oppo_0 
ಜಿಲ್ಲೆ

ನರೇಗಾ ಕಾಯ್ದೆ ಸಮರ್ಪಕ ಜಾರಿಗೊಳಿಸಿ: ಜನವಾದಿ ಮಹಿಳಾ ಸಂಘಟನೆ ಪ್ರತಿಭಟನೆ

ಕೆ.ಎನ್.ರಾಘವೇಂದ್ರ

ಮಂಡ್ಯ: ಉದ್ಯೋಗ ಖಾತ್ರಿ ಕಾಯ್ದೆ ಸಮರ್ಪಕ ಜಾರಿಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಕಾರ್ಯಕರ್ತರು ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಎದುರು ಜಮಾಯಿಸಿದ ಕಾರ್ಯಕರ್ತರು ಜಿ.ಪಂ. ಕಚೇರಿವರೆಗೆ ಮೆರವಣಿಗೆ ನಡೆಸಿದರು. ನಂತರ ಘೋಷಣೆ ಕೂಗಿ ಧರಣಿ ನಡೆಸಿದರು. ಕಾಯಕ ಬಂಧುಗಳಿಗೆ ಪ್ರೋತ್ಸಾಹ ಧನ ನೀಡಲು ಹಾಗೂ ಕಡಿಮೆ ಕೂಲಿ ನಿಗದಿಗೊಳಿಸಿ, ಕೂಲಿಕಾರರು ಕೆಲಸಕ್ಕೆ ಬರದಂತೆ ಮಾಡುತ್ತಿರುವ ವಂಚನೆ ನಿಲ್ಲಬೇಕು. ಬರಗಾಲದ ಈ ಹೊತ್ತಿನಲ್ಲಿ ವರ್ಷಕ್ಕೆ 200 ದಿನ ಕೆಲಸ ನೀಡುವುದರ ಜತೆಗೆ 600 ರೂ.ಗೆ ಕೂಲಿ ಹಣ ಹೆಚ್ಚಿಸಬೇಕು. ತಕ್ಷಣ ಜಿಲ್ಲೆಯಾದ್ಯಂತ ಕೆಲಸ ನೀಡಬೇಕು. ಕೆಲವು ಗ್ರಾಮ ಪಂಚಾಯಿತಿಗಳಲ್ಲಿ ಉದ್ದೇಶ ಪೂರ್ವಕವಾಗಿ ಕಡಿಮೆ ಕೂಲಿ ನಿಗದಿಮಾಡಿ ಕೆಲಸಕ್ಕೆ ಬಾರದಂತೆ ತಡೆಗಟ್ಟುವ ಹುನ್ನಾರ ನಡೆಸುತ್ತಿದ್ದಾರೆ. ಇದು ನಿಲ್ಲಬೇಕು ಎಂದು ಒತ್ತಾಯಿಸಿದರು.

