ಜಿಲ್ಲೆ

ದೀಪಾವಳಿ ಬಳಿಕ ಬ್ರೇಕಿಂಗ್ ನ್ಯೂಸ್

ಡಿ.ವಿ. ಕಮ್ಮಾರ

ದೀಪಾವಳಿ ಬಳಿಕ ಬ್ರೇಕಿಂಗ್ ನ್ಯೂಸ್ ಎಂದ ಬಾಲಚಂದ್ರ ಜಾರಕಿಹೊಳಿ
ಬೆಳಗಾವಿ: ಜಾರಕಿಹೊಳಿ ಕುಟುಂಬದ ಬಗ್ಗೆ ವೈಯಕ್ತಿಕ ತೇಜೋವಧೆ ಮಾಡುವವರಿಗೆ ಈಗ ಏನೂ ಹೇಳುವುದಿಲ್ಲ. ದೀಪಾವಳಿ ಬಳಿಕ ನಾವು ಕಾನೂನು ಹೋರಾಟ ಶುರು ಮಾಡುತ್ತೇವೆ. ಆಗ ಮಾಧ್ಯಮಗಳಿಗೆ ಬ್ರೇಕಿಂಗ್ ನ್ಯೂಸ್ ಕೊಡುತ್ತೇವೆ ಎಂದು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಬೆಳಗಾವಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಮಂಡಳಿಯ ಚುನಾವಣೆಗೆ ತಮ್ಮ ಬಣದಿಂದ ಏಳು ಜನ ಅಭ್ಯರ್ಥಿಗಳ ನಾಮಪತ್ರ ಸಲ್ಲಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಹಕಾರ ಕ್ಷೇತ್ರದ ಚುನಾವಣೆಗಳಲ್ಲಿ ಬರುತ್ತಿರುವ ನಿಂದನೆ, ವೈಯಕ್ತಿಕ ಆರೋಪಗಳನ್ನು ಮಾಡುವವರಿಗೆ ತಿರುಗೇಟು ನೀಡಿದರು.
ಹುಕ್ಕೇರಿ ವಿದ್ಯುತ್ ಸಂಘದ ಚುನಾವಣೆಯಿಂದ ನಮ್ಮ ಕುಟುಂಬದ ವಿರುದ್ಧ ವೈಯಕ್ತಿಕ ಆರೋಪಗಳು ಶುರುವಾಗಿವೆ. ಅವುಗಳಿಗೆಲ್ಲ ನಾವು ಸದ್ಯಕ್ಕೆ ಪ್ರತಿಕ್ರಿಯೆ ನೀಡುವುದಿಲ್ಲ‌. ಎಲ್ಲವನ್ನೂ ಗಮನಿಸುತ್ತಿದ್ದೇವೆ‌. ಗಂಭೀರವಾಗಿ ತೆಗದುಕೊಂಡಿದ್ದು, ದೀಪಾವಳಿ ಬಳಿಕ ಕಾನೂನು ಹೋರಾಟ ಶುರು ಮಾಡುತ್ತೇವೆ‌. ಟೀಕಿಸುವವರಿಗೆ ಕಾನೂನು ಮೂಲಕವೇ ಉತ್ತರ ನೀಡುತ್ತೇವೆ ಎಂದರು
ಕಳೆದ 20 ದಿನಗಳಿಂದ ಬಹಳ ಬಹಳ ಮಾತನಾಡಿದ್ದಾರೆ‌. ಆದರೆ ಅವರಂತೆ ನಾವು ನಿಂದಿಸಿವುದಿಲ್ಲ. ಹಾಗಂತ ಎಲ್ಲವನ್ನೂ ಕೇಳಿಸಿಕೊಂಡು ಸುಮ್ಮನಿದ್ದೇವೆ ಅಂತಿಲ್ಲ. ನಾವು ಸುಮ್ಮನಿರುವುದಿಲ್ಲ. ಆದರೆ ಇದಕ್ಕೆ ಕಾನೂನು ಮೂಲಕವೇ ಪ್ರತ್ಯುತ್ತರ ನೀಡುತ್ತೇವೆ. ನಮ್ಮ ಕುಟುಂಬದ ವಿಷಯ ಮಾತ್ರವಲ್ಲ, ನಮ್ಮ ಪೆನಲ್.ನ ಸದಸ್ಯರೂ ಸಹ ಕಾನೂನು ಹೋರಾಟ ಮಾಡಲಿದ್ದಾರೆ. ಆಗ ಮಾಧ್ಯಮಗಳಿಗೆ ಬ್ರೇಕಿಂಗ್ ನ್ಯೂಸ್ ಸಿಗಲಿದೆ ಎಂದರು.