ಜಿಲ್ಲೆ

ಪಡಿತರ ಕಾರ್ಡ್ ತೆಗೆದಿರುವುದಕ್ಕೆ ಆಕ್ರೋಶ: ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಪ್ರತಿಭಟನೆ

ಕೆ.ಎನ್.ರಾಘವೇಂದ್ರ

ಮಂಡ್ಯ: ಜನಸಾಮಾನ್ಯರ ಪಡಿತರ ಕಾರ್ಡ್‌ಗಳನ್ನು ಬಿಪಿಎಲ್ ಪಧಿಯಿಂದ ಮಾಹಿತಿ ನೀಡದೇ ತೆಗೆದು ಹಾಕಿರುವ ರಾಜ್ಯಸರ್ಕಾರದ ನಡೆ ಖಂಡಿಸಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಕಾರ್ಯಕರ್ತೆಯರು ನಗರದ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಸರ್‌ಎಂ.ವಿ.ಪ್ರತಿಮೆ ಎದುರು ಜಮಾಯಿಸಿದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದರು. ಕೇಂದ್ರ ಸರ್ಕಾರ ಆಧಾರ್ ಮತ್ತು ಪ್ಯಾನ್‌ಕಾರ್ಡ್ ಜೋಡಣೆಯನ್ನು ಕಡ್ಡಾಯ ಮಾಡಿ ಆದೇಶ ಹೊರಡಿಸಿದೆ. ಗಡುವು ಮೀರಿದ ನಂತರ ಪ್ಯಾನ್‌ಕಾರ್ಡ್ ಅನೂರ್ಜಿತಗೊಳಿಸುವ ಆದೇಶ ಮಾಡಿತ್ತು. ಪರಿಣಾಮ ಬಹುಸಂಖ್ಯಾತ ಸಾಮಾನ್ಯ ಜನರಿಗೆ ಆಧಾರ್ ಮಾಹಿತಿ ಇರಲಿಲ್ಲ. ಈ ಕಾರಣದಿಂದಾಗಿ ಉಚಿತವಾಗಿ ಜೋಡಣೆ ಮಾಡುವ ಮುಗಿದ ನಂತರ ಸಾವಿರಾರು ಜನರು ವಿಳಂಬ ಶುಲ್ಕವನ್ನು ಪಾವತಿಸಿ ಪ್ಯಾನ್‌ಕಾರ್ಡ್ ಮತ್ತು ಆಧಾರ್ ಜೋಡಣೆ ಮಾಡಿಕೊಂಡರು. ಇದು ತೆರಿಗೆ ಇಲಾಖೆಗೆ ಹೋದ ಕಾರಣ ಇವರನ್ನು ತೆರಿಗೆದಾರರೆಂದು ಹೇಳಲಾಗಿದೆ ಎಂದು ಆರೋಪಿಸಿದರು.

ಆದಾಯ ತೆರಿಗೆದಾರರು ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್‌ಗಳನ್ನು ಪಡೆಯಲು ಅನರ್ಹರಾಗಿರುವುದರಿಂದ ಸರ್ಕಾರವು ಆಹಾರ ಮತ್ತು ನಾಗರಿಕ ಸೇವಾ ಇಲಾಖೆಯು ಅವರೆಲ್ಲರ ಬಿಪಿಎಲ್ ಅಂತ್ಯೋದಯ ಕಾರ್ಡ್‌ಗಳನ್ನು ರದ್ದು ಮಾಡಿದೆ. ಒಂದು ವರದಿ ಪ್ರಕಾರ ರಾಜ್ಯದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ರೇಷನ್ ಕಾರ್ಡ್ ರದ್ದಾಗಿದೆ. ಇದುವರೆವಿಗೂ ನೀಡುತ್ತಿದ್ದ ರೇಷನ್ ಬಡವರಿಗೆ ಸಿಗದಂತಾಗಿದೆ. ಆಧಾರ್ ಮತ್ತು ಪ್ಯಾನ್‌ಕಾರ್ಡ್ ಅಮಾನ್ಯವಾಗಿ ಜೋಡಣೆ ಮಾಡಿರುವುದರಿಂದ ಇಂತಹ ಪರಿಸ್ಥಿತಿಯನ್ನು ಜನರು ಎದುರಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೇಷನ್ ಪಡೆಯಲು ಮೊಬೈಲ್‌ಗೆ ಒಟಿಪಿ ತಡೆಯಿಡಿದಿರುವುದು ಸರಿಯಲ್ಲ. ಈಗ ಸರತಿ ಸಾಲಿನಲ್ಲಿ ಎರಡು ದಿನವಾದರೂ ಸರ್ವರ್ ಸಮಸ್ಯೆ ಎಂಬ ಕಾರಣದಿಂದ ಅದು ಆಗುತ್ತಿಲ್ಲ. ಕೂಲಿ ಕಾರ್ಮಿಕರ ಹೆಬ್ಬಟ್ಟಿನ ಗುರುತು ಸಹ ಸವೆದು ಹೋಗಿರುತ್ತದೆ. ಇದರಿಂದ ಅವರ ಬೆರಳಚ್ಚು ಸಹ ತೆಗೆದುಕೊಳ್ಳದ ಕಾರಣಕ್ಕೆ ರೇಷನ್ ಪಡೆಯಲಾಗುತ್ತಿಲ್ಲ. ಇಂತಹ ಅನಧಿಕೃತ ಯೋಜನೆ ಬದಲಾವಣೆ ಮಾಡಿ ಮಾಮೂಲಿನಂತೆ ಒಟಿಪಿ ಮತ್ತು ಅದಕ್ಕಿಂತ ಸುಲಭವಾಗುವಂತ ಯೋಜನೆ ಜಾರಿ ಮಾಡಿ ಬಡವರಿಗೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸಂಘಟನೆಯ ರಾಜ್ಯ ಕಾರ್ಯದರ್ಶಿ ದೇವಿ, ಜಿಲ್ಲಾ ಕಾರ್ಯದರ್ಶಿ ಸುಶೀಲಾ, ಉಪಾಧ್ಯಕ್ಷೆ ಶೋಭಾ, ಪ್ರೇಮಾ, ಚಂದ್ರಮ್ಮ, ಮಂಜುಳಾ, ರಾಣಿ, ಮಂಜುಳಾ ನಾಗಮಂಗಲ, ಮಂಗಳಮ್ಮ, ಜಯಮ್ಮ ಇತರರಿದ್ದರು.