ವಿಜಯಪುರ: ಸಿಇಟಿ ಪರೀಕ್ಷೆ ವೇಳೆ ಜನಿವಾರ ತೆಗೆಯಲು ಹೇಳಿದ್ದಲ್ಲದೇ ಪರೀಕ್ಷೆಗೆ ಅವಕಾಶ ಕಲ್ಪಿಸದೆ ಅವಮಾನ ಮಾಡಿದ ಅಧಿಕಾರಿ ಮೇಲೆ ಕ್ರಮಕ್ಕೆ ಆಗ್ರಹಿಸಿ ಬ್ರಾಹ್ಮಣ ಸಮುದಾಯದ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಶನಿವಾರ ಬೃಹತ್ ಪ್ರತಿಭಟನೆ ನಡೆಸಿದರು.
ನಗರದ ವಿವಿಧ ಭಾಗಗಳಲ್ಲಿ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಘೋಷಣೆ ಮೊಳಗಿಸಿದರು. ಬಳಿಕ ಬೃಹತ್ ಮೆರವಣಿಗೆ ಮೂಲಕ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿ ಜಿಲ್ಲಾಡಳಿತ ಕಚೇರಿ ತಲುಪಿ ಸಮಾವೇಶಗೊಂಡರು. ಸರ್ಕಾರದ ವಿರುದ್ಧ ಹರಿಹಾಯ್ದರಲ್ಲದೇ ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಕೂಡಲೇ ತಪ್ಪಿತಸ್ಥರ ಅಧಿಕಾರಿ ಮೇಲೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ಬ್ರಾಹ್ಮಣ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು, ‘ಶಿವಮೊಗ್ಗ, ಬೀದರ್, ಬೆಂಗಳೂರು ಕೇಂದ್ರಗಳಲ್ಲಿ ಕೆಲ ಪರೀಕ್ಷಾರ್ಥಿಗಳು ಧರಿಸಿದ್ದ ಜನಿವಾರ ತೆಗೆಯಿಸಿ ಕಸದ ಬುಟ್ಟಿಗೆ ಹಾಕಿರುವುದು ಅವಮಾನಕರ ಸಂಗತಿ. ಜನಿವಾರ ಧರಿಸುವ ಸಮಾಜಗಳಿಗೆ ಅವಹೇಳನ ಮಾಡಿದಂತಾಗಿದೆ. ಕೂಡಲೇ ಸರ್ಕಾರ ಕ್ಷಮೆ ಯಾಚಿಸಬೇಕು’ ಎಂದರು.
ರಾಜ್ಯದಲ್ಲಿ ಜಾತಿಯ ವಿಷ ಬೀಜ ಬಿತ್ತುತ್ತಿರುವ ಸರ್ಕಾರವೇ ಇದಕ್ಕೆ ಕಾರಣವಾಗಿದೆ. ವಿಪ್ರ ಸಮಾಜ ಯಾರ ತಂಟೆಗೂ ಹೊಗುವುದಿಲ್ಲ. ಅದರೂ ಮೇಲಿಂದ ಮೇಲೆ ಸಮಾಜಕ್ಕೆ ಅವಮಾನಿಸುವ ಘಟನೆ ನಡೆಯುತ್ತಲೇ ಇವೆ. ಜನಿವಾರ ಬಿಚ್ಚಿಸಿರುವುದು ಖಂಡನೀಯ, ಅಮಾನವೀಯ, ಮುಖ್ಯಮಂತ್ರಿ, ಗೃಹಮಂತ್ರಿ, ಶಿಕ್ಷಣ ಮಂತ್ರಿಗಳು ಇದಕ್ಕೆ ಹೊಣೆಯಾಗಿದ್ದಾರೆ. ಜನಿವಾರ ಬಿಚ್ಚದೆ ಪರೀಕ್ಷೆಯಿಂದ ವಂಚಿತನಾದ ವಿದ್ಯಾರ್ಥಿಗೆ ಮರಳಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಬೇಕು. ನಮಗಾಗಿರುವ ಅಪಮಾನ ಸಹಿಸಲಸಾಧ್ಯವಾದದ್ದು ಎಂದರು.
