ಕೆ.ಆರ್.ನಗರ : ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಪಟ್ಟಣದ ಶ್ರೀ ಕೃಷ್ಣ ದೇವಸ್ಥಾನದಲ್ಲಿ ಇತ್ತೀಚೆಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಶಾಲಾ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ, ದಾಸರ ಪದಗಳ ಸ್ಪರ್ಧೆ ಆಯೋಜಿಸಲಾಗಿತ್ತು. ಶ್ರೀ ಕೃಷ್ಣ ಪ್ರತಿಷ್ಠಾನದಿಂದ ಪುಟಾಣಿಗಳಿಗೆ ಶ್ರೀಕೃಷ್ಣ, ರಾಧೆ ವೇಷ ಸ್ಪರ್ಧೆ ನಡೆಯಿತು. ಸುಮಾರು 250ಕ್ಕೂ ಹೆಚ್ಚು ಮಕ್ಕಳು ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.
ದೇಗುಲವನ್ನು ವಿವಿಧ ಪುಷ್ಪಗಳಿಂದ ಅಲಂಕರಿಸಲಾಗಿತ್ತು. ಸಮಿತಿ ಸದಸ್ಯರಿಂದ ಶ್ರೀ ವಿಷ್ಣು ಸಹಸ್ರನಾಮ ಹಾಗೂ ಲಕ್ಷ ತುಳಸಿ ಅರ್ಚನೆ ನೆರವೇರಿತು. ಮಧ್ಯಾಹ್ನ ವಿಶೇಷ ಪೂಜೆ, ಪ್ರಸಾದ ವಿನಿಯೋಗ ನಡೆಯಿತು.
ಸಂಜೆ ನಡೆದ ಬಾಲ ಗೋಕುಲ ಮೆರವಣಿಗೆಯಲ್ಲಿ ನೂರಕ್ಕೂ ಹೆಚ್ಚು ಮಕ್ಕಳು ಶ್ರೀ ಕೃಷ್ಣ ಮತ್ತು ರಾಧೆ ವೇಷ ಧರಿಸಿ ಮೆರವಣಿಗೆಯಲ್ಲಿ ಸಾಗಿದರು. ಶ್ರೀ ಕೃಷ್ಣ ನಾಮಸ್ಮರಣೆಯ ತಾಳಕ್ಕೆ ಹೆಜ್ಜೆ ಹಾಕಿ ಕುಣಿದು ಕುಪ್ಪಳಿಸಿದರು. ಜತೆಗೆ ಭಜನಾ ಮಂಡಳಿಯ ಮಹಿಳಾ ಸದಸ್ಯರು ಭಜನೆಗೆ ಕುಣಿದದ್ದು ವಿಶೇಷವಾಗಿತ್ತು.
ಮೆರವಣಿಗೆ ನಂತರ ಶ್ರೀಕೃಷ್ಣ ಮತ್ತು ರಾಧಾ ವೇಷಧಾರಿಗಳಿಗೆ ಮೊಸರು ಕುಡಿಕೆ ಒಡೆಯುವ ಸ್ಪರ್ಧೆ ಆಯೋಜಿಸಲಾಗಿತ್ತು. ವೇಷಧಾರಿ ಮಕ್ಕಳು ಮೊಸರು ಕುಡಿಕೆ ಒಡೆಯುವುದರಲ್ಲಿ ಭಾಗವಹಿಸಿ ನಲಿದು ಸಂತಸಪಟ್ಟರು.
ಸಭಾ ಕಾರ್ಯಕ್ರಮದಲ್ಲಿ ಸಮಿತಿಯ ಗೌರವ ಅಧ್ಯಕ್ಷ ಡಾ.ಮೋಹನ್ ದಾಸ್ ಭಟ್, ಪ್ರತಿಷ್ಠಾನದ ಅಧ್ಯಕ್ಷ ಕೃಷ್ಣ ಚೆಲ್ಲ, ಮಾಜಿ ಅಧ್ಯಕ್ಷ ಡಾ.ಜನಾರ್ದನ ಭಟ್, ಕಾರ್ಯದರ್ಶಿ ಎ.ಚೈತನ್ಯಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸ್ಪರ್ಧಿಗಳಿಗೆ ಬಹುಮಾನ ವಿತರಿಸಲಾಯಿತು.
ಶ್ರೀ ಕೃಷ್ಣ ದೇವಸ್ಥಾನದ ಗೋಪುರಕ್ಕೆ ದೇಣಿಗೆ ನೀಡಿದವರನ್ನು ಗೌರವಿಸಲಾಯಿತು. ಸಮಿತಿಯ ಉಪಾಧ್ಯಕ್ಷ ಮೋಹನ್ ರಾವ್, ಖಜಾಂಚಿ ಪಿ. ಕೃಷ್ಣಮೂರ್ತಿ, ಸಹ ಕಾರ್ಯದರ್ಶಿ ಡಾ.ಗೋವರ್ಧನಾಚಾರ್, ವ್ಯವಸ್ಥಾಪಕ ಕೃಷ್ಣ ಭಟ್, ವಾದಿರಾಜ ಪುರಾಣಿಕ್, ತ್ರಿವಿಕ್ರಮಾಚಾರ್ಯ, ಜೋಗಿತ್ತಾಯ, ನಿವೃತ್ತ ಪ್ರಾಂಶುಪಾಲ ಯು.ಎ.ನಾಗರಾಜ್, ಕೆ.ನಾಗೇಶ್, ಕೇಶವ, ರಮೇಶ್, ಸದಾನಂದ, ರಿಷಿಕೇಶ್, ಸೀತಾರಾಮ್, ನರಸಿಂಹ, ಮಾಧವ ವೈಲಾಯ, ಜನ್ನ, ಆಟೋ ಶಂಕರ್, ರಾಘವೇಂದ್ರ ಪ್ರಸಾದ್, ವಾದಿ, ಹರ್ಷ ರಿಷಿಕೇಶ್, ಕಾರ್ ರಮೇಶ್, ಸತ್ಯವತಿ ರಮೇಶ್, ಶೋಭಾ ರಿಷಿಕೇಶ್ ಸೇರಿದಂತೆ ಭಜನಾ ಮಂಡಳಿಯ ಮಹಿಳಾ ಸದಸ್ಯರು ಪಾಲ್ಗೊಂಡಿದ್ದರು.