ಮಾನ್ವಿ: ಕುರ್ಡಿ ಗ್ರಾಮದ ರೈತ ತಿಪ್ಪಣ್ಣ ಅರ್ಧ ಎಕರೆ ಜಮೀನಿನಲ್ಲಿ ಮಲ್ಲಿಗೆ ಹೂ ಬೆಳೆದು ಲಾಭಗಳಿಸುವ ಮೂಲಕ ಮಳೆಯಾಶ್ರಿತ ಪ್ರದೇಶದ ರೈತರಿಗೆ ಮಾದರಿಯಾಗಿದ್ದಾರೆ.
ಕುರ್ಡಿ ಗ್ರಾಪಂ ವ್ಯಾಪ್ತಿಯಲ್ಲಿ ಕೊಳವೆ ಭಾವಿ ಇಲ್ಲವೇ ಮಳೆ ಆಧರಿಸಿ ಬೆಳೆ ಬೆಳೆಯಬೇಕು. ಇಲ್ಲಿನ ರೈತರು ಮೆಣಸಿನಕಾಯಿ, ಹತ್ತಿ, ಜೋಳ, ತೊಗರಿ ಹೆಚ್ಚಾಗಿ ಬೆಳೆಯುತ್ತಾರೆ. ಮೂರು ಎಕರೆ ಜಮೀನು ಹೊಂದಿರುವ ತಿಪ್ಪಣ್ಣ, 2022-23 ನೇ ಸಾಲಿನಲ್ಲಿ ತೋಟಗಾರಿಕೆ ಇಲಾಖೆಯಿಂದ ಉದ್ಯೋಗ ಖಾತ್ರಿ ಯೋಜನೆಯಡಿ 46,338 ರೂ. ಪಡೆದು ಅರ್ಧ ಎಕರೆ ಪ್ರದೇಶದಲ್ಲಿ ಮಲ್ಲಿಗೆ ಹೂ ಬೆಳೆಯಲು ಆರಂಭಿಸಿದ್ದರು.
ಜಮೀನಿನಲ್ಲಿ 300 ಸಸಿಗಳನ್ನು ನೆಡಲಾಗಿದೆ. ಗುಂಡಿ ಅಗೆದು ಸಸಿ ನಾಟಿ ಮಾಡಲು ಕೂಲಿಕಾರರ ವೆಚ್ಚವನ್ನು ಉದ್ಯೋಗಖಾತ್ರಿ ಯೋಜನೆಯಡಿ ವೆಚ್ಚ ಭರಿಸಲಾಗಿದೆ. ಈ ಹಿಂದೆ ತೊಗರಿ, ಸಜ್ಜೆ, ಮೆಣಸಿನಕಾಯಿ ಬೆಳೆಯುತ್ತಿದ್ದ ರೈತ ತಿಪ್ಪಣ್ಣ ಸುಮಾರು 25 ಸಾವಿರ ರೂ. ಲಾಭ ಪಡೆಯುತ್ತಿದ್ದರು. ಆದರೆ, ಮಲ್ಲಿಗೆ ಹೂ ಒಂದು ಲಕ್ಷ ರೂ. ಲಾಭ ತರುತ್ತಿರುವುದು ರೈತ ತಿಮ್ಮಪ್ಪ ಅವರಲ್ಲಿ ಸಂಭ್ರಮ ಹೆಚ್ಚಿಸಿದೆ.