ಮಂಡ್ಯ: ಬಯಲಿನಲ್ಲಿ ಮಲವಿಸರ್ಜನೆ ಮಾಡುವುದು, ಮಕ್ಕಳು ಮಹಿಳೆಯರು ಬರಿಗಾಲಿನಲ್ಲಿ ಓಡಾಡುವುದರಿಂದ ಜಂತುಹುಳು ಹೆಚ್ಚಾಗುತ್ತದೆ. ಅಂತೆಯೇ ರಕ್ತಹೀನತೆಗೆ ಜಂತುಹುಳು ಕಾರಣವಾಗುತ್ತದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಟಿ.ಎನ್.ಧನಂಜಯ ಅವರು ತಿಳಿಸಿದರು.
ನಗರದ ಆರ್.ಟಿಒ ಸ್ಲಂನ ಅಂಗನವಾಡಿ ಕೇಂದ್ರದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ರಕ್ತಹೀನತೆ ಉಂಟಾದಾಗ ಮಗುವಿನ ಬೆಳವಣಿಗೆ, ಬುದ್ಧಿಶಕ್ತಿ, ಕಲಿಕಾ ಸಾಮರ್ಥ್ಯ ಕುಂಠಿತವಾಗುತ್ತದೆ. ಈ ಹಿನ್ನೆಲೆ ರಕ್ತಹೀನತೆಗೆ ಮೂಲ ಕಾರಣವಾದ ಜಂತುಹುಳುಗಳನ್ನು ನಿರ್ಮೂಲನೆ ಮಾಡಲು ರಾಷ್ಟ್ರೀಯ ಜಂತುಹುಳು ನಿವಾರಣ ದಿನವನ್ನಾಗಿ ವರ್ಷದಲ್ಲಿ ಎರಡು ಬಾರಿ ಫೆಬ್ರವರಿ ಮತ್ತು ಆಗಸ್ಟ್ ಕಳೆದ ನಾಲ್ಕು ವರ್ಷಗಳಿಂದ ನಿರಂತರವಾಗಿ ಆಚರಿಸುತ್ತಿದ್ದೇವೆ ಎಂದು ಹೇಳಿದರು.
ಪ್ರತಿ ಮಗುವಿಗೆ 2ವರ್ಷ ಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಅವರಿಗೆ 400 ಎಂಜಿ ಆಲ್‍ಬೆಂಡಾಜೋಲ್ ಮಾತ್ರೆಯನ್ನು ನೀಡಲಾಗುವುದು. ಇದರಿಂದ 6 ತಿಂಗಳುಗಳ ಕಾಲ ಮಕ್ಕಳಿಗೆ ಜಂತು ಹುಳು ಇದ್ದರೆ ಅಥವಾ ಮುಂದೆ ಬರುವುದು ನಾಶವಾಗಿ ರಕ್ತಹೀನತೆಯಿಂದ ಸುಧಾರಿಸಬಹುದು ಎಂದರು. ಡಾ.ಅನಿಲ್ ಕುಮಾರ್, ಡಾ.ಆಶಾಲತಾ, ಡಾ.ಭವಾನಿ ಶಂಕರ್, ಡಾ.ಶಶಿಧರ್, ಡಾ.ಜವರೇಗೌಡ, ಡಾ.ವೇಣುಗೋಪಾಲ್ ಇತರರಿದ್ದರು.