ಆಲೂರು: ಸಂವಿಧಾನ ಧ್ಯೇಯದಲ್ಲಿ ನಾವೆಲ್ಲರೂ ಬದುಕುತ್ತಿದ್ದು, ಅದರ ಮಹತ್ವದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಹೆಚ್ಚುವರಿ ನಿರ್ದೇಶಕ ನಾಗೇಶ್ ಹೇಳಿದರು.ತಾಲೂಕಿನ ಪಾಳ್ಯ ಹೋಬಳಿ ತಾಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಟಿ. ಗುಡ್ಡೇನಹಳ್ಳಿ ಗ್ರಾಮದಲ್ಲಿ ಶನಿವಾರ ಸಂವಿಧಾನ ಜಾಗೃತಿ ರಥವನ್ನು ಸ್ವಾಗತಿಸಿ ಅವರು ಮಾತನಾಡಿದರು. ಪ್ರಪಂಚದ ಅತೀದೊಡ್ಡ ಪ್ರಜಾಪ್ರಭುತ್ವ ಹೊಂದಿರುವ ರಾಷ್ಟ್ರ ಭಾರತ. ಅನೇಕ ದೇಶಗಳ ಸಂವಿಧಾನವನ್ನು ಅಧ್ಯಯನ ನಡೆಸಿ, ದೇಶಕ್ಕೆ ಹೊಂದುವಂತೆ ರಚಿಸಿರುವ ಸಂವಿಧಾನವನ್ನು ಅರಿತುಕೊಂಡರೆ ಪ್ರಗತಿ ಸುಲಭವಾಗುತ್ತದೆ ಎಂದರು.ತಹಸೀಲ್ದಾರ್ ನಂದಕುಮಾರ್ ಮಾತನಾಡಿ, ಸಂವಿಧಾನವು ನಮ್ಮ ದೇಶದ ಸರ್ವೊಚ್ಛ ಕಾನೂನಾಗಿದೆ. ಇದರ ಅಡಿಯಲ್ಲಿ ಇತರೆ ಎಲ್ಲಾ ಕಾನೂನುಗಳು ಬರುತ್ತವೆ. ಸಂವಿಧಾನದ ಅಡಿಯಲ್ಲಿ ನೀಡಿರುವ ಹಕ್ಕು ಮತ್ತು ಕರ್ತವ್ಯಗಳನ್ನು ಪಾಲಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.