ಸಂಘದ ರಾಜ್ಯಾಧ್ಯಕ್ಷ ಆನಂದ ಜೋಶಿ, ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘದ ರಾಷ್ಟ್ರೀಯ ಅಧ್ಯಕ್ಷ ಗೋವಿಂದ ಕುಲಕರ್ಣಿ, ರಾಜ್ಯ ಉಪಾಧ್ಯಕ್ಷ ರಾಘವೇಂದ್ರ ಆಲಗೂರ, ಜಿಲ್ಲಾಧ್ಯಕ್ಷ ಮುಕುಂದ ಕುಲಕರ್ಣಿ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಜಿಲ್ಲಾ ಪ್ರತಿನಿಧಿ ಸತೀಶ್ಚಂದ್ರ ಕುಲಕರ್ಣಿ, ಸಮಸ್ತ ಬ್ರಾಹ್ಮಣ ಸಮಾಜ ಸೇವಾ ಸಂಘದ ಅಧ್ಯಕ್ಷ ಅರವಿಂದ ಜೋಶಿ, ಚಿದಂಬರ ಸೇವಾ ಸಂಘದ ಅಧ್ಯಕ್ಷ ಲಕ್ಷ್ಮಿಕಾಂತ ಕುಲಕರ್ಣಿ, ಸಂತೋಷ ದೇಶಪಾಂಡೆ, ವಿ.ಕೆ. ಕುಲರ್ಣಿ, ಜಯಶ್ರೀ ಕನ್ನೂರ, ಪ್ರಕಾಶ ಅಕ್ಕಲಕೋಟ, ಕಷ್ಣಾ ಗುನ್ಹಾಳಕರ, ವಿಶ್ವನಾಥ ಕುಲಕರ್ಣಿ, ವಿಜಯ ಜೋಶಿ, ಉಲ್ಲಾಸ ಪಾಟೀಲ, ಸುಧೀದ್ರ ಕುಲಕರ್ಣಿ, ಎ.ಎಂ. ದೇಸಾಯಿ, ಆನಂದ ಕುಲಕರ್ಣಿ, ಪ್ರಶಾಂತ ದೇಶಪಾಂಡೆ, ಗಿರೀಶ ಅಕ್ಕಲಕೋಟ, ಗೋವಿಂದ ದೇಶಪಾಂಡೆ, ರೋಹನ ಆಪ್ಟೆ, ವಿಕಾಸ ಪದಕಿ, ವಲ್ಲಭ ಮನಗೂಳಿ, ವಿಜಯಕುಮಾರ ಕೋರವಾಲ, ಪ್ರಸನ್ನ ಗುಮಾಸ್ತೆ, ಶಶಿ ಚಬನೂರ, ಉಮೇಶ ಕುಲಕರ್ಣಿ, ಪಂ.ಸಂಜೀವಾಚರ‌್ಯ ಬುರ‌್ಲಿ, ಪಂ.ಅಕ್ಷೋಭ್ಯಾಚರ‌್ಯ, ಹರೀಶ ಜೋಶಿ, ಕೃಷ್ಣ ಬಾಬುರಾವ ಕುಲಕರ್ಣಿ, ರಾಘವೇಂದ್ರ ಕುಲಕರ್ಣಿ, ನಾರಾಯಣ ಜಹಾಗೀರದಾರ, ರಾಘವೇಂದ್ರ ಜಹಾಗೀರದಾರ, ಗೋವಿಂದ ಕುಲಕರ್ಣಿ, ವಿದ್ಯಾ ಕುಲಕರ್ಣಿ, ಜಯಶ್ರೀ ಕುಲಕರ್ಣಿ, ಜಯಶ್ರೀ ಇಂಗಳೇಶ್ವರ, ಸವಿತಾ ಗಲಗಲಿ, ವಿಜಯಲಕ್ಷ್ಮಿ ದೇಶಪಾಂಡೆ ಮತ್ತಿತರರಿದ್ದರು.