ಪ್ರಕಾಶ್ ಮಂಜೇಶ್ವರ ಮಂಗಳೂರು
ಕೇವಲ 700 ಚದರ ಅಡಿ ಮನೆ ತಾರಸಿಯಲ್ಲಿ ಗ್ರೋ ಬ್ಯಾಗ್‌ನಲ್ಲಿ ಮಲ್ಲಿಗೆ ಕೃಷಿ ನಡೆಸಿ ವಾರಕ್ಕೆ ಸುಮಾರು 15 ಸಾವಿರ ರೂ. ಅಥವಾ ಒಳ್ಳೆಯ ದರವಿದ್ದರೆ ಅದಕ್ಕಿಂತಲೂ ಹೆಚ್ಚು ಗಳಿಸಬಹುದು. ದರ ಕುಸಿದರೆ ಗಳಿಕೆ ಸ್ವಲ್ಪ ಕಡಿಮೆಯಾಗಬಹುದು. ಮಲ್ಲಿಗೆ ಕೃಷಿಯನ್ನು ಸಮರ್ಪಕವಾಗಿ ನಿರ್ವಹಿಸಿದರೆ ಒಂದು ಸಣ್ಣ ಕುಟುಂಬಕ್ಕೆ ಈ ಆದಾಯದಲ್ಲೇ ಜೀವನ ನಡೆಸಲು ಕಷ್ಟವೇನೂ ಆಗದು.
ಇದು ವಿಟ್ಲ ಅಳಿಕೆ ಗ್ರಾಮದ ಮುಳಿಯದಲ್ಲಿ ಮನೆ ತಾರಸಿ ಮೇಲೆ ಗ್ರೋಬ್ಯಾಗ್‌ಗಳ 160 ಗಿಡಗಳಲ್ಲಿ ವಾರಕ್ಕೆ 25 ಸಾವಿರ ರೂ ತನಕ ಸಂಪಾದನೆ ಮಾಡುತ್ತಿರುವ ಜೆರಾಲ್ಡ್ ಡಿಸೋಜ ಮತ್ತು ಅನಿತಾ ಡಿಸೋಜ ದಂಪತಿಯ ಭರವಸೆಯ ಮಾತು.
ಜೆರಾಲ್ಡ್ ಅವರು ದಿನಂಪ್ರತಿ ಬೆಳಗ್ಗೆ ನಾಲ್ಕು ಗಂಟೆಗೆ ಎದ್ದು ನಿತ್ಯ ಕರ್ಮ ಮುಗಿಸಿ 4.30ಕ್ಕೆ ಪತ್ನಿ, ಮಕ್ಕಳ ಜತೆ ವಿದ್ಯುತ್ ಬೆಳಕಿನಲ್ಲಿಯೇ ಮಲ್ಲಿಗೆ ಮೊಗ್ಗುಗಳನ್ನು ಕೊಯ್ದು 10.30ಕ್ಕೆ ನಗರಕ್ಕೆ ಹೋಗುವ ಕಾರಿನಲ್ಲಿ ಕಳುಹಿಸಿಕೊಡುತ್ತಾರೆ. ಇನ್ನೊಮ್ಮೆ ಮಧ್ಯಾಹ್ನ ಕಳುಹಿಸುತ್ತಾರೆ. ಮತ್ತೆ ಹೂವುಗಳು ಉಳಿದರೆ ಸಂಜೆ ಕೂಡ ಕಳುಹಿಸುತ್ತಾರೆ. ದಿನಂಪ್ರತಿ ಮೂರು ಅಟ್ಟಿ ಹೂವುಗಳಿಗೆ ಕಡಿಮೆ ಇಲ್ಲ. ನಾಲ್ಕು ಅಟ್ಟಿ ಸಿಗುವುದು ಕೂಡ ಉಂಟು. ಅಟ್ಟಿಗೆ ಸಾಮಾನ್ಯವಾಗಿ ಒಂದು ಸಾವಿರ ರೂ ಅಧಿಕ ದರವಿರುತ್ತದೆ. ಒಳ್ಳೆಯ ದರವಿದ್ದರೆ ವಾರಕ್ಕೆ 26 ಸಾವಿರ ರೂ ತನಕ ದುಡಿಯುತ್ತಾರೆ.
