ವಿಜಯವಾಣಿ ಸುದ್ದಿಜಾಲ ಉಡುಪಿ
ಆಧುನಿಕ ಯಂತ್ರೋಪಕರಣ ಬಳಕೆಯಿಂದ ಕೃಷಿ ಕಾರ್ಯ ಇಂದು ಸುಲಭವಾಗಿದೆ. ಆದರೂ ಹಿರಿಯರು ಕಾದುಕೊಂಡುಬಂದ ಕೃಷಿ ಭೂಮಿಯನ್ನು ಇಂದಿನ ಜನಾಂಗ ಮಾರಾಟ ಮಾಡುತ್ತಿವೆ. ಯುವಕರು ಮತ್ತು ವಿದೇಶಗಳಲ್ಲಿ ಉದ್ಯೋಗ ನಡೆಸಿ ನಿವೃತ್ತರಾದವರು ನಗರಗಳಲ್ಲಿರುವ ಅಪಾರ್ಟ್ಮೆಂಟ್ ವಾಸಿಗಳಾಗುತ್ತಿದ್ದಾರೆ. ತಮ್ಮ ಪಾಲಿನ ಜಮೀನು ಮಾರದೆ ಅಥವಾ ಹಡಿಲು ಬಿಡದೆ ಯಾವುದೇ ಕೃಷಿ ಮಾಡಿದರೂ ಲಾಭ ಪಡೆಯಬಹುದು ಎಂದು ಉಡುಪಿ ಜಿಲ್ಲಾ ಕೃಷಿಕ ಸಂಘದ ಪಾಂಬೂರು ಪಂಜಿಮಾರು ವಲಯ ಸಮಿತಿ ಅಧ್ಯಕ್ಷ ಸ್ಯಾಮ್ಸನ್ ನೊರೊನ್ಹಾ ಅಭಿಪ್ರಾಯಪಟ್ಟರು.
ಉಡುಪಿ ಜಿಲ್ಲಾ ಕೃಷಿಕ ಸಂಘದ ವತಿಯಿಂದ ಪಡುಬೆಳ್ಳೆ ಭಟ್ಟ ಸಾಲು ಪಾವ್ಲಿನ್ ಆಳ್ವಾ ಅವರ ಮನೆಯ ವಠಾರದಲ್ಲಿ ಜುಲೈ 23ರಂದು ಆಯೋಜಿಸಿದ್ದ ವೈಜ್ಞಾನಿಕ ಮಲ್ಲಿಗೆ ಮತ್ತು ಭತ್ತ ಕೃಷಿ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಗತಿಪರ ಕೃಷಿಕ ಪಾವ್ಲಿನ್ ಆಳ್ವಾ ಕಾರ್ಯಕ್ರಮ ಉದ್ಘಾಟಿಸಿದರು. ಸಾಮಾಜಿಕ ಮುಖಂಡ ಬೆಳ್ಳೆ ಸದಾನಂದ ಶೆಣೈ, ಪ್ರಗತಿಪರ ಕೃಷಿಕ ಎಚ್.ಕೆ. ಉಪಾಧ್ಯಾಯ, ಬಂಟಕಲ್ಲು- ಬಿ.ಸಿ. ರೋಡ್ ಲಯನ್ಸ್ ಕ್ಲಬ್ ಅಧ್ಯಕ್ಷ ಟೋನಿ ಮೋನಿಸ್, ಕ್ಯಾಥೋಲಿಕ್ ಸಭಾ ಅಧ್ಯಕ್ಷೆ ಗ್ರೇಸಿ ಕಾಡೋರ್ಜಾ ಪಾಂಬೂರು ಉಪಸ್ಥಿತರಿದ್ದರು.
ಕೃಷಿ ಮಾಹಿತಿದಾರರಾಗಿ ಪಾಲ್ಗೊಂಡಿದ್ದ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು ಕಡಿಮೆ ಖರ್ಚಿನಲ್ಲಿ ಮಲ್ಲಿಗೆ ಬೆಳೆ ಮತ್ತು ಪ್ರಗತಿಪರ ಕೃಷಿಕ ನಿತ್ಯಾನಂದ ನಾಯಕ ಪಾಲಮೆ ಭತ್ತ ಬೆಳೆಯುವ ಮಾಹಿತಿ ನೀಡಿದರು.
ಗ್ರೇಸಿ ಕಾಡೋರ್ಜಾ ಮತ್ತು ಹೆಲೆನ್ ಪ್ರಾರ್ಥಿಸಿದರು. ಎವರೆಸ್ಟ್ ಆಳ್ವಾ ವಂದಿಸಿದರು. ರಮೇಶ್ಚಂದ್ರ ನಾಯಕ ಕಾರ್ಯಕ್ರಮ ನಿರೂಪಿಸಿದರು.