ನರೇಗಲ್ಲ: ಮನುಷ್ಯನನ್ನು ಬಹಳಷ್ಟು ಕಾಡುವ ಸಂಗತಿಯೆಂದರೆ ಮನಸ್ಸಿನ ಭಾವನೆಗಳು. ಅದಕ್ಕೆಂದೆ ಗುರು-ಹಿರಿಯರು ಮನಸ್ಸನ್ನು ಮರ್ಕಟಕ್ಕೆ ಹೋಲಿಸಿದ್ದಾರೆ. ಈ ಮರ್ಕಟವನ್ನು ನಿಯಂತ್ರಿಸಲು ಜಪ-ತಪಗಳೆಂಬ ಅಂಕುಶ ಬೇಕೇ ಬೇಕು ಎಂದು ಶ್ರೀ ರಂಭಾಪುರಿ ಜಗದ್ಗುರುಗಳು ಹೇಳಿದರು.
ಅಬ್ಬಿಗೇರಿಯ ಹೊಸ ಹಿರೇಮಠದಲ್ಲಿ ಬುಧವಾರ ಇಷ್ಟಲಿಂಗ ಮಹಾಪೂಜೆ ನೆರವೇರಿಸಿದ ನಂತರ ಆಶೀರ್ವಚನ ನೀಡಿದರು.
ಜೀವನದ ಎಲ್ಲ ಆಗು ಹೋಗುಗಳಿಗೆ ಮನಸ್ಸೇ ಕಾರಣ. ಇದನ್ನು ನಿಯಂತ್ರಣದಲ್ಲಿಡದಿದ್ದರೆ ಅಥವಾ ಮನಸ್ಸು ಹೇಳಿದಂತೆ ಕೇಳಿದರೆ ಅವಘಡ ಕಟ್ಟಿಟ್ಟ ಬುತ್ತಿ. ಇಷ್ಟಲಿಂಗ ಮಹಾಪೂಜೆಯಲ್ಲಿ ಪಾಲ್ಗೊಂಡು ಜಪ-ತಪಗಳ ಮೂಲಕ, ಉತ್ತಮ ಸಾಹಿತ್ಯ ಓದುವ ಮೂಲಕ ಮನಸ್ಸನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಸುಲಭ. ನಮ್ಮ ಮಲ ತ್ರಯಗಳನ್ನು ಕಳೆದು, ಮನಸ್ಸು ಪಿಂಡಗಳನ್ನು ಕಳೆದು ಯಾವುದು ನಮಗೆ ಶಿವಜ್ಞಾನ ಮಾಡಿಸುತ್ತದೆಯೋ ಅದಕ್ಕೆ ವೀರಶೈವ ಧರ್ಮದಲ್ಲಿ ಅಯ್ಯಚಾರ, ಶಿವದೀಕ್ಷೆ ಎನ್ನುತ್ತಾರೆ. ಶಿವನನ್ನು ಯಾರು ಬೇಕಾದರೂ ಪೂಜಿಸಿ ಫಲ ಪಡೆಯಬಹುದು. ಅಧ್ಯಾತ್ಮ ಸಾಧನೆಗೆ ಭದ್ರ ಬುನಾದಿ ಹಾಕಿರುವುದು ಶಿವದೀಕ್ಷೆ. ಈ ಲಿಂಗ ಪೂಜೆಯನ್ನು ಕೇವಲ ವೀರಶೈವರಷ್ಟೇ ಮಾಡಬೇಕೆಂದಿಲ್ಲ. ಯಾರಿಗೆ ಶಿವನು ಪ್ರಿಯನಾಗಿದ್ದಾನೆಯೋ ಅವರೆಲ್ಲರಿಗೂ ಅವರವರ ಧರ್ಮದ ಆಚರಣೆಯ ಪ್ರಕಾರ ಶಿವನ ಪೂಜೆ ಮಾಡುವ ಹಕ್ಕಿದೆ. ಶಿವಪೂಜೆಯನ್ನು 108 ಬಾರಿ ಮಾಡಿದರೆ ಉತ್ತಮ. ಕೆಲಸದ ಒತ್ತಡದಿಂದ ಆಗುವುದಿಲ್ಲ ಎನ್ನಿಸಿದರೆ ಕನಿಷ್ಠ ಒಂದು ಬಾರಿಯಾದರೂ ಲಿಂಗ ಪೂಜೆ ಮಾಡಿದರೆ ಒಳಿತು ಎಂದು ಜಗದ್ಗುರುಗಳು ಅಭಿಪ್ರಾಯಪಟ್ಟರು.
ಹಸ್ತ ಜಪ ಮಾಡಲು ಸುಲಭದ ವಿಧಾನವಾಗಿದೆ. ಒಮ್ಮೆ ಹಸ್ತ ಜಪ ಮಾಡಿದರೆ ಅದು ನೂರೆಂಟು ಸಾರಿ ಜಪ ಮಾಡಿದ ಪುಣ್ಯ ನೀಡುತ್ತದೆ. ನಿಮ್ಮ ಹಸ್ತದಿಂದ ಯಾವುದೇ ವಸ್ತುವನ್ನು ಕೊಟ್ಟರೂ ಅದರಿಂದ ಅವರಿಗೆ ಒಳ್ಳೆಯದೇ ಆಗುತ್ತದೆ. ವಾಚಿಕ ಜಪ, ಉಪಾಂಶು ಜಪ, ಮಾನಸಿಕ ಜಪ ಎಂದು ಮೂರು ಪ್ರಕಾರಗಳಾಗಿವೆ. ಈ ಮೂರರಲ್ಲಿ ಮಾನಸಿಕ ಜಪ ಶ್ರೇಷ್ಠವಾದುದು. ಮೂರರಲ್ಲಿ ಯಾವುದು ಸರಳ ಎನ್ನಿಸುತ್ತದೆಯೋ ಅದನ್ನು ಆಯ್ದುಕೊಳ್ಳಿರಿ. ಶಿವನ ಧ್ಯಾನ ಮಾಡಿ ಜೀವನವನ್ನು ಹಸನು ಮಾಡಿಕೊಳ್ಳಿರಿ ಎಂದರು.
ಅಬ್ಬಿಗೇರಿ ಸಿದ್ದರ ಬೆಟ್ಟದ ವೀರಭದ್ರ ಶ್ರಿಗಳು, ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಯಡಿಯೂರಿನ ರೇಣುಕ ಶಿವಾಚಾರ್ಯ ಸ್ವಾಮೀಜಿ, ಮಳಲಿ ಡಾ. ನಾಗಭೂಷಣ ಶಿವಾಚಾರ್ಯರು, ನಾಗವಂದ ಶಿವಯೋಗಿ ಶಿವಾಚಾರ್ಯರು, ಸಂಗೊಳ್ಳಿ ಗುರುಲಿಂಗ ಶಿವಾಚಾರ್ಯರು ಇತರರು ಇಷ್ಟಲಿಂಗ ಮಹಾಪೂಜೆಯಲ್ಲಿ ಪಾಲ್ಗೊಂಡಿದ್ದರು. ಯರೇಬೇಲೇರಿ, ಕುರಡಗಿ, ನಾಗರಾಳ ಹಾಗೂ ಅಬ್ಬಿಗೇರಿ ಗ್ರಾಮದ 1ನೇ ವಾರ್ಡ್‌ನ ಮಹಿಳೆಯರು ಕುಂಭಗಳ ಮೂಲಕ ಉದ್ರೋದಕ ತೆಗೆದುಕೊಂಡು ಪೂಜೆಯಲ್ಲಿ ಪಾಲ್ಗೊಂಡಿದ್ದರು.