ಮೂಲತಃ ಕೃಷಿಕರು
ಜೆರಾಲ್ಡ್ ಅವರು ಮೂಲತಃ ಕೃಷಿಕರು. ಸುಮಾರು 20 ಎಕರೆ ಜಾಗ ಲೀಸ್‌ಗೆ ಪಡೆದು 7000 ಅಡಕೆ, 30 ಹಸುಗಳನ್ನು ನಿರ್ವಹಿಸಿ ಗೆದ್ದವರು ಅವರು. ಆದರೆ ಕ್ರಮೇಣ ದೇಹದ ಕಸುವು ಕಡಿಮೆಯಾದಾಗ, ಲೀಸ್‌ಗೆ ಪಡೆದ ಜಾಗ ಮರಳಿಸಿ ತಮ್ಮದೇ ಹೆಸರಿನಲ್ಲಿರುವ 20 ಸೆಂಟ್ಸ್ ಜಮೀನಿನಲ್ಲಿ ಕೃಷಿ ಚಟುವಟಿಕೆ ಸೀಮಿತಗೊಳಿಸಿಕೊಂಡರು. ಪ್ರಸ್ತುತ ಇರುವ ಜಮೀನಿನಲ್ಲಿ 12 ತೆಂಗಿನ ಮರ, ಮೂರು ಹಸು, ಮೂರು ಓಡುವ ಕೋಣಗಳು ಅವರಲ್ಲಿವೆ. ಮಗಳು ಮಂಗಳೂರಿನಲ್ಲಿ ಉದ್ಯೋಗದಲ್ಲಿದ್ದು, ಮನೆಯಲ್ಲಿ ಮುಂಜಾನೆ ಹೂವು ಕೊಯ್ಯಲು, ಕಟ್ಟಲು ನೆರವಾಗುತ್ತಾರೆ. ಮಗ ಕೊಲ್ಲಿ ರಾಷ್ಟ್ರದಲ್ಲಿ ಉದ್ಯೋಗದಲ್ಲಿದ್ದು, ಊರಿಗೆ ಮರಳಿದ ಸಂದರ್ಭದಲ್ಲಿ ಅಪ್ಪ- ಅಮ್ಮ ನಡೆಸುವ ಕಾಯಕದಲ್ಲಿ ಜತೆಯಾಗುತ್ತಾರೆ. ಹೀಗೆ ಇಡೀ ಕುಟುಂಬ ಒಂದಲ್ಲ ಒಂದು ರೀತಿಯಲ್ಲಿ ಮಲ್ಲಿಗೆ ಕೃಷಿಯಲ್ಲಿ ಜತೆಯಾಗಿದೆ. ಆರಂಭದಲ್ಲಿ ಮನೆ ಮುಂಭಾಗ ನೆಲದಲ್ಲಿ ಮಲ್ಲಿಗೆ ಬೆಳೆ ತೆಗೆಯುತ್ತಿದ್ದ ಜೆರಾಲ್ಡ್ ಅವರಿಗೆ ತಾರಸಿ ಕೃಷಿಯ ಐಡಿಯಾ ಕೊಟ್ಟವರು ಸ್ಥಳ ಸಂದರ್ಶನ ನಡೆಸಿರುವ ಮಂಗಳೂರು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ರಶ್ಮಿ.
5 ಸಾವಿರ ರೂ ಬಂಡವಾಳ ಸಾಕು !
ಸಣ್ಣ ತಾರಸಿ ಮನೆಯಲ್ಲಿ 50 ಮಲ್ಲಿಗೆ ಗಿಡಗಳಿಂದ ಕೃಷಿ ನಡೆಸಲು ಗರಿಷ್ಠ 5 ಸಾವಿರ ರೂ ಬಂಡವಾಳ ಸಾಕು. ಜಾಗರೂಕತೆ ವಹಿಸಿದರೆ 4 ಸಾವಿರ ರೂ ನಲ್ಲಿ ಕೂಡ ಕೆಲಸ ಮಾಡಿಕೊಳ್ಳಬಹುದು ಎನ್ನುತ್ತಾರೆ ಜೆರಾಲ್ಡ್. 20 ಇಂಚು ಅಗಲದ 50 ಗ್ರೋ ಬ್ಯಾಗುಗಳು. 10 ಬುಟ್ಟಿ ಮಣ್ಣು ಮತ್ತು ಮೂರು ಬುಟ್ಟಿ ಮರಳು, 10 ಕೆಜಿ ಎರೆಹುಳ ಗೊಬ್ಬರ ಅಥವಾ ಒಣಗಿದ ಸೆಗಣಿ ಹುಡಿ ಮಿಶ್ರಣ ಮಾಡಿ ಗ್ರೋಬ್ಯಾಗ್ ಅರ್ಧ ತುಂಬಬೇಕು. ಉಳಿದ ಅರ್ಧ ಮಡಚಿಕೊಳ್ಳಬೇಕು. ಮಳೆಗಾಲ ಆರಂಭದಲ್ಲಿ ಕೀಟ ನಿರ್ವಹಣೆಗೆ ಬೇವಿನ ಹಿಂಡಿ, ಗುಮ್ಮಯ ಕೊಡಬೇಕು ಎನ್ನುವುದು ಅವರ ಸಲಹೆ.
ಕೃಷಿ ವಿಜ್ಞಾನ ಕೇಂದ್ರ ವತಿಯಿಂದ ಮಲ್ಲಿಗೆ ಗಿಡಗಳ ಸವರುವಿಕೆ ಹಾಗೂ ಸಮಗ್ರ ಪೋಷಕಾಂಶಗಳ ನಿರ್ವಹಣೆ ಕುರಿತು ಜೆರಾಲ್ಡ್ ಡಿಸೋಜ ಅವರ ಕುಟುಂಬಕ್ಕೆ ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ಒದಗಿಸಲಾಗಿದೆ. ಆರಂಭದಲ್ಲಿ ಗಿಡಗಳ ನಿರ್ವಹಣೆ ಹಾಗೂ ಇಳುವರಿಯಲ್ಲಿ ಸ್ವಲ್ಪ ಸಮಸ್ಯೆ ಎದುರಿಸುತ್ತಿದ್ದವರು ಇಂದು ಸ್ವಾವಲಂಬನೆಯ ಜೀವನಕ್ಕೆ ಅಗತ್ಯ ಆದಾಯವನ್ನು ಮಲ್ಲಿಗೆ ಕೃಷಿಯಿಂದಲೇ ಪಡೆಯುವಷ್ಟು ಬೆಳೆದಿದ್ದಾರೆ. ರಶ್ಮಿ ಕೃಷಿ ವಿಜ್ಞಾನ ಕೇಂದ್ರ ವಿಜ್ಞಾನಿ https://www.vijayavani.net/red-stone-and-sand-mining-halted https://www.vijayavani.net/barry-bhavana