಕೊಳ್ಳಲು ನೀಡುತ್ತಿರುವ ಮೊತ್ತವನ್ನು ಮನೆಗಳನ್ನು ಕೊಳ್ಳಲು ಅನುಕೂಲವಾಗುವಂತೆ ಸುತ್ತೋಲೆ ಹೊರಡಿಸಬೇಕು ಸೇರಿದಂತೆ ನಾನಾ ಬೇಡಿಕೆ ಸಲ್ಲಿಸಿದರು.

ಇದಕ್ಕೂ ಮುನ್ನ ವಿಶೇಷ ಚೇತನರ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ವಿಶ್ವ ವಿಶೇಷ ಚೇತನರ ದಿನದ ಅಂಗವಾಗಿ ಜಾಥಾ ನಡೆಯಿತು. ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂದೆ ಜಮಾವಣೆಗೊಂಡ ಸಮಿತಿಯ ಸದಸ್ಯರು, ತ್ರಿಚಕ್ರ ವಾಹನದಲ್ಲಿ ಮೂಲಕ ಜಾಥಾ ನಡೆಸಿದರು. ನಗರದ ನಾನಾ ರಸ್ತೆಯಲ್ಲಿ ಸಂಚರಿಸಿದ ಜಾಥಾವು ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಅಂತ್ಯಗೊಂಡಿತು.

ಸಮಿತಿ ಅಧ್ಯಕ್ಷ ಎಂ.ಗಿರೀಶ್, ಉಪಾಧ್ಯಕ್ಷರಾದ ಸೈಯದ್ ಉಸ್ಮಾನ್, ಶಕುಂತಲಾ, ಕಾರ್ಯದರ್ಶಿ ಗೋಪಾಲ್ ಕೃಷ್ಣ, ಖಜಾಂಚಿ ದಿಲೀಪ್, ಸಂಚಾಲಕ ಪ್ರಭುಸ್ವಾಮಿ ಇತರರಿದ್ದರು.