ಕಳೆದ ಆರು ತಿಂಗಳ ಕಾಯಕ ಬಂಧುಗಳ ಪ್ರೋತ್ಸಾಹ ಧನ ನೀಡಬೇಕು. ಎನ್‌ಎಂಎಂಎಸ್ ಆ್ಯಪ್ ಮೂಲಕ ಹಾಜರಾತಿ ಹಾಕುವುದನ್ನು ಕೈಬಿಡಬೇಕು. ಎನ್‌ಎಂಎಂಎಸ್ ಆ್ಯಪ್ ಮೂಲಕ ಹಾಕುವ ಹಾಜರಾತಿ ಜಿಪಿಎಸ್ ಸ್ಥಳದಲ್ಲೇ ಓಪನ್ ಆಗುತ್ತದೆ. ಆದರೆ ಬೇರೆ ಜಾಗದಲ್ಲಿ ಓಪನ್ ಆಗುವುದಿಲ್ಲ ಎಂಬುದನ್ನು ಕೈಬಿಡಬೇಕು. ಕೂಲಿ ಕೆಲಸ ಮಾಡುವ ಎಲ್ಲ ಸ್ಥಳದಲ್ಲಿ ಓಪನ್ ಆಗುವ ರೀತಿ ಮಾಡಬೇಕು. ಕಾಯಕ ಬಂಧುಗಳು ಹಾಜರಾತಿ ಹಾಕಿಕೊಳ್ಳುತ್ತೇವೆ ಎನ್ನುವ ಕಡೆ ಪಂಚಾಯಿತಿಯಿಂದ ನೌಕರರನ್ನು ನೇಮಿಸಿಕೊಳ್ಳಬೇಕಾಗಿಲ್ಲ. ಕಾಯಕ ಬಂಧುಗಳು ಜವಾಬ್ದಾರಿ ನಿರ್ವಹಿಸಲು ಅವಕಾಶ ಕೊಡಬೇಕು. ಕೆಲಸ ಮಾಡುವ ಸ್ಥಳದಲ್ಲಿ ಕುಡಿಯುವ ನೀರು, ನೆರಳಿನ ವ್ಯವಸ್ಥೆ, ಪ್ರಥಮ ಚಿಕಿತ್ಸೆ ಪೆಟ್ಟಿಗೆ ನೀಡಬೇಕು. ಕಂಪ್ಯೂಟರ್ ಆಪರೇಟರ್ ಬೇಜವಾಬ್ದಾರಿತನದಿಂದ ಎನ್‌ಎಂಆರ್ ಜೀರೋ ಮಾಡುವುದು ಮತ್ತು ಎನ್‌ಎಂಆರ್ ತೆಗೆಯುವಾಗ ಕೂಲಿಕಾರರ ಹೆಸರನ್ನು ಕೈಬಿಡಬೇಕು. ಒಟ್ಟು ಕುಟುಂಬದಲ್ಲಿ ಇರುವ ಜಾಬ್‌ಕಾರ್ಡ್‌ನ್ನು ವಿಭಾಗದ ನಂತರ ರೇಷನ್ ಕಾರ್ಡ್ ಆಧಾರದ ಮೇಲೆ ಹೊಸ ಜಾಬ್ ಕಾರ್ಡ್ ನೀಡಬೇಕು ಎಂದು ಆಗ್ರಹಿಸಿದರು.

ನೀರಾವರಿ ಇಲಾಖೆ ವ್ಯಾಪ್ತಿಗೆ ಬರುವ ಕೆರೆಗಳಿಗೆ ಖಾಸಗಿ ವ್ಯಕ್ತಿಗಳು ಜೆಸಿಬಿ ಮೂಲಕ ಮಣ್ಣು ತೆಗೆಯಲು ಅನುಮತಿ ನೀಡಬಾರದು, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ನಗರ ಪ್ರದೇಶಗಳಿಗೂ ವಿಸ್ತರಿಸಬೇಕು. ಬಾಕಿ ಇರುವ ಸಲಕರಣೆ ವೆಚ್ಚವನ್ನು ಕೂಡಲೇ ಬಿಡುಗಡೆ ಮಾಡಬೇಕು. ಜಿಲ್ಲೆಯಲ್ಲಿ ಕೆಲವು ಗ್ರಾಮ ಪಂಚಾಯಿತಿಗಳಲ್ಲಿ ಕ್ರಿಯಾ ಯೋಜನೆ ಮಾಡಿ ಕೆಲಸ ನಿಲ್ಲಿಸಿರುವ ಕಡೆ, ಟೆಂಡರ್ ನೆಪವೊಡ್ಡಿ ಕಾಮಗಾರಿ ಕೆಲಸ ಕೊಡದೇ ಸ್ಥಗಿತಗೊಳಿಸಿರುವ ಕಡೆ ತಕ್ಷಣ ಟೆಂಡರ್ ಕರೆದು ಕೆರೆ ಅಭಿವೃದ್ಧಿ ಪಡಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಂಘಟನೆಯ ರಾಜ್ಯ ಕಾರ್ಯದರ್ಶಿ ದೇವಿ, ಜಿಲ್ಲಾಧ್ಯಕ್ಷೆ ಡಿ.ಕೆ.ಲತಾ, ಕಾರ್ಯದರ್ಶಿ ಸುಶೀಲಾ, ಖಜಾಂಚಿ ರಾಣಿ, ಶೋಭಾ, ಜಯಶೀಲಾ, ಪುಟ್ಟಲಕ್ಷ್ಮಮ್ಮ, ಪ್ರೇಮಮ್ಮ, ಮಂಜುಳಾ ಇತರರಿದ್ದರು.