ಜಿಲ್ಲೆ

ವಿಚಾರಣೆಗೆ ಬಂದ ದಿನೇಶ್ ​ಕಲ್ಲಹಳ್ಳಿ: ನಿನ್ನೆ ಗೈರು, ಇಂದು ಹಾಜರ್​

arunakunigal

ಬೆಂಗಳೂರು: ರಮೇಶ್​ ಜಾರಕಿಹೊಳಿ ಸೆಕ್ಸ್​ ಸಿಡಿ ಪ್ರಕರಣ ಸಂಬಂಧ ದೂರುದಾರ ದಿನೇಶ್​ ಕಲ್ಲಹಳ್ಳಿ ಇಂದು(ಶುಕ್ರವಾರ) ಕಬ್ಬನ್ ಪಾರ್ಕ್ ಪೊಲೀಸ್​ ಠಾಣೆಗೆ ವಿಚಾರಣೆಗೆ ಹಾಜರಾದರು.

ರಮೇಶ್​ ಜಾರಕಿಹೊಳಿ ಅವರದ್ದು ಎನ್ನಲಾದ ಸೆಕ್ಸ್​ ವಿಡಿಯೋ ಸಮೇತ ಸಂತ್ರಸ್ತ ಯುವತಿಗೆ ನ್ಯಾಯ ಕೊಡಿಸಬೇಕು. ಈ ಪ್ರಕರಣದ ಸತ್ಯಾಸತ್ಯತೆ ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮಾ.2ರಂದು ಪೊಲೀಸ್​ ಠಾಣೆಗೆ ಸಾಮಾಜಿಕ ಕಾರ್ಯಕರ್ತ ದಿನೇಶ್​ ಕಲ್ಲಹಳ್ಳಿ ದೂರು ನೀಡುವ ಮೂಲಕ ರಾಜ್ಯ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿಸಿದ್ದಾರೆ. ಈ ಪ್ರಕರಣ ಕುರಿತು ನಿನ್ನೆಯೇ ವಿಚಾರಣೆಗೆ ಹಾಜರಾಗುವಂತೆ ದಿನೇಶ್​ ಕಲ್ಲಹಳ್ಳಿಗೆ ಪೊಲೀಸರು ನೋಟಿಸ್ ನೀಡಿದ್ದರಾದರೂ, ಅವರು ಬಂದಿರಲಿಲ್ಲ. ಇದನ್ನೂ ಓದಿರಿ ಸೆಕ್ಸ್​ ವಿಡಿಯೋದಲ್ಲಿ ರಮೇಶ್​ ಜಾರಕಿಹೊಳಿಯ ಮಚ್ಚೆ ಹುಡುಕಿದ ಮಹೇಶ್​ ಕುಮಟಳ್ಳಿ!

'ರಮೇಶ್​ ಜಾರಕಿಹೊಳಿ ಸಿಡಿ ಬಯಲು ಮಾಡಿದ ನನಗೆ ಬೆದರಿಕೆ‌ ಕರೆಗಳು ಬರುತ್ತಿವೆ. ನನಗೆ ಸೂಕ್ತ ಭದ್ರತೆ ಬೇಕಾಗಿದೆ. ಹೀಗಾಗಿ ವಿಚಾರಣೆಗೆ ಮಾ.4ರಂದು ಹಾಜರಾಗಲು ಸಾಧ್ಯವಾಗಿಲ್ಲ. ಇದೇ ತಿಂಗಳ 9ರಂದು ಹಾಜರಾಗುತ್ತೇನೆ' ಎಂದಿದ್ದ ದಿನೇಶ್ ಕಲ್ಲಹಳ್ಳಿ, ಮರುದಿನವೇ(ಮಾ.5) ವಿಚಾರಣೆಗೆ ಹಾಜರಾದರು. ಇದನ್ನೂ ಓದಿರಿ ಜಾರಕಿಹೊಳಿ ಸೆಕ್ಸ್​ ಸಿಡಿ‌ ಪ್ರಕರಣ 5 ಕೋಟಿ ರೂಪಾಯಿಗೆ ಡೀಲ್​!

ನಿನ್ನೆ ಭದ್ರತೆ ಕೊರತೆ ಹಿನ್ನೆಲೆ ವಿಚಾರಣೆಗೆ ಬರಲು ಆಗಲಿಲ್ಲ. ಇಂದು ಪೊಲೀಸರು ಭದ್ರತೆ ನೀಡಿದ್ದಾರೆ. ಹಾಗಾಗಿ ಕಬ್ಬನ್ ಪಾರ್ಕ್ ಠಾಣೆಗೆ ಹಾಜರಾಗಿದ್ದೇನೆ ಎಂದು ಇದೇ ವೇಳೆ ಮಾಧ್ಯಮದವರಿಗೆ ದಿನೇಶ್​ ಕಲ್ಲಹಳ್ಳಿ ಹೇಳಿದರು.

ದಿನೇಶ್ ಕಲ್ಲಹಳ್ಳಿ ನೀಡಿದ ದೂರಿನಲ್ಲಿ ಸೂಕ್ತ ವಿವರಗಳಿಲ್ಲ ಹಾಗೂ ಅಲ್ಲದೆ ಸಂತ್ರಸ್ತ ಯುವತಿ ಬಗ್ಗೆ ಮಾಹಿತಿ ಕಲೆ ಹಾಕುವ ನಿಟ್ಟಿನಲ್ಲಿ ಠಾಣೆಗೆ ಬರಬೇಕೆಂದು ಪೊಲೀಸರು ನೋಟಿಸ್ ಜಾರಿ ಮಾಡಿದ್ದರು.